ಕಾಂಗ್ರೆಸ್ ಹೈಕಮಾಂಡ್ ಖಡಕ್ ಸೂಚನೆ: ಸೈಲೆಂಟಾಗ್ತಾರಾ ರೆಬೆಲ್ಸ್?
1 min readಕಾಂಗ್ರೆಸ್ ರೆಬೆಲ್ಸ್ ಶಿಸ್ತುಪಾಲನೆ ಮಾಡುತ್ತಾರಾ ಅಥವಾ ಬಂಡಾಯ ಮುಂದುವರಿಸುತ್ತಾರಾ ಎಂಬ ಕುತೂಹಲ ಈಗ ರಾಜಕೀಯ ವಲಯದಲ್ಲಿ ಮನೆ ಮಾಡಿದೆ. ಹೈಕಮಾಂಡ್ ನಿನ್ನೆ ಸಭೆಯ ಬಳಿಕ, ಸಿದ್ದರಾಮಯ್ಯ ಆಪ್ತ ವಲಯದ ಬೆಂಬಲಿಗರೆಲ್ಲ ಇನ್ಮುಂದೆ ಸೈಲೆಂಟ್ ಆಗ್ತಾರಾ, ಸತೀಶ್ ಜಾರಕಿಹೊಳಿ ದುಬೈ ಪ್ರವಾಸ, ಹೆಚ್ಚುವರಿ ಡಿಸಿಎಂ ಪೋಸ್ಟ್ ಬೇಡಿಕೆ ಎಲ್ಲವೂ ರದ್ದಾಗುತ್ತ ಎಂಬ ಪ್ರಶ್ನೆ ಎದ್ದಿದೆ.
ಬೆಳಗಾವಿ ರಾಜಕೀಯ, ಹೆಚ್ಚುವರಿ ಡಿಸಿಎಂ, ಸಿಎಂ ಬದಲಾವಣೆ, ಸಂಪುಟ ಪುನಾರಚನೆ … ಹೀಗೆ ಸಾಲು ಸಾಲು ವಿವಾದಗಳು ಕಾಂಗ್ರೆಸ್ ಸರ್ಕಾರದ ಪಾಲಿಗೆ ಬಿಸಿ ಮುಟ್ಟಿಸುತ್ತಿದೆ. ಇಲಾಖೆ, ಕ್ಷೇತ್ರದ ಕೆಲಸ ಕಾರ್ಯಗಳಿಗೆ ಒತ್ತು ಕೊಡಬೇಕಾದ ಸಚಿವರು, ಶಾಸಕರು ವಿವಾದಾತ್ಮಕ ವಿಚಾರಗಳನ್ನೇ ಹೆಚ್ಚು ಹೆಚ್ಚಾಗಿ ಮಾಡನಾಡುತ್ತಿರುವುದರಿಂದ ಸಮಸ್ಯೆ ಉಲ್ಬಣಗೊಂಡಿತ್ತು. ಆದರೆ ಕೊನೆಗೂ ಈ ಸಮಸ್ಯೆಗೆ ಅಂತ್ಯ ಹಾಡಲು ಹೈಕಮಾಂಡ್ ಹೊರಟಿದ್ದು, ಈ ನಿಟ್ಟಿನಲ್ಲಿ ಖಡನ್ ಸೂಚನೆಯನ್ನು ನೀಡಿದೆ.
ಬುಧವಾರ ರಾಜ್ಯಕ್ಕೆ ಆಗಮಿಸಿದ ಹೈಕಮಾಂಡ್ ನಾಯಕರು ರೆಬೆಲ್ಸ್ ಸಚಿವರು, ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಹಿರಂಗ ಹೇಳಿಕೆಗಳನ್ನು ನೀಡಿದರೆ ಸೂಕ್ತ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ. ಸಚಿವ ಸ್ಥಾನಕ್ಕಾಗಿ ಶಾಸಕರು ಬೇಡಿಕೆ ಇಡುವುದು, ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದಕ್ಕೆ ಕೂಡಲೇ ಬ್ರೇಕ್ ಹಾಕುವಂತೆ ಸೂಚನೆ ನೀಡಿದ್ದಾರೆ.
ಹೈಕಮಾಂಡ್ ಏನೋ ಸೂಚನೆಯನ್ನು ಕೊಟ್ಟಿದೆ. ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾಂಗ್ರೆಸ್‌ನಲ್ಲಿ ಪರಿಣಾಮ ಬೀರಲಿದೆ? ಎಂಬುವುದು ಕುತೂಹಲದ ಸಂಗತಿಯಾಗಿದೆ. ಕಾರಣ ವಿವಾದ ಕೇಂದ್ರ ಬಿಂದು ಇರುವುದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆಯಾಗಿದೆ.
ಡಿಕೆ ಶಿವಕುಮಾರ್ ಡಿಸಿಎಂ ಆಗಿ ತಮ್ಮ ಪ್ರಭಾವವನ್ನು ಹೆಚ್ಚಾಗಿಯೇ ಬಳಸುತ್ತಿರುವುದು ಸಿದ್ದು ಬಣದ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಅವರು ಹೆಚ್ಚುವರಿ ಡಿಸಿಎಂ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರುವುದಾಗಿದೆ. ಆದರೆ ಇದು ಡಿಕೆಶಿ ಕೋಪಕ್ಕೆ ಕಾರಣವಾಗಿದೆ. ಹೈಕಮಾಂಡ್ ಬಳಿ ಈ ವಿಚಾರವನ್ನು ಡಿಕೆಶಿ ಖಾರವಾಗಿಯೇ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅದರಲ್ಲೂ ಸಚಿವ ಸತೀಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ, ಶಾಸಕ ಅಶೋಕ್ ಎಂ ಪಟ್ಟಣ, ಜಮೀರ್ ಅಹ್ಮದ್ ಖಾನ್, ಬಸವರಾಜ ರಾಯರೆಡ್ಡಿ ಸೇರಿದಂತೆ ಪ್ರಮುಖರು ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು ಡಿಕೆಶಿ ಜೊತೆಗೆ ಆಪ್ತರಾಗಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡಾ ಇದೀಗ ಸಿದ್ದು ಬಣದ ವಾದಕ್ಕೆ ಮನ್ನಣೆ ನೀಡುತ್ತಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಪರಮೇಶ್ವರ್ ಮನೆಯಲ್ಲಿ ನಡೆದ ಔತಣ ಕೂಟದಲ್ಲಿ ಭಾಗಿಯಾಗಿದ್ದಾರೆ. ಈ ಬದಲಾವಣೆಗೆ ಕೆ.ಎನ್ ರಾಜಣ್ಣ ಕಾರಣ ಎಂಬವುದು ಸಿದ್ದು ಆಪ್ತ ಮೂಲದ ಮಾಹಿತಿ.