ಸುಳ್ಳುಗಳನ್ನ ತನಿಖೆ ಮಾಡಲು ಆಗುತ್ತದೆಯೇ: ಸಿಎಂ ಸಿದ್ದರಾಮಯ್ಯ !
1 min readಹೆಚ್ ಡಿ ಕುಮಾರಸ್ವಾಮಿ ಯಾವತ್ತು ಸತ್ಯ ಹೇಳಿದ್ದಾರೆ.
ಇತಿಹಾಸದಲ್ಲಿ ಅವರು ಸತ್ಯ ಹೇಳಿರುವ ಒಂದು ನಿದರ್ಶನ ತೋರಿಸಿ. ಅವರ ಸುಳ್ಳುಗಳನ್ನ ತನಿಖೆ ಮಾಡಲು ಆಗುತ್ತದೆಯೇ. ಮಾಡಿರುವ ಆರೋಪಗಳ ಬಗ್ಗೆ ದಾಖಲೆ, ಪುರಾವೆ ಕೊಟ್ಟರೆ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನ ಮಂಡಕನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಹೊಟ್ಟೆ ಕಿಚ್ಚು, ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮಗೆ ದ್ವೇಷದ ರಾಜಕಾರಣ ಮಾಡಿ ಗೊತ್ತಿಲ್ಲ. ಮಾಡುವುದು ಇಲ್ಲ. ಕುಮಾರಸ್ವಾಮಿ ಹೇಳುವುದೆಲ್ಲ ಬರೀ ಸುಳ್ಳು. ಸುಳ್ಳೇ ಅವರ ಮನೆಯ ದೇವರು. ಸುಳ್ಳುಗಳನ್ನ ತನಿಖೆ ಮಾಡಲು ಸಾಧ್ಯವೇ. ಕುಮಾರಸ್ವಾಮಿ ಇಲ್ಲಿಯವರೆಗೆ ಯಾವುದನ್ನಾದರೂ ಸತ್ಯ ಹೇಳಿದ್ದರೆ ತೋರಿಸಿ. ಹೆಚ್ಡಿಕೆ ಬರೀ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಕಿಡಿಕಾರಿದರು.
ನನ್ನ ಮಗ ಯತೀಂದ್ರ ಸಿದ್ದರಾಮಯ್ಯ ವಿಚಾರದಲ್ಲಿ ಬರೀ ಸುಮ್ಮನೆ ಸುಳ್ಳನ್ನು ಹಬ್ಬಿಸಿದರು. ನನ್ನ ಮಗ ನನಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾನೆ. ಆತ ಮಾಜಿ ಶಾಸಕ, ಆಶ್ರಯ ಸಮಿತಿ ಅಧ್ಯಕ್ಷ ಕೂಡ. ಈಗ ನನ್ನ ಪರವಾಗಿ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತಿದ್ದಾನೆ. ಜನರ ಕೆಲಸ ಮಾಡುವುದು ತಪ್ಪಾ?. ಕೆಐಡಿಬಿ ಸದಸ್ಯನಾಗಿರುವ ಕಾರಣ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾನೆ. ಅದರ ವಿಚಾರದಲ್ಲಿ ಬೇರೆ ಬೇರೆ ಅರ್ಥ ಕಲ್ಪಿಸಿದರೆ ಹೇಗೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಗತ್ಯ ಬಿದ್ದರೆ ಹಳೆಯ ಹಗರಣಗಳ ಬಗ್ಗೆ ತನಿಖೆ ನಡೆಸಲಾಗುವುದು. ಈಗಾಗಲೇ ಬಿಟ್ ಕಾಯಿನ್ ಹಗರಣ, ಕೋವಿಡ್ ಹಗರಣ, 40 % ಕಮಿಷನ್ ಹಗರಣ ಸೇರಿದಂತೆ ಈಗಾಗಲೇ ಹಲವು ಪ್ರಕರಣಗಳನ್ನು ತನಿಖೆಗೆ ವಹಿಸಲಾಗಿದ್ದು, ತನಿಖಾ ವರದಿ ಇನ್ನೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜಯ : ತೆಲಂಗಾಣ, ಮಧ್ಯಪ್ರದೇಶ, ಛತ್ತಿಸ್ಘಡ, ರಾಜಸ್ಥಾನಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ. ಈ ರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವುದಿಲ್ಲ. ಲೋಕಸಭಾ ಚುನಾವಣೆ ಮಾರ್ಚ್ ಕೊನೆಯ ವಾರದಲ್ಲಿ ನೋಟಿಫಿಕೇಷನ್ ಆಗುವ ಸಾಧ್ಯತೆ ಇದೆ. ಆದ್ದರಿಂದ ಈ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು.
ರಾಮಮಂದಿರಕ್ಕೆ ನಮ್ಮ ವಿರೋಧ ಇಲ್ಲ. ಸುಪ್ರೀಂಕೋರ್ಟ್ ತೀರ್ಮಾನ ಆಗಿದೆ. ಅದರಂತೆ ದೇವಾಲಯ ನಿರ್ಮಾಣ ಆಗುತ್ತಿದೆ. ರಾಮ ಮಂದಿರದಿಂದ ಮತದಾರರು ಬದಲಾವಣೆ ಆಗುತ್ತಾರೆ ಎಂಬುದು ತಪ್ಪು. ದೇಶದ ಜನ ವಿವಿಧತೆಯಲ್ಲಿ ಏಕತೆ ಬಯಸುತ್ತಾರೆ. ಬ್ರಿಟಿಷರು, ಮೊಘಲರ ದಾಳಿಯ ನಂತರವೂ ದೇಶ ಒಂದಾಗಿದೆ. ದೇಶದಲ್ಲಿ ಬೇರೆ ಬೇರೆ ಭಾಷೆ ಇದ್ದರೂ ಒಗ್ಗಟ್ಟಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವಿ. ಸೋಮಣ್ಣ ಪಕ್ಷಕ್ಕೆ ಬಂದರೆ ಸ್ವಾಗತ : ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಕಾಂಗ್ರೆಸ್ ಸಿದ್ದಾಂತ, ತತ್ವ ಒಪ್ಪಿ ಬಂದರೆ ಸ್ವಾಗತ. ಅದರಲ್ಲಿ ಬಿಜೆಪಿಯ ಮಾಜಿ ಸಚಿವ ವಿ ಸೋಮಣ್ಣ ಪಕ್ಷಕ್ಕೆ ಬಂದರೆ ಸ್ವಾಗತ. ಅದೇ ರೀತಿ ಜೆಡಿಎಸ್ನ ಜಿ ಟಿ. ದೇವೇಗೌಡ ಹಾಗೂ ವಿ. ಸೋಮಣ್ಣ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಿರುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನನ್ನು ಕಂಡರೆ ಭಯ. ಈಗ ಪಂಚರಾಜ್ಯದ ಚುನಾವಣೆಗಳಲ್ಲಿ ಗ್ಯಾರಂಟಿಗಳ ಬಗ್ಗೆ ಟೀಕಿಸುತ್ತಿದ್ದ ಮೋದಿ, ಈಗ ಅದೇ ಗ್ಯಾರಂಟಿಗಳನ್ನ ಬೇರೆ ಕಡೆ ಘೋಷಣೆ ಮಾಡುತ್ತಿದ್ದಾರೆ. ಇದರ ಅರ್ಥ ಏನು? ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.