ಚಿಕ್ಕಬಳ್ಳಾಪುರದಲ್ಲಿ ಕಲೆಗಟ್ಟಿದ ಕ್ರಿಸ್ ಮಸ್ ಸಂಭ್ರಮ ದೀಪಾಲಂಕಾರದಲ್ಲಿ ಝಗಮಗಿಸುತ್ತಿರುವ ಚರ್ಚುಗಳು
1 min readದೀಪಾಲಂಕಾರದಲ್ಲಿ ಝಗಮಗಿಸುತ್ತಿರುವ ಚರ್ಚುಗಳು ಮೇಣದ ಬತ್ತಿಗಳನ್ನು ಹಚ್ಚಿ ಶುಭಾಶಯ ವಿನಿಮಯ ಕೇಕ್ ಕತ್ತರಿಸಿ ಶುಭಾಶಯ ಹಂಚಿಕೊಂಡ ಕ್ರೈಸ್ತರು ಚಿಕ್ಕಬಳ್ಳಾಪುರದಲ್ಲಿ ಕಲೆಗಟ್ಟಿದ ಕ್ರಿಸ್ ಮಸ್ ಸಂಭ್ರಮ
ವಿದ್ಯುತ್ ದೀಪಾಲಂಕಾರದೊಂದಿಗೆ ಝಗಮಗಿಸುತ್ತಿರುವ ಕ್ರೈಸ್ತ ದೇವಾಲಯಗಳು, ಪ್ರಾರ್ಥನೆಗಾಗಿ ಹರಿದು ಬರುತ್ತಿರುವ ಕ್ರೈಸ್ತರು, ಕೇಕ್ ಹಂಚುತ್ತಿರುವ ಭಕ್ತರು, ಕ್ರಿಸ್ತನ ಜನ್ಮದಿನದ ಶುಭಾಶಯಗಳ ಮಹಾಪೂರ, ಕೊಟ್ಟಿಗೆಯಲ್ಲಿ ಬಾಲಯೇಸು, ಕುರಿಗಳೊಂದಿಗೆ ಯೇಸುವಿನ ಪ್ರತಿಮೆಗಳು. ಇವು ಚಿಕ್ಕಬಳ್ಳಾಪುರದಲ್ಲಿ ಕ್ರಿಸ್ ಮಸ್ ಸಂಭ್ರಮದ ಒಂದು ಝಲಕ್ ಮಾತ್ರ.
ಹೌದು, ಕ್ರಿಸ್ ಮಸ್ ಗೂ ಚಿಕ್ಕಬಳ್ಳಾಪುರಕ್ಕೂ ಶತಮಾನಗಳ ಅವಿನಾಭಾವ ಸಂಬಂಧವಿದೆ. ಸ್ವಾತಂತ್ರ್ಯಾ ಪೂರ್ವದಲ್ಲಿಯೇ ಇಲ್ಲಿ ಕ್ರೈಸ್ತ ಧರ್ಮ ಉತ್ತುಂಗದಲ್ಲಿತ್ತು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇಲ್ಲಿನ ಸಿಎಸ್ ಐ ಆಸ್ಪತ್ರೆ ಸ್ವಾತಂತ್ರ್ಯಾ ಪೂರ್ವದಲ್ಲಿ ನಿರ್ಮಾಣವಾಗಿ ರೋಗಿಗಳ ಸೇವೆ ಮಾಡಿದ ಪುರಾವೆಗಳಿವೆ.
ಚಿಕ್ಕಬಳ್ಳಾಪುರದಲ್ಲಿ ಪ್ರಮುಖ ಕ್ರೈಸ್ತ ದೇವಾಲಯಗಳಿವೆ, ಕ್ರೈಸ್ತ ಸ್ಮಶಾನಗಳಿವೆ. ಇಲ್ಲಿ ಕ್ರಿಸ್ತ ಕೇವಲ ಧರ್ಮಕ್ಕೆ ಸೀಮಿತವಾಗದೆ ಧರ್ಮಕ್ಕೆ ಅತೀತವಾಗಿ ಸರ್ವರೂ ಸಾಮರಸ್ಯದಿಂದ ಆಚರಿಸುವ ಒಂದು ಸಂಭ್ರಮವೇ ಕ್ರಿಸ್ ಮಸ್. ಜಾತಿಯ ಹಂಗಿಲ್ಲ, ಧರ್ಮದ ಬೇಲಿಯಿಲ್ಲ, ರಾಜಕೀಯ ಬಣ್ಣವಿಲ್ಲ. ಶಾಂತಿ ಮೂರ್ತಿಯಾದ ಕ್ರಿಸ್ತನ ಜನ್ಮದಿನವಾದ ಇಂದು ಪರಸ್ಪರ ಪ್ರೀತಿಯ ಜೊತೆಗೆ ಶಾಂತಿಯನ್ನು ಹಂಚಿಕೊಳ್ಳುವುದು ಕ್ರಿಸ್ ಮಸ್ ಸಂಕೇತ.
ಕ್ರೈಸ್ತರ ಪಾಲಿಗೆ ಏಕೈಕ ಹಬ್ಬವಾದ ಕ್ರಿಸ್ ಮಸ್ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ ವಿಶೇಷ ಕಲೆಗಟ್ಟಿತ್ತು. ಸಿಎಸ್ ಐ ಚರ್ಚ್, ಸಂತ ಜೋಸೆಫ್ ರ ಚರ್ಚುಗಳಲ್ಲಿ ವಿಶೇಷ ಅಲಂಕಾರದ ಜೊತೆಗೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿ, ಮೇಣದ ಬತ್ತಿ ಹಚ್ಚಿ, ಕೇಕ್ ಕತ್ತರಿಸಿ ಪರಸ್ಪರ ಕ್ರಿಸ್ ಮಸ್ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
ವಾಪಸಂದ್ರದಲ್ಲಿರುವ ಚರ್ಚ್, ಸೂಸೇಪಾಳ್ಯದ ಚರ್ಚುಗಳಲ್ಲಿಯೂ ಭಾನುವಾರದಿಂದಲೇ ಕ್ರಿಸ್ ಮಸ್ ಸಂಭ್ರಮ ಮನೆಮಾಡಿತ್ತು. ಕೇಕ್ ಹಂಚುವುದು, ಹಬ್ಬದ ಅಡುಗೆ ಎಲ್ಲರಿಗೂ ಹಂಚುವುದು ಸಾಮಾನ್ಯವಾಗಿತ್ತು. ಇನ್ನು ಚರ್ಚಿನ ಆವರಣದಲ್ಲಿ ಬಾಲಯೇಸು, ಕುರಿ ಕಾಯುತ್ತಿರುವ ಯೇಸುವಿನ ಪ್ರತಿಮೆಗಳಾದ ಗೋದಳಿಗನ್ನು ಮಾಡಿ ಪ್ರದರ್ಶನಕ್ಕಿಡಲಾಗಿತ್ತು.
ಮಾಜಿ ಸಂಸದ ವೀರಪ್ಪ ಮೊಯ್ಲಿ, ಶಾಸಕ ಪ್ರದೀಪ್ ಈಶ್ವರ್ ಸೆರಿದಂತೆ ಹಲವರು ಚರ್ಚಿನಲ್ಲಿ ನಡೆದ ಪ್ರಾರ್ಥನೆಗಳಲ್ಲಿ ಭಾಗವಹಿಸಿ ಕ್ರೈಸ್ತರಿಗೆ ಕ್ರಿಸ್ ಮಸ್ ಶುಭಾಶಯ ಕೋರಿದರು.