ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ನಾಗರೀಕರು
1 min readಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ನಾಗರೀಕರು
ಜಿ.ವಿ.ಶ್ರೀರಾಮರೆಡ್ಡಿ ಬಡಾವಣೆ ನಾಗರಿಕರ ಪರದಾಟ
ಬಾಗೇಪಲ್ಲಿ ಪಟ್ಟಣಕ್ಕೆ ಹೊಂದಿಕೊ0ಡಿರುವ ಕಸಬಾ ಹೋಬಳಿಯ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀವಿ ಶ್ರೀರಾಮ ರೆಡ್ಡಿ ಬಡಾವಣೆಯಲ್ಲಿ ಮೂಲ ಭೂತ ಸೌಲಭ್ಯಗಳಿಲ್ಲದೆ ಅಲ್ಲಿನ ನಿವಾಸಿಗಳು ಪ್ರತಿ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಲ್ಲಿನ ನಿವಾಸಿಗಳು ಹಲವು ಬಾರಿ ಸಂಬ0ಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಸುಮಾರು ಎರಡು ದಶಕಗಳ ಹಿಂದೆ ಬಾಗೇಪಲ್ಲಿ ಹೊರವಲಯದ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿ.ವಿ. ಶ್ರೀರಾಮರೆಡ್ಡಿ ಬಡಾವಣೆ ನಿರ್ಮಾಣವಾಗಿದೆ. ಈ ಬಡಾವಣೆಯಲ್ಲಿ ನಿವೇಶನ ರಹಿತರಿಗೆ ಸುಮಾರು 500ಕ್ಕೂ ಹೆಚ್ಚು ನಿವೇಶನ ಆಗಿನ ಶಾಸಕ ಜಿ.ವಿ ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಹಂಚಿಕೆ ಮಾಡಲಾಗಿದೆ. ಹಾಗಾಗಿಯೇ ಆ ಬಡಾವಣೆಗೆ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ.
ಬಾಗೆ ವಿತರಣೆ ಮಾಡಿದ ನಿವೇಶನಗಳಲ್ಲಿ ೪೫೦ಕ್ಕೂ ಹೆಚ್ಚು ಕುಟುಂಬಗಳು ತಮ್ಮ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಎಲ್ಲಂದರಲ್ಲೆ ನಿಲ್ಲುತ್ತಿದೆ. ಒಂದು ಬೀದಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅವೈಜ್ಞಾನಿಕವಾಗಿ ಇಬ್ಬದಿಗಳಲ್ಲೂ ಚರಂಡಿ ಇಲ್ಲದೆಯೇ ರಸ್ತೆ ಕಾಮಗಾರಿ ಮುಗಿಸಲಾಗಿದೆ. ಇನ್ನೊಂದು ಬೀದಿಯಲ್ಲಿ ಅರ್ಧಂಬರ್ಧ ಸಿಸಿ ರಸ್ತೆ ಮಾಡಲಾಗಿದೆ. ಹಾಗಾಗಿ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದ್ದು, ಸಾಂಕ್ರಾಮಿಕ ರೋಗಗಳ ಬೀತಿ ಎದುರಾಗಿದೆ. ಇದರಿಂದಾಗಿ ಆತಂಕದಲ್ಲೆ ಸವಾಲುಗಳೊಂದಿಗೆ ದಿನದೂಡುವಂತಾಗಿದೆ ಎಂದು ಅಲ್ಲಿನ ನಿವಾಸಿಗಳು ನೋವು ತೋಡಿಕೊಂಡಿದ್ದಾರೆ.
