ನಿರ್ವಹಣೆ ಇಲ್ಲದೆ ಪಾಳು ಬಿದ್ದ ಚಿತ್ರಾವತಿ ಡ್ಯಾಂ ವಸತಿಗೃಹಗಳು
1 min readನಿರ್ವಹಣೆ ಇಲ್ಲದೆ ಪಾಳು ಬಿದ್ದ ಚಿತ್ರಾವತಿ ಡ್ಯಾಂ ವಸತಿಗೃಹಗಳು
ಅನೈತಿಕ ಚಟುವಟಿಕೆಗಳಿಗೆ ತಾಣವಾಗಿ ಮಾರ್ಪಾಡಾದ ಕಟ್ಟಡಗಳು
ಬರದ ನಾಡೆಂದು ಖ್ಯಾತಿ ಪಡೆದಿರುವ ಬಾಗೇಪಲ್ಲಿ ತಾಲೂಕಿನ ಪರಗೋಡು ಸಮೀಪ ಚಿತ್ರಾವತಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಈ ಡ್ಯಾಂ ಸಮೀಪದಲ್ಲಿಯೇ ನಿರ್ಮಿಸಿರುವ ವಸತಿ ಗೃಹಗಳು ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿವೆ, ಅಣೆಕಟ್ಟಿನಲ್ಲಿ ಹೂಳೆತ್ತುವುದು ಸೇರಿದಂತೆ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.
ಬಾಗೇಪಲ್ಲಿ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಚಿತ್ರಾವತಿ ಜಲಾಶಯ ಹೂಳಿನಿಂದ ತುಂಬಿ ನೀರಿನ ಶೇಖರಣೆ ಸಾಮರ್ಥ್ಯ ಕುಸಿದಿರುವುದು ಒಂದು ಕಡೆಯಾದರೆ ಈ ಅಣೆಕಟ್ಟು ಸಮೀಪದಲ್ಲಿಯೇ ನಿರ್ಮಾಣವಾಗಿರುವ ವಸತಿ ಗೃಹಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿವೆ. ಈ ಸಂಬ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ ಮುನಿವೆಂಕಟಪ್ಪ ಮಾತನಾಡಿ, ಈ ಭಾಗದ ಶಾಶ್ವತ ನೀರಿನ ಸಮಸ್ಯೆ ಬಗೆಹರಿಸಲು 1994ರಲ್ಲಿ ಕ್ಷೇತ್ರದ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ಮೊದಲ ಬಾರಿಗೆ ಪರಗೋಡು ಸಮೀಪ ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದರು ಎಂದರು.
ಆಗಿನ ಸರಕಾರ ಡ್ಯಾಂ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು. ಬಳಿಕ 1999-2000ನೇ ಸಾಲಿನ ಬಜೆಟ್‌ನಲ್ಲಿ 4.60 ಕೋಟಿ ವೆಚ್ಚದ ಡ್ಯಾಂಗೆ ಮೊದಲ ಕಂತಾಗಿ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೂ ಕಾಮಗಾರಿ ಆರಂಧಕ್ಕೆ ನೆರೆಯ ಆಂಧ್ರಪ್ರದೇಶ ಸರಕಾರ ತಗಾದೆ ತೆಗೆಯಿತು. ಆಗಿನ ಅನಂತಪುರ ಜಿಲ್ಲೆಯ ಪ್ರಭಾವಿ ಟಿಡಿಪಿ ನಾಯಕ ಪೆರಿಟಾಲ ರವಿ ನೇತೃತ್ವದಲ್ಲಿ ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಜಲಾಶಯ ನಿರ್ಮಾಣದ ನಂತರ ಡ್ಯಾಂ ನಿರ್ಮಿಸಿದರೆ ಬಾಂಬ್ ಹಾಕುತ್ತೇವೆಂದು ಆಂಧ್ರದ ಹಲವು ಮುಖಂಡರು ಬೆದರಿಕೆಯನ್ನೂ ಹಾಕಿದ್ದರು ಎಂದರು.
