ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು
1 min readಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು
ಜಿಲ್ಲಾ ಉಸ್ತುವಾರಿ ಸಚಿವರ ಒತ್ತುವರಿಯೂ ತೆರುವು
ಆಂಜನೇಯರೆಡ್ಡಿ ಕಲ್ಯಾಣ ಮಂಟಪ, ಉದ್ಯಾನದ ಒತ್ತುವರಿ ತೆರುವು
ನಗರಸಭೆ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ
ಚಿಂತಾಮಣಿ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರುವು ಕಾರ್ಯಾಚರಣೆ ಮುಂದುವರಿದಿದೆ. ತೆರುವು ಕಾರ್ಯಾಚರಣೆ ವೇಳೆ ಹಲವರು ನಗರಸಭೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದು, ಯಾವುದಕ್ಕೂ ಕಿವಿಗೊಡದೆ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಸಚಿವರಿಗೆ ಸೇರಿದ ಆಂಜನೇಯರೆಡ್ಡಿ ಕಲ್ಯಾಣ ಮಂಟಪ, ಆಂಜನೇಯರೆಡ್ಡಿ ಉದ್ಯಾನಗಳ ಒತ್ತುವರಿಯನ್ನೂ ತೆರುವುಗೊಳಿಸುವ ಮೂಲಕ ಒತ್ತಡಗಳಿಗೆ ಮಣಿಯದೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಚಿಂತಾಮಣಿ ನಗರ ವಾಣಿಜ್ಯ ನಗರಿ ಎಂದು ಖ್ಯಾತಿ ಪಡೆದಿದೆ. ಆದರೆ ನಗರದಲ್ಲಿ ಮಾತ್ರ ರಸ್ತೆಗಳು ಕಿರಿದಾಗಿದ್ದು, ನಗರದ ಸೌಂದರ್ಯವನ್ನೇ ಹಾಳುಗೆಡುವುತ್ತಿರುವುದು ಗುಟ್ಟಾಗಿಲ್ಲ. ಇನ್ನು ಸುವಿಶಾಲ ರಸ್ತೆ ಮತ್ತು ಫುಟ್‌ಪಾತ್‌ಗಳಿದ್ದರೂ ಅವುಗಳನ್ನು ಅಕ್ಕಪಕ್ಕದ ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡ ಪರಿಣಾಮ ರಸ್ತೆಗಳು ಕಿರಿದಾಗಿದ್ದವು. ಇದರಿಂದ ವಾಹನ ಸಂಚಾರ ಮಾತ್ರವಲ್ಲ, ಪಾದಚಾರಿಗಳ ಸಂಚಾರಕ್ಕೂ ತೀವ್ರ ತೊಂದರೆಯಾಗಿತ್ತು.
ಈ ರಸ್ತೆ ಒತ್ತುವರಿ ಸಮಸ್ಯೆ ಅನ್ನೋದು ಕಳೆದ ಹಲವು ದಶಗಳಿಂದಲೂ ಇದ್ದರೂ ಅವನ್ನು ತೆರುವುಗೊಳಿಸಲು ಯಾರೂ ಮುಂದಾಗಿರಲಿಲ್ಲ. ಇದಕ್ಕೆ ಕಾರಣ ವೋಟ್ ಬ್ಯಾಂಕ್ ರಾಜಕೀಯ. ಆದರೆ ಇದೀಗ ಡಾ.ಎಂ.ಸಿ. ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ನಗರದ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ, ಚಿಂತಾಮಣಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು, ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಬದಲಿಸಲು ಪಣ ತೊಟ್ಟಿದ್ದಾರೆ.
ಅದರ ಭಾಗವಾಗಿಯೇ ಚಿಂತಾಮಣಿ ಕ್ಷೇತ್ರಕ್ಕೆ ಈಗಾಗಲೇ ಐಸ್‌ಕ್ರೀಂ ಫ್ಯಾಕ್ಟರಿ ಮಂಜೂರು ಮಾಡಿಸಿದ್ದು, ಯುಜಿಡಿ ನಿರ್ಮಾಣಕ್ಕಾಗಿ ಕೋಟ್ಯಂತರ ರುಪಾಯಿ ಅನುದಾನ ತಂದಿದ್ದಾರೆ. ಅಲ್ಲದೆ ಕೈಗಾರಿಕೆಗಳು, ರಸ್ತೆ ಅಭಿವೃಧ್ದಿüಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕಳೆದ 75 ವರ್ಷದಲ್ಲಿ ಕಾಣದ ಅಭಿವೃದ್ಧಿಯನ್ನು ಪ್ರಸ್ತುತ ಚಿಂತಾಮಣಿ ಕ್ಷೇತ್ರ ಕಾಣುತ್ತಿದ್ದು, ಚಿಂತಾಮಣಿ ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಒತ್ತುವರಿ ತೆರುವು ಕಾರ್ಯಾಚರಣೆಗೆ ಸಚಿವರು ಹಸಿರು ನಿಳಾನೆ ತೋರಿದ ಪರಿಣಾಮ ಕಳೆದ ಮೂರು ದಿನಗಳಿಂದ ಫುಟ್‌ಪಾತ್ ಒತ್ತುವರಿ ತೆರುವು ಕಾರ್ಯಾಚರಣೆ ಯಶಸ್ವಿಯಾಗಿ ನಡೆಯುತ್ತಿದೆ.
