ಮಗು ಸಾವು: ನಿಮ್ಹಾನ್ಸ್ ವೈದ್ಯರ ವಿರುದ್ಧ ಪೋಷಕರ ಪ್ರತಿಭಟನೆ
1 min readತ್ವರಿತವಾಗಿ ಚಿಕಿತ್ಸೆ ನೀಡುವಲ್ಲಿ ನಿಮ್ಹಾನ್ಸ್ ವೈದ್ಯರು ನಿರ್ಲಕ್ಷ್ಯ ವಹಿಸಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿ ಮಗುವಿನ ಪೋಷಕರು ನಿಮ್ಹಾನ್ಸ್ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.
ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯವಾಗಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಬಸವನಗುಡಿ ನಿವಾಸಿಗಳಾದ ವೆಂಕಟೇಶ್ -ಜ್ಯೋತಿ ದಂಪತಿಯ ಒಂದೂವರೆ ವರ್ಷದ ಮಗು ವಿಜಯ್ ಮನೆಯಲ್ಲಿ ಮಂಗಳವಾರ ಆಟವಾಡುವ ಸಂದರ್ಭದಲ್ಲಿ ಮೆಟ್ಟಿಲಿನಿಂದ ಬಿದ್ದು ತೀವ್ರ ಗಾಯಗೊಂಡಿತ್ತು. ಮಗುವನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಕರೆದುಕೊಂಡು ಹೋಗುವಂತೆ ಅಲ್ಲಿನ ವೈದ್ಯರು ತಿಳಿಸಿದ್ದರು.
ಅದರಂತೆ ಬುಧವಾರ ಮಧ್ಯಾಹ್ನ ಮಗುವನ್ನು ಹಾಸನದಿಂದ ‘ಝೀರೊ ಟ್ರಾಫಿಕ್’ನಲ್ಲಿ ನಿಮ್ಹಾನ್ಸ್‌ಗೆ ಕರೆತರಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ಹೇಳಿ ಚಿಕಿತ್ಸೆಯನ್ನು ತಕ್ಷಣ ನೀಡಲಿಲ್ಲ. ಇದರಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.
‘ಹಾಸನ ಜಿಲ್ಲಾ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಬುಧವಾರ ನಿಮ್ಹಾನ್ಸ್‌ಗೆ ಮಗುವನ್ನು ದಾಖಲಿಸುವುದಕ್ಕೆ ಹೊರಡುವ ಮೊದಲೇ ನಿಮ್ಹಾನ್ಸ್ ಆಸ್ಪತ್ರೆಗೆ ಮಾಹಿತಿ ನೀಡಿದ್ದೆವು. ಆಸ್ಪತ್ರೆಗೆ ಬಂದ ಮೇಲೆ ವೆಂಟಿಲೇಟರ್, ಬೆಡ್ ಇಲ್ಲ ಎಂದು ಬೇರೆ ಆಸ್ಪತ್ರೆಗೆ ಚೀಟಿ ಬರೆದುಕೊಟ್ಟರು. ಮಗುವಿನ ತಂದೆ ಮುಗ್ದರಾದ್ದರಿಂದ, ನಾನೇ ಆಸ್ಪತ್ರೆಯವರ ಬಳಿ ಮಾತನಾಡಬೇಕಾಯಿತು. ಇದರಿಂದ ಒಂದು ತಾಸು ಮಗು ಆಂಬುಲೆನ್ಸ್‌ನಲ್ಲೇ ಇರಬೇಕಾಯಿತು. ನಾವೆಲ್ಲ ಗಲಾಟೆ ಮಾಡಿದ ಮೇಲೆ ಪರೀಕ್ಷೆ ಮಾಡಲು ಮುಂದಾದರು. ತಕ್ಷಣ ಚಿಕಿತ್ಸೆ ದೊರೆತಿದ್ದರೆ ಮಗು ಬದುಕುತ್ತಿತ್ತು’ ಎಂದು ಆಂಬುಲೆನ್ಸ್ ಚಾಲಕ ಮಧು ಪ್ರತಿಕ್ರಿಯಿಸಿದರು.
‘ಮಗುವನ್ನು ದಾಖಲಿಸಿಕೊಳ್ಳಿ, ಬೇಗ ಚಿಕಿತ್ಸೆ ಆರಂಭಿಸಿ ಎಂದು ಎಷ್ಟೇ ಗಲಾಟೆ ಮಾಡಿದರೂ, ಅವಕಾಶ ಸಿಗಲಿಲ್ಲ’ ಎಂದು ಪೋಷಕರು ರೋದಿಸಿದರು.
ನಿರಂತರ ಪ್ರತಿಭಟನೆ: ಮಗುವಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿಲ್ಲ ಎಂದು ಪೋಷಕರು ಬುಧವಾರವೂ ಪ್ರತಿಭಟನೆ ಮುಂದುವರಿಸಿದರು. ಆಸ್ಪತ್ರೆಯ ವಿರುದ್ಧ ಘೋಷಣೆ ಕೂಗಿದರು. ಮಗುವಿಗೆ ನ್ಯಾಯಕೊಡಿ ಎಂದು ಆಗ್ರಹಿಸಿದರು. ‘ಮಗುವಿನ ಮೃತದೇಹವನ್ನು ನೀಡುತ್ತಿಲ್ಲ’ ಎಂದು ಆರೋಪಿಸಿದರು. ಆರೋಗ್ಯ ಸಚಿವರು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ಇಷ್ಟೆಲ್ಲ ಬೆಳವಣಿಗೆಗಳ ನಂತರ ಮರಣೋತ್ತರ ಪರೀಕ್ಷೆ ಮುಗಿಸಿ ಬುಧವಾರ ಸಂಜೆ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಯಿತು.
ನಂತರವೂ ಪೋಷಕರು ಸಿದ್ದಾಪುರ ಠಾಣೆಯ ಎದುರು ಮಗುವಿನ ಮೃತದೇಹವನ್ನು ಇಟ್ಟು, ‘ಮಗುವಿನ ಸಾವಿಗೆ ಕಾರಣರಾದ ವೈದ್ಯರನ್ನು ಬಂಧಿಸಬೇಕು. ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ, ಪ್ರತಿಭಟನೆ ಮುಂದುವರಿಸಿದರು.