ವಿವಾದ ಕೊನೆಗೆ ಸುಪ್ರೀಂಕೋರ್ಟ್ವರೆಗೂ ಹೋಯಿತು. ಆಗಿನ ಎಸ್.ಎಂ. ಕೃಷ್ಣ ಸರಕಾರ ಪರಗೋಡು ಸಮೀಪ ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ಕೋರ್ಟ್ನಿಂದ ಗ್ರೀನ್ ಸಿಗ್ನಲ್ ಪಡೆಯುವಲ್ಲಿ ಯಶಸ್ಸು ಕಂಡಿತು. ಕೇವಲ ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟಲಾಯಿತು. ಹೀಗಾಗಿ ಚಿತ್ರಾವತಿ ಡ್ಯಾಂ ನೀರು ಕೇವಲ ಕುಡಿಯಲು ಮಾತ್ರ ಬಳಕೆ ಆಗುತ್ತಿದೆ ಎಂದು ಹೇಳಿದರು.
128 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕೊಡಬೇಕೆಂಬ ಉದ್ದೇಶ ಈವರೆಗೂ ಈಡೇರಿಲ್ಲ. ಡ್ಯಾಂ ನಿರ್ಮಾಣವಾಗಿ ದಶಕಗಳೇ ಉರುಳಿದರೂ ಅದರಲ್ಲಿ ತುಂಬಿರುವ ಹೂಳು ತೆಗೆಸುವಲ್ಲಿ ಜನಪ್ರತಿನಿಧಿಗಳು, ಜಿಲ್ಲೆಡಳಿತ ವಿಲವಾಗಿರುವ ಕಾರಣ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಹಾಗೇಯೇ ವಸತಿ ಗೃಹಗಳನ್ನು ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ನಿರ್ವಹಣೆ ಇಲ್ಲದೆ ಕಿಟಕಿ, ಬಾಗಿಲುಗಳನ್ನು ಕಿತ್ತುಕೊಂಡು ಹೋಗಿದ್ದು, ಕುಡುಕರ ಹಾಗೂ ಜೂಜಾಟವಾಡುವವರ ಅಡ್ಡೆಯಾಗಿ ಪರಿಣಮಿಸಿದೆ. ಡ್ಯಾಂ ಕಟ್ಟೆಯ ಮೇಲೆ ಗಿಡಗಂಟಿಗಳು,ಪೊದೆಗಳು ಬೆಳೆದಿವೆ.
ಜಲಾಶಯದ ನಿರ್ಮಾಣ ಮಾಡಿ ಉತ್ತಮ ಬೋಟಿಂಗ್ ವ್ಯವಸ್ಥೆ ಮಾಡಿ ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಬೇಕೆಂಬ ಕನಸು ಆಗಿನ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಅವರಿಗೆ ಇತ್ತು. ಆದರೆ ನಂತರದ ಚುನಾವಣೆಗಳಲ್ಲಿ ಅವರು ಸೋತು, ಬೇರೆಯವರು ಅಧಿಕಾರಕ್ಕೆ ಬಂದರು. ಹಾಗಾಗಿ ಚಿತ್ರಾವತಿ ಡ್ಯಾಂ ಪ್ರವಾಸಿ ತಾಣವಾಗುವ ಬದಲು ಪರೋಡಿಗಳ ಅಡ್ಡಾಡುವ ತಾಣವಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಮುನಿವೆಂಕಟಪ್ಪ ಬೇಸರ ವ್ಯಕ್ತ ಪಡಿಸಿದರು. ಇನ್ನಾದರೂ ಡ್ಯಾಂ ಸಮೀಪ ಇರುವ ವಸತಿ ಗೃಹಗಳ ನಿರ್ವಹಣೆ ಹಾಗೂ ಡ್ಯಾಂ ಕಟ್ಟೆಯ ಮೇಲಿನ ಬೇಲಿ, ಪೊದೆಗಳನ್ನು ತೆರವುಗೊಳಿಸಿ ಸಮರ್ಪಕ ನಿರ್ವಹಣೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.