ಬಾಂಬ್ ಬೆದರಿಕೆ: ದೆಹಲಿಗೆ ಹೊರಟಿದ್ದ ವಿಮಾನ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್
1 min readವಿಮಾನದಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕರೊಬ್ಬರ ಹೇಳಿದ ನಂತರ 185 ಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟಿದ್ದ ಆಕಾಶ ಏರ್ ವಿಮಾನ ಶನಿವಾರ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಯಿತು. ನಂತರ ಅದು ಸುಳ್ಳು ಎಂದು ಗೊತ್ತಾಗಿದ್ದು, ಆ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆಯಿಂದ ವಿಮಾನ ಟೇಕ್ ಆಫ್ ಆದ ನಂತರ, ಪಲ್ಲವ್ ಅಜಯ್ ತ್ಯಾಗಿ ಎಂಬ ಪ್ರಯಾಣಿಕ ಬಾಂಬ್ ಇದೆ ಎಂದು ಕೂಗಲು ಪ್ರಾರಂಭಿಸಿದ್ದು, ಪ್ರಯಾಣಿಕರಲ್ಲಿ ಭಯವನ್ನುಂಟು ಮಾಡಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ಪುಣೆಯಿಂದ ದೆಹಲಿಗೆ ಹೊರಟ್ಟಿದ ಆಕಾಶ ಏರ್ ವಿಮಾನ ಕ್ಯೂಪಿ 1148 ವಿಮಾನದಲ್ಲಿ 185 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಏರ್ ಲೈನ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
“ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಎಲ್ಲಾ ತುರ್ತು ನಿಯಮಗಳನ್ನು ಪಾಲಿಸಿದ ಕ್ಯಾಪ್ಟನ್ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಿದ್ದಾರೆ. ನಂತರ ಏರ್‌ಲೈನ್ಸ್‌ನ ಪ್ರತಿನಿಧಿಯೊಬ್ಬರು ತ್ಯಾಗಿ ವಿರುದ್ಧ ಐಸಿಪಿ ಸೆಕ್ಷನ್ 506-II (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು 505-1 (ಬಿ) (ನಕಲಿ ಸಂದೇಶಗಳನ್ನು ಹರಡಿದ್ದಕ್ಕಾಗಿ) ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಮಾನ ಲ್ಯಾಂಡ್ ಆದ ನಂತರ ಭದ್ರತಾ ಸಿಬ್ಬಂದಿ ಸಂಪೂರ್ಣ ತಪಾಸಣೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ.ಉತ್ತರ ಪ್ರದೇಶದವರಾದ ತ್ಯಾಗಿ ಮೇಲ್ನೊಟಕ್ಕೆ ಮಾನಸಿಕವಾಗಿ ಅಸ್ವಸ್ಥರಾಗಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.