ಪಾಳು ಬಿದ್ದ ಉದ್ಯಾನದ ಪರಿಶೀಲಿಸಿದ ನಗರಸಭೆ
1 min readಪಾಳು ಬಿದ್ದ ಉದ್ಯಾನದ ಪರಿಶೀಲಿಸಿದ ನಗರಸಭೆ
ಅಧ್ಯಕ್ಷ, ಉಪಾಧ್ಯಕ್ಷ, ಆಯುಕ್ತರು ಭೇಟಿ ಪರಿಶೀಲನೆ
೫ನೇ ವಾರ್ಡಿನಲ್ಲಿರುವ ಉದ್ಯಾನಕ್ಕೆ ಕಾಯಕಲ್ಪ ಭರವಸೆ
ಕಸದ ತೊಟ್ಟಿಯಂತಾಗಿರುವ ನಗರಸಭೆ ಉದ್ಯಾನ
ಚಿಕ್ಕಬಳ್ಳಾಪುರ ನಗರಸಭೆ ಈವರೆಗೂ ಉದ್ಯಾನಗಳ ಅಭಿವೃದ್ಧಿಯತ್ತ ಗಮನ ಹರಿಸಿದ ಉದಾಹರಣೆಯೇ ಇಲ್ಲ. ನಗರದಲ್ಲಿ ಪ್ರಮುಖ ಉಧ್ಯಾನಗಳಿದ್ದರೂ ಅವುಗಳ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಆದರೆ ನಗರದ ೫ನೇ ವಾರ್ಡಿನಲ್ಲಿರುವ ಸಣ್ಣ ಉದ್ಯಾನವೊಂದರ ಕಾಯಕಲ್ಪಕ್ಕೆ ಇದೀಗ ನಗರಸಭೆ ಮುಂದಾಗಿರುವುದು ಇತರೆ ಉದ್ಯಾನಗಳ ಅಭಿವೃದ್ಧಿಯ ಆಸೆ ಚಿಗುರಿಸುವಂತೆ ಮಾಡಿದೆ.
ಹೌದು, ಚಿಕ್ಕಬಳ್ಳಾಪುರದಲ್ಲಿ ಉದ್ಯಾನ ಎಂದು ಕಾಣುವಂತಿರುವ ಏಕೈಕ ಪಾರ್ಕ್ ಚೆನ್ನಯ್ಯಪಾರ್ಕ್. ಅದನ್ನು ಹೊರತುಪಡಿಸಿ ನಗರದ ವಾರ್ಡುಗಳಲ್ಲಿ ಸಣ್ಣ ಸಣ್ಣ ಉದ್ಯಾನಗಳಿದ್ದರೂ ಅವು ನಿರ್ವಹಣೆ ಇಲ್ಲದೆ ಸೊರಗಿವೆ. ನಗರಸಭೆ ಕಚೇರಿಗೆ ಹೊಂದಿಕೊ0ಡೇ 10ನೇ ವಾರ್ಡಿನಲ್ಲಿರುವ ಉದ್ಯಾನ ಸುಸಜ್ಜಿತವಾಗಿ ನಿರ್ಮಿಸಿದ್ದರೂ ಅದರ ನಿರ್ವಹಣೆ ಮಾಡಿಲ್ಲ. ಇನ್ನು ೨೦ನೇ ವಾರ್ಡು, ೪ನೇ ವಾರ್ಡಿನಲ್ಲಿರುವ ಉದ್ಯಾನಗಳ ಸ್ಥಿತಿಯೂ ಅದ್ವಾನವಾಗಿದೆ.
ಇನ್ನು ನಗರದ ೫ನೇ ವಾರ್ಡಿನ ೮ನೇ ತಿರುವಿನಲ್ಲಿ ಒಂದು ಸಣ್ಣ ಉದ್ಯಾನವಿದೆ. ಈ ಉಧ್ಯಾನದ ಜಾಗವನ್ನು ಈ ಹಿಂದೆ ಬಲಾಢ್ಯರು ಒತ್ತುವರಿ ಮಾಡಿಕೊಂಡು, ಖಾತೆ ಮಡಿಸಿಕೊಳ್ಳಲೂ ಮುಂದಾಗಿದ್ದರು. ಆದರೆ ಕೆಲವರ ವಿರೋಧದಿಂದಾಗಿ ಈ ಜಾಗ ನಗರಸಭೆಗೆ ಉಳಿದಿದೆ. ಇಂತಹ ಜಾಗವನ್ನು ಉದ್ಯಾನವಾಗಿ ಅಭಿವೃದ್ಧಿಪಡಿಸಬೇಕು ಎಂದು 5ನೇ ವಾರ್ಡಿನ ಸದಸ್ಯ ನಾಗರಾಜ್ ಅವರು ಕೋರಿದ್ದು, ಈ ಜಾಗಕ್ಕೆ ಸುತ್ತ ಕಾಂಪೌ0ಡ್ ಹಾಕಿ ಉದ್ಯಾನ ಮಾಡಲು ಮುಂದಾಗಲಾಗಿತ್ತು.