ಮಳೆ ಸುರಿದ ಪ್ರತಿಬಾರಿಯೂ ಕೆಸರುಮಯವಾದ ಮಣ್ಣಿನ ರಸ್ತೆಯಲ್ಲೆ ಬಡಾವಣೆ ನಿವಾಸಿಗಳು ಸಂಚರಿಸಬೇಕು. ಇದರಿಂದಾಗಿ ಶಾಲಾ ಮಕ್ಕಳು, ವಯೋವೃದ್ದರು ಸೇರಿದಂತೆ ಬೈಕ್ ಸವಾರರು ಹಲವು ಬಾರಿ ಜಾರಿ ಬಿದ್ದ ಘಟನೆಗಳು ನಡಿದಿವೆ. ಹಲವಾರು ವರ್ಷಗಳು ಗತಿಸಿದರು ಸಮರ್ಪಕ ರಸ್ತೆ ನಿರ್ಮಾಣವಿಲ್ಲದೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಾಗರೀಕರು ಸರಕಾರದ ವಿರುದ್ಧ ಶಪಿಸುತಿದ್ದಾರೆ.
ಶ್ರೀರಾಮರೆಡ್ಡಿ ಬಡಾವಣೆಯ ಜನತೆಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಹಲವು ವರ್ಷಗಳ ಹಿಂದೆ ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆಯಿಂದ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿತ್ತು. ಆದರೆ ಸುಮಾರು ತಿಂಗಳುಗಳ ಹಿಂದೆ ನೀರಿನ ಶುದ್ದೀಕರಣ ಘಟಕ ಕೆಟ್ಟು ಹೋಗಿದೆ. ಅದರ ಬಗ್ಗೆ ಹಲವು ಬಾರಿ ಸಂಬ0ಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಹಾಗಾಗಿ ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೇ ಪಟ್ಟಣಕ್ಕೆ ಹೋಗಬೇಕಿದೆ. ಇಲ್ಲವಾದರೆ ಖಾಸಗಿಯವರನ್ನು ಅವಲಂಭಿಸುವ0ತಾಗಿದೆ.
ಸ್ಥಳೀಯ ನಿವಾಸಿ ಕೆ. ಮುನಿಯಪ್ಪ ಮಾತನಾಡಿ, ನಿವೇಶನ ರಹಿತ ಬಡ, ಕೂಲಿಕಾರ್ಮಿಕರಿಗೆ ಜಿ.ವಿ ಶ್ರೀರಾಮರೆಡ್ಡಿಯವರು ಶಾಸಕರಾಗಿದ್ದ ಅವಧಿಯಲ್ಲಿ ನಿವೇಶನಗಳನ್ನು ನೀಡಿ ನಂತರದ ದಿನಗಳಲ್ಲಿ ವಸತಿಗಳ ನಿರ್ಮಾಣಕ್ಕೆ ಹೋರಾಟ ಮಾಡಲಾಯಿತು. ಇದರಿಂದಾಗಿ ಹಲವಾರು ಮಂದಿಗೆ ವಸತಿ ನಿರ್ಮಾಣಕ್ಕೆ ಸಹಾಯಧನ, ಲೋನ್ ಮತ್ತಿತರರ ಸೌಲಭ್ಯಗಳನ್ನು ಪಡೆಯಲು ಪರದಾಡುವಂತಾಯಿತು. ಪ್ರಸ್ತುತ ಅಲ್ಲಿನ ಜನರು ತ್ರಿಶಂಕು ಸ್ಥಿತಿಯಲ್ಲಿದ್ದು, ರಸ್ತೆ, ಚರಂಡಿ, ಶಾಲೆಯಂತಹ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಈಗಿನ ಶಾಸಕರು ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದರು.
ಇನ್ನಾದರೂ ಉತ್ತಮ ಶಾಲೆ, ಚರಂಡಿ, ಸಾರಿಗೆ ವ್ಯವಸ್ಥೆಯನ್ನು ಶಾಲಾ ಸಮಯದಲ್ಲಾದರೂ ಕಲ್ಪಿಸಲು ಮುಂದಾಗಬೇಕಿದೆ, ಈ ಬಡಾವಣೆಯಲ್ಲಿ ಮುಖ್ಯವಾಗಿ ವಿದ್ಯುತ್ ಬಲ್ಪುಗಳು, ನೀರಿನ ಶುದ್ದೀಕರಣ ಘಟಕದ ದುರಸ್ತಿ, ಚರಂಡಿ, ರಸ್ತೆಯಂತಹ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಹಾಗಾಗಿ ಸಂಬ0ಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.