ದೇವರಮಳ್ಳೂರು ಗ್ರಾಮದಲ್ಲಿ ಬ್ರಹ್ಮರಥೋತ್ಸವ
1 min readದೇವರಮಳ್ಳೂರು ಗ್ರಾಮದಲ್ಲಿ ಬ್ರಹ್ಮರಥೋತ್ಸವ
ಶ್ರೀಮಳ್ಳೂರಾಂಭ ದೇವಿ ಬ್ರಹ್ಮರಥೋತ್ಸವಕ್ಕೆ ಸಜ್ಜು
ಪಂಚ ಮಹಾ ಶಕ್ತಿಗಳಿಗೆ ಮಡಿಲು ತುಂಬಿದ ಗ್ರಾಮ
ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಣೆ ಮಾಡಿದ ಪಂಚ ಶಕ್ತಿ ದೇವತೆಗಳಿಗೆ ಮಡಿಲು ತುಂಬಿದ ಊರು ದೇವರಮಳ್ಳೂರು. ದೇವರ ತವರೂರು ಎಂದು ಖ್ಯಾತಿ ಪಡೆದಿರುವ ದೇವರಮಳ್ಳೂರಿನಲ್ಲಿ ಗ್ರಾಮದೇವತೆ ಶ್ರೀಮಳ್ಳೂರಾಂಬ ದೇವಿ ಬ್ರಹ್ಮರಥೋತ್ಸವ ಡಿಸೆಂಬರ್ ೧೫ರಂದು ನಡೆಯಲಿದ್ದು, ಬ್ರಹ್ಮರಥೋತ್ಸವಕ್ಕಾಗಿ ಊರು ಸಜ್ಜಾಗಿದೆ.
ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮ ಐತಿಹಾಸಿಕವಾಗಿ ತನ್ನದೇ ಆದ ಮಹತ್ವ ಹೊಂದಿದೆ. ಹತ್ತಾರು ದೇವಸ್ಥಾನಗಳಿರುವ ಈ ಊರಿಗೆ ನೂರಾರು ವರ್ಷಗಳ ಇತಿಹಾಸವಿದೆ. ಪೌರಾಣಿಕವಾಗಿಯೂ ಪ್ರಸಿದ್ದಿಯಾಗಿದೆ. ದುಷ್ಟರ ಸಂಹರಿಸಿ, ಶಿಷ್ಠರ ರಕ್ಷಣೆ ಮಾಡಿದ ಪಂಚ ಶಕ್ತಿ ದೇವತೆಗಳಿಗೆ ಮಡಿಲು ತುಂಬಿದ ಊರು. ದೇವರ ತವರೂರು ಎಂದೆ ದೇವರಮಳ್ಳೂರು ಪ್ರಸಿದ್ದಿ. ಈ ಗ್ರಾಮದಲ್ಲಿ ಡಿಸೆಂಬರ್ ೧೫ರ ಭಾನುವಾರ ಗ್ರಾಮ ದೇವತೆ ಶ್ರೀಮಳ್ಳೂರಾಂಬ ದೇವಿಯ ಬ್ರಹ್ಮರಥೋತ್ಸವ ನಡೆಯಲಿದ್ದು, ಸಿದ್ದತೆಗಳು ಸಾಗಿವೆ.
ದೇವರಮಳ್ಳೂರು ಗ್ರಾಮದ ಹೊರವಲಯದಲ್ಲಿ ಗ್ರಾಮ ರಕ್ಷಣೆಗಾಗಿ ನೆಲೆ ನಿಂತ ಶ್ರೀಮಳ್ಳೂರಾಂಬ ದೇವಿಯ ಬ್ರಹ್ಮರಥೋತ್ಸವಕ್ಕಾಗಿ ಊರ ಪ್ರಮುಖ ಬೀದಿಗಳು ವಿದ್ಯುತ್ ದೀಪಗಳಿಂದ ಸಿಂಗಾರಗೊಳ್ಳುತ್ತಿವೆ. ಊರಲ್ಲಿನ ಎಲ್ಲ ದೇವಾಲಯಗಳು, ಊರ ಛಾವಡಿ ತಳಿರು ತೋರಣಗಳಿಂದ ಕಂಗೊಳಿಸತೊಡಗಿದೆ. ದೇವಾಲಯಕ್ಕೆ ಸುಣ್ಣ ಬಣ್ಣ ಬಳಿದು, ತೇರನ್ನು ಶುಚಿಗೊಳಿಸಲಾಗುತ್ತಿದೆ. ಉತ್ಸವ ಮೂರ್ತಿಗಳನ್ನು ರಥೋತ್ಸವಕ್ಕೆ ಸಿದ್ದಗೊಳಿಸಲಾಗುತ್ತಿದೆ.