ಇನ್ನು ಒತ್ತುವರಿ ತೆರುವು ಕಾರ್ಯಾಚರಣೆ ವೇಳೆ ನಗರಸಭೆ ಅಧಿಕಾರಿಗಳು ಯಾವುದೇ ಪಕ್ಷಪಾತ ಧೋರಣೆ ಅನುಸರಿಸುತ್ತಿಲ್ಲ ಎಂಬುದಕ್ಕೆ ಇಂದು ತೆರುವುಗೊಳಿಸಿದ ಪ್ರದೇಶಗಳೇ ನಿದರ್ಶನವಾಗಿವೆ. ಸ್ವತಹ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೇರಿದ ಆಂಜನೇಯರೆಡ್ಡಿ ಕಲ್ಯಾಣ ಮಂಟಪ ಮತ್ತು ಆಂಜನೇಯರೆಡ್ಡಿ ಉದ್ಯಾನದ ಮುಂದೆ ನಿರ್ಮಿಸಿದ್ದ ಅಂಗಡಿ ಮಳಿಗೆಗಳವರು ಒತ್ತುವರಿ ಮಾಡಿಕೊಂಡಿದ್ದ ಫುಟ್‌ಪಾತ್ ಜಾಗವನ್ನು ಯಾವುದೇ ಮುಲಾಜಿಲ್ಲದೆ ತೆರುವುಗೊಳಿಸಲಾಯಿತು. ಇದರಿಂದ ಪಕ್ಷಾತೀತವಾಗಿ ತೆರುವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಸಂದೇಶವನ್ನು ನಗರಸಭೆ ಪೌರಾಯುಕ್ತ ಚಲಪತಿ ನೀಡಿದರು.
ಒತ್ತುವರಿ ತೆರುವು ವೇಳೆ ರಸ್ತೆಯಲ್ಲಿ ಮದ್ಯದ ಅಂಗಡಿಗಳವರು ರಾಜಾರೋಷವಾಗಿ ನೆಟ್ಟಿದ್ದ ನಾಮಫಲಕಗಳನ್ನು ತೆ ರುವುಗೊಳಿಸಲು ನಗರಸಭೆ ಅಧಿಕಾರಿಗಳು ಮುಂದಾದ ವೇಳೆ ಮದ್ಯದ ಅಂಗಡಿ ಹುಡುಗರಿಂದ ವಿರೋಧ ವ್ಯಕ್ತವಾಯಿತು. ಈ ವೇಳೆ ಮದ್ಯದ ಅಂಗಡಿ ಹುಡುಗರು ಮತ್ತು ನಗರಸಭೆ ಅಧಿಕಾರಿಗಳ ನಡುವೆ ಮಾತಿನ ಚಕಮಖಿಯೂ ನಡೆಯಿತು. ಈ ವಿಚಾರ ತಿಳಿದ ಪೌರಾಯುಕ್ತ ಚಲಪತಿ, ಸ್ಥಳಕ್ಕೆ ಅಧಿಕಾರಿಳೊಂದಿಗೆ ಆಗಮಿಸಿ, ನಗರದ್ಯಾಂತ ಫುಟ್ ಪಾತ್ ತೆರುವುಗೊಳಿಸುತ್ತಿರುವುದು ಕಾಣುತ್ತಿಲ್ಲವೇ, ನಾಮಫಲಕ ರಸ್ತೆಯಲ್ಲಿ ಹಾಕಿರುವುದನ್ನು ತೆರುವು ಗೊಳಿಸಿದರೆ ಪ್ರಶ್ನೆ ಮಾಡ್ತೀರಾ ಎಂದು ಗರಂ ಆದ ಕೂಡಲೇ ಬಾರ್ ಹುಡುಗರು ಮೌನವಾದರು. ಇದರಿಂದ ಮತ್ತೆ ತೆರುವು ಕಾರ್ಯಾಚರಣೆ ಮುಂದುವರಿಯಿತು.
ನಗರಸಭೆ ಅಧಿಕಾರಿಗಳ ತೆರುವು ಕಾರ್ಯಾಚರಣೆ ವೇಗ ಕಂಡು ಚಿಂತಾಮಣಿ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ರೀತಿಯಲ್ಲಿ ಇಡೀ ನಗರದ ಎಲ್ಲ ರಸ್ತೆಗಳ ಫುಟ್‌ಪಾತ್ ಒತ್ತುವರಿ ತೆರುವುಗೊಳಿಸಿದಲ್ಲಿ ಸುಂದರ ಚಿಂತಾಮಣಿ ಕಾಣಲು ಸಾಧ್ಯವಿದ್ದು, ಸಂಪೂರ್ಣವಾಗಿ ಚಿಂತಾಮಣಿ ನಗರದ ಒತ್ತುವರಿ ತೆರುವುಗೊಳಿಸುವವರೆಗೂ ಕಾರ್ಯಾಚರಣೆ ನಿಲ್ಲಿಸಬಾರದೆಂದು ನಾಗರಿಕರು ಮನವಿ ಮಾಡಿದ್ದಾರೆ.