ಆದರೆ ನಂತರದ ದಿನಗಳಲ್ಲಿ ನಗರಸಭೆ ಅನುದಾನ ಉಧ್ಯಾನಗಳಿಗೆ ಮೀಸಲಾಗಲೇ ಇಲ್ಲ. ಈ ಉದ್ಯಾನ ಅಭಿಯಾಗಲೂ ಇಲ್ಲ. ಆದರೆ ಇದೀಗ ಇದೇ ವಾರ್ಡಿನ ಸದಸ್ಯರಾಗಿರುವ ನಾಗರಾಜ್ ಅವರು ಪ್ರಸ್ತುತ ನಗರಸಭೆ ಉಪಾಧ್ಯಕ್ಷರಾಗಿದ್ದು, ಈ ಉದ್ಯಾನದ ಅಭಿವೃದ್ಧಿಗಾಗಿ ನಗರಸಭೆ ಆಯುಕ್ತರು ಮತ್ತು ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ಇದರಿಂದಾಗಿ ಇಂದು ನಗರಸಭೆ ಅಧಿಕಾರಿಗಳ ತಂಡ ಉದ್ಯಾನದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅಲ್ಲದೆ ಉಧ್ಯಾನವನ್ನು ಆದಷ್ಟು ಶೀಘ್ರದಲ್ಲಿ ಅಭಿವೃದ್ಧಿಪಡಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸುವ ಭರವಸೆಯನ್ನೂ ನೀಡಲಾಯಿತು. ನಗರಸಭೆ ಆಯುಕ್ತರಾದ ಮನ್ಸೀರ್ ಅಲಿ ಅವರು ಉದ್ಯಾನದ ಜಾಗ ಪರಿಶೀಲನೆ ನಡೆಸಿ ಮಾತನಾಡಿ, ನಗರಸಭೆಗೆ ಬರುವ ಅನುದಾನದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುವುದು. ಈ ಉದ್ಯಾನದಿಂದ ಸ್ಥಳೀಯ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ನಗರಸಭೆ ಅಧ್ಯಕ್ಷ ಗಜೇಂದ್ರ ಮಾತನಾಡಿ, ನಗರದ 5ನೇ ವಾರ್ಡಿನಲ್ಲಿ ನಗರಸಭೆಗೆ ಸೇರಿದ ಉದ್ಯಾನ ಇದ್ದು, ಈವರೆಗೂ ಇದು ಅಭಿವೃದ್ಧಿಯಾಗಿಲ್ಲ. ಹಾಗಾಗಿ ಆಯುಕ್ತರು ಮತ್ತು ಉಪಾಧ್ಯಕ್ಷರೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಆದಷ್ಟು ಶೀಘ್ರದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ಅರ್ಪಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಉಪಾಧ್ಯಕ್ಷ ಹಾಗೂ ವಾರ್ಡಿನ ಸದಸ್ಯ ನಾಗರಾಜ್ ಮಾತನಾಡಿ, ನಗರದ 5ನೇ ವಾರ್ಡಿನ ೮ನೇ ಅಡ್ಡರಸ್ತೆಯಲ್ಲಿ ಉದ್ಯಾನಕ್ಕಾಗಿ ಜಾಗ ಉಳಿಸಲಾಗಿದೆ. ಆದರೆ ಇದನ್ನು ಅಭಿವೃದ್ಧಿ ಪಡಿಸದ ಕಾರಣ ಉಧ್ಯಾನವನ್ನು ಕಸದ ತೊಟ್ಟಿಯಾಗಿ ಜನರು ಬಳಸುವಂತಾಗಿದೆ. ಈ ಹಿಂದೆ ಅನೇಕ ಬಾರಿ ಸ್ವಚ್ಛ ಮಾಡಿದರೂ ಮತ್ತೆ ಮತ್ತೆ ಕಸ ಹಾಕಲಾಗುತ್ತಿದೆ. ಇಲ್ಲಿ ಆಗಬೇಕಾದ ಕಾಮಗಾರಿಗಳು ಸಾಕಷ್ಟಿದ್ದು, ಇವೆಲ್ಲವನ್ನೂ ಆಯುಕ್ತರ ಗಮನಕ್ಕೆ ತರಲಾಗಿದೆ. ಪರಿಶೀಲನೆ ಮಾಡಿದ ಆಯುಕ್ತರು ಶೀಘ್ರದಲ್ಲಿಯೇ ಉದ್ಯಾನಕ್ಕೆ ಕಾಯಕಲ್ಪ ನೀಡುವ ಭರವಸೆ ನೀಡಿದ್ದಾರೆ ಎಂದರು.
ಈ ಉದ್ಯಾನದಲ್ಲಿ ಆಗಬೇಕಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ, ಅದಕ್ಕೆ ಅಗತ್ಯವಿರುವ ಅನುದಾನ ಮಂಜೂರು ಮಾಡಬೇಕು. ಅಲ್ಲದೆ ಪಾರ್ಕ್ ಮುಂದೆ ಅವೈನಿಕವಾಗಿ ನಿರ್ಮಾಣ ಮಾಡಿರುವ ಚರಂಡಿ ಇದ್ದು, ಇದು 60 ಅಡಿಗೂ ಹೆಚ್ಚು ಕಲ್ವರ್ಟ್ ದುರಸ್ತಿ ಮಾಡಬೇಕಿದೆ. ಈ ಸಮಸ್ಯೆಯನ್ನೂ ಆಯುಕ್ತರ ಗಮನಕ್ಕೆ ತರಲಾಗಿದ್ದು, ಶೀಘ್ರವೇ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಪರಿಸರ ಅಭಿಯಂತರ ಉಮಾಶಂಕರ್ ಸೇರಿದಂತೆ ಇತರರು ಇದ್ದರು.