ವರದನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ
1 min readವರದನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಶಾಲಾ ಮಕ್ಕಳ ಮೇಲಿನ ದೌರ್ಜನ್ಯ ಮುಕ್ತವಾಗಿ ಹೇಳಬೇಕು
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ
ಮಕ್ಕಳು ಮನೆ, ಶಾಲೆ ಅಥವಾ ಹೊರಗೆ ಎಲ್ಲಿಯೇ ಆಗಲಿ ತಮ್ಮ ಮೇಲೆ ಆಗುವ ದೌರ್ಜನ್ಯವನ್ನು ಧೈರ್ಯವಾಗಿ ಹೇಳಿಕೊಳ್ಳಬೇಕು, ಎದುರಿಸಬೇಕು ಮುಚ್ಚಿಡಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಹೇಳಿದರು.
ಶಿಡ್ಲಘಟ್ಟ ತಾಲೂಕಿನ ವರದನಾಯಕನಹಳ್ಳಿ ಸರಕಾರಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಇಂದು ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ, ಸ್ನೇಹಿತರು, ತಂದೆ ಆಗಲಿ ಅಣ್ಣ ತಮ್ಮಂದಿರಾಗಲಿ, ನೆರೆ ಹೊರೆಯವರಾಗಲಿ, ಶಿಕ್ಷಕರಾಗಲಿ ಹೆಣ್ಣು ಮಕ್ಕಳನ್ನು ಮುಟ್ಟಬಾರದ ಜಾಗದಲ್ಲಿ ಮುಟ್ಟುವ, ಲೈಂಗಿಕವಾಗಿ ಪ್ರಚೋಸುವ ಕೆಲಸ ನಡೆದಾಗ, ಮುಜುಗರವಾಗುವ ರೀತಿಯಲ್ಲಿ ನಡೆದಾಗ ಅದನ್ನು ಸಮರ್ಥವಾಗಿ ಎದುರಿಸಬೇಕು ಎಂದರು.
ಮನೆಯಲ್ಲಿ ಅಥವಾ ಶಿಕ್ಷಕರಲ್ಲಿ ಘಟನೆ ಹೇಳಿಕೊಳ್ಳಬೇಕು. ಇದರಿಂದ ಮತ್ತೊಮ್ಮೆ ಆ ಘಟನೆ ಮರುಕಳಿಸುವುದಿಲ್ಲ. ಇನ್ನೊಬ್ಬರಿಗೆ ಅಂತಹ ಕಹಿ ಘಟನೆ ಎದುರಾಗುವುದಿಲ್ಲ ಎಂದು ಹೇಳಿದರು. ೧೮ ವರ್ಷದೊಳಗಿನ ಎಲ್ಲರೂ ಮಕ್ಕಳೆ. ಮಕ್ಕಳಿಗೆ ಅನೇಕ ರೀತಿಯ ಕಾನೂನಾತ್ಮಕ ರಕ್ಷಣೆಗಳಿವೆ. ಉತ್ತಮ ಆಹಾರ, ಉತ್ತಮ ಶಿಕ್ಷಣ ಸಿಗಬೇಕು. ಉತ್ತಮ ಪ್ರಜೆಯಾಗಿ ರೂಪುಗೊಳ್ಳುವ ಪರಿಸರ ನಿರ್ಮಿಸುವುದು ಸರಕಾರದ ಕೆಲಸ ಮಾತ್ರವಲ್ಲ ನಮ್ಮೆಲ್ಲರ ಪಾತ್ರವೂ ಇದೆ ಎಂದರು.
ಮಕ್ಕಳ ದಿನಾಚರಣೆ ನಡೆಸಿ, ಮಕ್ಕಳಿಗೆ ಇರುವ ಸಂವಿಧಾನತ್ಮಕ ಹಕ್ಕುಗಳು, ಸಿಗಬೇಕಾದ ಸವಲತ್ತುಗಳ ಬಗ್ಗೆ ತಿಳಿಸಿಕೊಡುವ ಕೆಲಸ ಆಗಬೇಕೆಂದು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶಾಮಲ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜೆ. ಪೂಜಾ, ಬಿಇಒ ನರೇಂದ್ರ ಕುಮಾರ್, ಸಿಡಿಪಿಒ ವಿದ್ಯಾ ಎ.ವಸ್ತದ್, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಇದ್ದರು.