ಊರಿನವರು ತಮ್ಮ ಬಂಧು ಬಳಗ ನೆಂಟರು ಸ್ನೇಹಿತರು ಅಕ್ಕ ಪಕ್ಕದೂರಿನವರನ್ನು ಬ್ರಹ್ಮರಥೋತ್ಸಕ್ಕೆ ಆಹ್ವಾನಿಸಿ ಹೋಳಿಗೆಯ ಊಟ ಹೆಸರು ಬೇಳೆ ಪಾನಕ ಬೆಲ್ಲದ ಪಾಯಸ ಉಣಬಡಿಸಲು ಸಿದ್ದಗೊಂಡಿದ್ದಾರೆ. ಜನಪದ ಇತಿಹಾಸದ ಕತೆಗಳಲ್ಲಿ ಹೇಳುವಂತೆ ಸಾಮಂತ ರಾಜನಾಗಿದ್ದ ಗೋಪಾಲಗೌಡರ ಆಳ್ವಿಕೆಯಲ್ಲಿನ ಮಡ್ಲೂರು ಮತ್ತು ಏಕಚಕ್ರ ಪುರಿ ಈಗಿನ ಕೈವಾರದ ಮಧ್ಯ ಇರುವ ಅಂಬಾಜಿ ದುರ್ಗದ ಬೆಟ್ಟಗಳ ಸಾಲುಗಳ ಮಧ್ಯ ಅಂಬಾಸುರೆ ಎಂಬ ರಾಕ್ಷಸಿ ನೆಲೆಸಿದ್ದು, ಜನರಿಗೆ ಇನ್ನಿಲ್ಲದ ಉಪಟಳ ಕೊಡುತ್ತಿದ್ದಳಂತೆ.
ರಾಕ್ಷಸಿಯ ಉಪಟಳ ತಡೆಯುವಂತೆ ವಿಶ್ವೇಶ್ವರ ಮುನಿಗಳಲ್ಲಿ ಪ್ರಾರ್ಥನೆ ಮಾಡಿದಾಗ ಅಂಬಾಸುರೆ ಶಿವನ ಪರಮ ಭಕ್ತೆಯಾಗಿದ್ದು, ಘೋರ ತಪಸ್ಸಿನಿಂದ ಸಾವಿಲ್ಲದ ವರ ಪಡೆದಿದ್ದಾಳೆ. ಅವಳನ್ನು ಸಂಹರಿಸಲು ಆದಿಶಕ್ತಿ, ಪರಾಶಕ್ತಿ, ಇಚ್ಛಾಶಕ್ತಿ, ಶಕ್ತಿ, ಕ್ರಿಯಾಶಕ್ತಿ ಎಂಬ ಪಂಚಮಹಾಶಕ್ತಿಗಳಿAದ ಮಾತ್ರ ಸಾಧ್ಯ ಎಂದು ಸಲಹೆ ನೀಡಿದ್ದಾರೆ.
ಶಕ್ತಿ ದೇವತೆಗಳನ್ನು ಆವಾಹನೆ ಮಾಡಲು ಒಂದು ಸಾವಿರ ಹೋಮಗಳನ್ನ ನೆರವೇರಿಸಿ ರಾಕ್ಷಸಿಯ ಸಂಹಾರದ ನಂತರ ಶಕ್ತಿ ದೇವತೆಯರಿಗೆ ಮಡಿಲು ತುಂಬಿದರೆ0ದು ಪ್ರತೀತಿ ಇದೆ. ಅಂಬಾಸುರೆಯ ಸಂಹಾರದ ಸಮಯದಲ್ಲಿ ಹೋಮ ದ್ರವ್ಯಗಳನ್ನು ಸಂಗ್ರಹಿಸಿ ಇಟ್ಟಿದ್ದ ಕಲ್ಲಿನ ಬಟ್ಟಲುಗಳನ್ನು ದೇವರಮಳ್ಳೂರಲ್ಲಿ ಅಲ್ಲಲ್ಲಿ ಈಗಲೂ ಕಾಣಬಹುದು. ಆಗಿನ ಮಡ್ಲೂರು ಗ್ರಾಮಕ್ಕೆ ನಿಷ್ಠಾವಂತ ಕಾವಲುಗಾರನಾಗಿದ್ದ ಕೋಟ್ಲಪ್ಪನ ಹೆಸರಲ್ಲಿ ದೇವಾಲಯ ನಿರ್ಮಿಸಲಾಗಿದೆ.
ಗ್ರಾಮದಲ್ಲಿ ಹಲವು ಶಿಲಾಶಾಸನಗಳು, ವೀರಗಲ್ಲುಗಳು ಇದನ್ನು ಸಾರುತ್ತಿವೆ. ಈ ಊರಿನ ಮಹಿಮೆ ಅರಿತು ತ್ರಿಮತಸ್ಥರಾದ ಮಧ್ವಾಚಾರ್ಯ, ರಾಮಾನುಜಾಚಾರ್ಯರು ಹಾಗೂ ಶಂಕರಾಚಾರ್ಯರು ಭೇಟಿ ನೀಡಿದ ಕುರುಹುಗಳು ಇಲ್ಲಿವೆ. ಇವರ ಮೂರ್ತಿಗಳನ್ನು ಶ್ರೀರಾಮದೇವಾಲಯದಲ್ಲಿ ಸ್ಥಾಪಿಸಲಾಗಿದೆ, ಈಗಲೂ ಪೂಜಿಸಲಾಗುತ್ತಿದೆ. ಇಂತಹ ಪೌರಾಣಿಕ ಹಿನ್ನಲೆಯುಳ್ಳ ದೇವರಮಳ್ಳೂರು ಗ್ರಾಮದಲ್ಲಿ ನಡೆಯುವ ಬ್ರಹ್ಮರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆ ತಾಯಿಯ ದರ್ಶನ ಪಡೆಯುವಂತೆ ದೇವಾಲಯದ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಮುನಿರಾಜುಗೌಡ ಮನವಿ ಮಾಡಿದ್ದಾರೆ.