‘ಕರ್ನಾಟಕ ಸಂಭ್ರಮ-50’ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆ: ಇಂದು ಹಂಪಿಯಲ್ಲಿ ಜ್ಯೋತಿ ರಥಯಾತ್ರೆಗೆ ಸಿಎಂ ಚಾಲನೆ
1 min read
ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿ 50 ವರ್ಷವಾಗಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಕರ್ನಾಟಕ ಸಂಭ್ರಮ-50’ ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗುರುವಾರ ಸಂಜೆ 5 ಗಂಟೆಗೆ ವಿಶ್ವಪರಂಪರೆ ತಾಣ ಹಂಪಿಯಲ್ಲಿ ಕರುನಾಡಿನ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಅವರು ವಿಶೇಷ ವಿಮಾನದ ಮೂಲಕ ಬೆಳಗ್ಗೆ 10.50ಕ್ಕೆ ಕೊಪ್ಪಳದ ಗಿಣಿಗೇರಾ ಏರ್ಸ್ಟ್ರಿಪ್ಗೆ ತೆರಳಲಿದ್ದಾರೆ.
10.55ಕ್ಕೆ ರಸ್ತೆ ಮಾರ್ಗವಾಗಿ ಹೊಸಪೇಟೆಗೆ ತೆರಳುತ್ತಾರೆ. 11.15ಕ್ಕೆ ಹೊಸಪೇಟೆ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5 ಗಂಟೆಗೆ ಹಂಪಿಗೆ ತೆರಳಿ 5.30ಕ್ಕೆ ಹಂಪಿಯ ಶ್ರೀ ವಿರುಪಾಕ್ಷ ದೇವಸ್ಥಾನದ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಕರ್ನಾಟಕ ಸಂಭ್ರಮ-50 ಜ್ಯೋತಿ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸಂಜೆ 5.50ಕ್ಕೆ ಅದೇ ಸ್ಥಳದಲ್ಲಿ ಕನ್ನಡಾಂಬೆಗೆ ನುಡಿನಮನ, ಧರ್ಮಗಳ ಸಂದೇಶ ಹಾಗೂ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಹಂಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಹಂಪಿಗೆ ತೆರಳಲಿರುವ ಸಿಎಂ, ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಗಂಗಾ ಜಲಾಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ದೇವಾಲಯದ ಪ್ರಾಂಗಣದಲ್ಲಿರುವ ಭುವನೇಶ್ವರಿ ದೇಗುಲದಲ್ಲಿ ಪಂಚಾಮೃತ ಅಭಿಷೇಕ ಸಹಿತ ಪೂಜೆ ನೆರವೇರಿಸುವರು. ನಂತರ, ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಜನಪದ ಕಲಾತಂಡಗಳೊಂದಿಗೆ ಕಾಲ್ನಡಿಗೆಯಲ್ಲೇ ಬಸವಣ್ಣ ಮಂಟಪ ವೇದಿಕೆಯವರೆಗೆ ಸಾಗಲಿದ್ದಾರೆ. ಈ ವೇಳೆ, ರಥ ಬೀದಿಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ನಡೆಯಲಿದೆ. ಬಳಿಕ, ಬಸವಣ್ಣ ಮಂಟಪ ವೇದಿಕೆಯಲ್ಲಿ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.