ಬಾಗೇಪಲ್ಲಿಯಲ್ಲಿ ಮುಗಿಲು ಮುಟ್ಟಿದ ಕ್ರಿಸ್ ಮಸ್ ಸಂಭ್ರಮ
1 min readಬಾಗೇಪಲ್ಲಿಯಲ್ಲಿ ಮುಗಿಲು ಮುಟ್ಟಿದ ಕ್ರಿಸ್ ಮಸ್ ಸಂಭ್ರಮ
ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯ
ಬಾಗೇಪಲ್ಲಿ ತಾಲೂಕಿನಾದ್ಯಂತ ಚರ್ಚುಗಳಲ್ಲಿ ಶಾಂತಿಭೂತ ಯೇಸುವಿನ ಜನ್ಮದಿನ ಆಚರಣೆ, ಕ್ರಿಸ್ಮಸ್ ಹಬ್ಬದ ಸಡಗರ ಮುಗಿಲು ಮುಟ್ಟಿತ್ತು. ಬಾಗೇಪಲ್ಲಿ ಪಟ್ಟಣದ ವಿವಿಧ ಚರ್ಚುಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ವರ್ಣರಂಜಿತವಾಗಿ ಕಂಗೊಳಿಸುತ್ತಿವೆ.
ಬಾಗೇಪಲ್ಲಿಯಲ್ಲಿ ಕ್ರಿಸ್‌ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಚರ್ಚುಗಳು ಮತ್ತು ಕ್ರೆಸ್ತರ ಮನೆಗಳು ವಿದ್ಯುತ್ ದೀಪಗಳಿಂದ ಗಮನ ಸೆಳೆಯುತ್ತಿವೆ. ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಕ್ರಿಸ್ಮಸ್ ಗೋದಲಿ, ನಕ್ಷತ್ರಗಳ ಸಾಲು ಎಲ್ಲೆಡೆ ರಾರಾಜಿಸುತ್ತಿವೆ. ವಿಶೇಷ ತಿನಿಸುಗಳಾದ ಕೇಕ್ ಕುಸ್ವಾರ್‌ಗಳಿಗೆ ವಿಪರೀತ ಬೇಡಿಕೆ ಇದೆ. ಮನೆಗಳ ಮುಂಭಾಗದಲ್ಲಿ ಗೋದಲಿಗಳು ನಿರ್ಮಿಸಲಾಗಿದ್ದು, ಮನೆಯಂಗಳದಲ್ಲಿ ನಕ್ಷತ್ರಗಳು ಮಿನುಗುತ್ತಿವೆ.
ಗೋದಲಿ, ಮನೆ, ಮನೆಯ ಆವರಣ, ಚರ್ಚ್ಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ ಗಳ ಸಾಲು, ಕ್ರಿಸ್ಮಸ್ ಟ್ರೀ, ಸಾಂತಕ್ಲಾಸ್ ವೇಷಭೂಷಣ ಮಾರಾಟ ಜೋರಾಗಿದೆ. ಕ್ರಿಸ್ಮಸ್ ಪ್ರಯುಕ್ತ ಚರ್ಚ್ಗಳನ್ನು ವಿದ್ಯುತ್ ದೀಪಾಲಂಕಾರಗೊಳಿಸಲಾಗಿದೆ. ಒಟ್ಟಾರೆ ಕ್ರಿಸ್ಮಸ್ ಹಬ್ಬ ಕಳೆಗಟ್ಟಿದ್ದು, ಕ್ರೆಸ್ತರು ಸಂಭ್ರಮಾಚರಣೆಯಲ್ಲಿದ್ದಾರೆ. ಹಬ್ಬಕ್ಕಾಗಿ ಸಮುದಾಯದವರು ಎರಡು ದಿನಗಳಿಂದ ಸಿದ್ಧತೆಯಲ್ಲಿ ತೊಡಗಿದ್ದು, ಸಂಭ್ರಮಾಚರಣೆಗೆ ಮಂಗಳವಾರ ಹಾಗೂ ಬುಧವಾರ ಚರ್ಚ್ ಹಾಗೂ ಮನೆಗಳಲ್ಲಿ ಅಂತಿಮ ತಯಾರಿ ನಡೆಸುತ್ತಿದ್ದ ದೃಶ್ಯ ಕಂಡುಬ0ತು.
ಯೇಸು ಹುಟ್ಟಿನ ಸಂದೇಶದ ದ್ಯೋತಕವಾಗಿ ಬಣ್ಣ ಬಣ್ಣದ ನಕ್ಷತ್ರಗಳು, ಆಕಾಶ ಬುಟ್ಟಿಗಳು, ಕ್ರಿಸ್ಮಸ್ ಟ್ರೀಗಳು ಚರ್ಚ್, ಪ್ರಾರ್ಥನಾ ಮಂದಿರಗಳ ಮಹಡಿಯನ್ನು ಅಲಂಕರಿಸಿವೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಮನೆಗಳಲ್ಲಿ ಕೇಕ್ ಹಾಗೂ ವಿಶೇಷ ಖಾದ್ಯ ತಯಾರಿ ನಡೆಸಿದ್ದು ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಈ ಸಂದರ್ಭದಲ್ಲಿ ಯೇಸುವಿನ ಸ್ತುತಿಗೀತೆಗಳ ಗಾಯನ, ಬಲಿಪೂಜೆ ಹಾಗೂ ವಿಶೇಷ ಪಾರ್ಥನೆ ಜರುಗಿತು.
ಪಟ್ಟಣದ ಹೊಸ ಜೀವನ ನಿಲಯದ ಫಾದರ್ ಹೆಚ್.ಎಸ್. ಪ್ರಕಾಶ್ ಪ್ರಾರ್ಥನೆ ಮಾಡಿ, ಕ್ರಿಸ್ಮಸ್ ಸಂಭ್ರಮದ, ಆಡಂಬರದ ಅಚರಣೆಯ ಹೊರತಾಗಿ ಪ್ರೀತಿ, ದಯೆ, ಕರುಣೆ, ಕ್ಷಮೆ, ಸೇವೆ ಮುಂತಾದ ಮಾನವೀಯ ಮತ್ತು ದೈವೀ ಮೌಲ್ಯಗಳನ್ನು ಬದುಕಿಗೆ ಅಳವಡಿಸಿಕೊಳ್ಳುವ ಒಂದು ಶ್ರೇಷ್ಠ ಆಚರಣೆಯಾಗಲಿ ಎಂದು ಹಾರೈಸಿದರು. ಮನುಷ್ಯನ ಅಂತರಾತ್ಮದಲ್ಲಿ ಮಾನವೀಯ ಮೌಲ್ಯಗಳು ಕ್ರಿಸ್ತನ ಜನನದಲ್ಲಿ ಮತ್ತೆ ಮತ್ತೆ ಮೂಡಿಬರಲಿ. ವಿಶ್ವದ ಸಮಸ್ತ ಜನರು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಪ್ರೀತಿ, ಶಾಂತಿ ನೆಮ್ಮದಿಯೊಂದಿಗೆ ಸಹಾಯ, ಸಹಕಾರ ಸಹಬಾಳ್ವೆಯೊಂದಿಗೆ ಇಡೀ ಮನುಕುಲ ಒಂದು ವಿಶ್ವ ಕುಟುಂಬವಾಗಿ ಜೀವಿಸಲು ಈ ಕ್ರಿಸ್ತ ಜಯಂತಿ ಸರ್ವರಿಗೂ ಸ್ಪೂರ್ತಿ ಹಾಗೂ ಪ್ರೇರಣೆಯಾಗಲಿ ಎಂದು ಹೇಳಿದರು.