ಅಪರಾಧ ಕೃತ್ಯಗಳನ್ನು ವೈಭವೀಕರಿಸುತ್ತಾ ಮಕ್ಕಳು ಬೆಳೆಯಬಾರದು; ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
1 min readರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) 12ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕದಿಂದ ಬಾಬ್ರಿ ಮಸೀದಿ ಪದವನ್ನು ತೆಗೆದುಹಾಕಿ ಬದಲಿಗೆ ಮೂರು-ಗುಮ್ಮಟ ರಚನೆ ಎಂಬ ಪದವನ್ನು ಬಳಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.
ಎನ್‌ಸಿಇಆರ್‌ಟಿ ಬಾಬರಿ ಮಸೀದಿಯ ಬದಲಿಗೆ ಮೂರು ಗುಮ್ಮಟ ರಚನೆಯನ್ನು ಬಳಸಲು ನಿರ್ಧರಿಸಿದೆ. ಅಯೋಧ್ಯೆ ತೀರ್ಪನ್ನು ಒಮ್ಮತದ ಉದಾಹರಣೆ ಎಂದು ವಿವರಿಸಲು ನಿರ್ಧರಿಸಿದೆ. ಬಾಬರಿ ಮಸೀದಿ ಧ್ವಂಸವನ್ನು ಅತ್ಯಂತ ಕೆಟ್ಟ ಅಪರಾಧ ಕೃತ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ದೇಶದ ಮಕ್ಕಳು ಅದನ್ನು ತಿಳಿದುಕೊಳ್ಳಬೇಕು ಎಂದು ಅಸಾದುದ್ದೀನ್ ಓವೈಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
1949ರಲ್ಲಿ ಮಸೀದಿಯನ್ನು ಹೇಗೆ ಅವಮಾನಿಸಲಾಯಿತು ಮತ್ತು 1992ರಲ್ಲಿ ಹೇಗೆ ಕೆಡವಲಾಯಿತು ಎಂಬುದು ಮಕ್ಕಳಿಗೆ ತಿಳಿದಿರಬೇಕು. ಅಪರಾಧ ಕೃತ್ಯಗಳನ್ನು ವೈಭವೀಕರಿಸುತ್ತಾ ಅವರು ಬೆಳೆಯಬಾರದು ಎಂದಿದ್ದಾರೆ.
ಈ ಹಿಂದೆ ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಅವರು ಬಾಬರಿ ಮಸೀದಿ ಮತ್ತು ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಪಠ್ಯಪುಸ್ತಕಗಳಲ್ಲಿ ಮಾಡಲಾದ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದರು. ಗಲಭೆಗಳ ಬಗ್ಗೆ ಬೋಧನೆ ಮಾಡುವುದರಿಂದ ಹಿಂಸಾತ್ಮಕ ಮತ್ತು ಖಿನ್ನತೆಗೆ ಒಳಗಾದ ನಾಗರಿಕರನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದರು. ಈ ಬಗ್ಗೆ ಓವೈಸಿ, ಇತಿಹಾಸದಿಂದ ಪಾಠ ಕಲಿಯದವನು ಮತ್ತೆ ಅದೇ ಇತಿಹಾಸವನ್ನು ಎದುರಿಸುವುದು ಖಚಿತ ಎಂದು ಹೇಳಿದ್ದಾರೆ.
#ctvnews #ctvNews #ctv