ಅಪರೇಷನ್ ಕಮಲಕ್ಕೆ ಬಿಜೆಪಿ ಒಂದು ಸಾವಿರ ಕೋಟಿ ರೂ. ಬಳಕೆ : ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ
1 min readಅಪರೇಷನ್ ಕಮಲಕ್ಕೆ ಬಿಜೆಪಿ ಒಂದು ಸಾವಿರ ಕೋಟಿ ರೂ. ಬಳಕೆ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಆರೋಪಿಸಿದರು.
ಅಪರೇಷನ್ ಕಮಲಕ್ಕೆ ಬಿಜೆಪಿ ಒಂದು ಸಾವಿರ ಕೋಟಿ ರೂ. ಬಳಕೆ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಆರೋಪಿಸಿದರು.
ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಕಾಲು ಹಿಡಿದು ಸಾವಿರ ಕೋಟಿ ರೂ. ತಂದಿಟ್ಟುಕೊಂಡು ಅಪರೇಷನ್ ಕಮಲಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯ ನಾಯಕರು ಹೈಕಮಾಂಡ್ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಹಾಗಾಗಿ ಅಸ್ತಿತ್ವದಲ್ಲಿ ಇರಲು ಎಂದು ತಲೆ ಬುಡ ಇಲ್ಲದ ಹೇಳಿಕೆ ನೀಡುತ್ತಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನೆಯಲ್ಲಿ ನಡೆದ ಬೋಜನಕೂಟದಲ್ಲಿ ಮುದ್ದೆ ಬಗ್ಗೆ ಚರ್ಚೆಯಾಗಿದೆಯೇ ಹೊರತು ಹುದ್ದೆ ಬಗ್ಗೆ ಚರ್ಚೆಯಾಗಿಲ್ಲ. ಇದನ್ನು ಸಭೆಯಲ್ಲಿ ಇದ್ದವರೇ ಹೇಳುತ್ತಿದ್ದಾರೆ. ಆದರೆ ಬಿಜೆಪಿಯವರು ಕಲ್ಪನೆ ಮಾಡಿಕೊಂಡು ಮಾತನಾಡುತ್ತಿದ್ದಾರೆ. ಡೈನಿಂಗ್ ಟೆಬಲ್ನಲ್ಲಿ ನಡೆದಿದ್ದು, ಬಿಜೆಪಿಯವರಿಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿದರು.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗ ರಾಜ್ಯದ ಒಬ್ಬ ಬಿಜೆಪಿ ನಾಯಕರು ಇರಲಿಲ್ಲ. ಕದ್ದು ಮುಚ್ಚಿ ಮೈತ್ರಿ ಮಾಡಿಕೊಳ್ಳುತ್ತಾರೆ. ಬಿಜೆಪಿಯವರು ಅವರದೇ ಪಕ್ಷದ ನಾಯಕ ಎಂ.ಪಿ.ರೇಣುಕಾಚಾರ್ಯ ಹೇಳುತ್ತಿರುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.
ಆಪರೇಷನ್ ಕಮಲ ನಡೆಸಿ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಸಂಚು ನಡೆಸುತ್ತಿರುವುದು ಗುಟ್ಟೇನೂ ಅಲ್ಲ. ಎಲ್ಲಿ ಸ್ಪಷ್ಟ ಬಹುಮತ ಬರುವುದಿಲ್ಲವೋ ಅಲ್ಲೆಲ್ಲ ಆಪರೇಷನ್ ಕಮಲ ಮಾಡಿಲ್ಲವೆ? ಎಂದು ಕೇಳಿದರು.
ಬಿಜೆಪಿಗೆ ಬಹುಮತ ಬರದೇ ಇರುವ ಮಹಾರಾಷ್ಟ್ರ, ಬಿಹಾರ, ಅಸ್ಸಾಂ, ಮಧ್ಯ ಪ್ರದೇಶದಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದರು. ರಾಜಸ್ಥಾನದಲ್ಲೂ ಪ್ರಯತ್ನ ಮಾಡಿದರು. ಕರ್ನಾಟಕದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ. ಇದು ಬಿಜೆಪಿಯ ಸ್ಟಾಂಟರ್ಡ್ ಆಪರೇಷನ್ ಆಗಿದೆ ಎಂದು ವ್ಯಂಗ್ಯವಾಡಿದರು.
ಒಂದು ಸಾವಿರ ಕೋಟಿ ರೂಪಾಯಿ ಕೊಡಿ, ಸರ್ಕಾರ ರಚನೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈ ಕಾಲು ಬಿದ್ದಿದ್ದಾರೆ. ಅದೇ ದುಡ್ಡು ತಂದು ಇಲ್ಲಿ ಆಪರೇಷನ್ ಕಮಲ ಆಮಿಷಕ್ಕೆ ಬಳಕೆ ಮಾಡುತ್ತಿರಬಹುದು. ಆಪರೇಷನ್ ಕಮಲ ಮಾಡುವವರು ನನ್ನನ್ನಂತೂ ಸಂಪರ್ಕ ಮಾಡಿಲ್ಲ. ನಾವೆಲ್ಲ ಹುಟ್ಟ ಕಾಂಗ್ರೆಸಿಗರು. ನಮ್ಮ ಹತ್ತಿರ ಬರುವುದಿಲ್ಲ. ಆದರೆ ನಮ್ಮ ಪಕ್ಷದ ಒಬ್ಬ ಶಾಸಕರು ಹೇಳುತ್ತಾರೆ ಎಂದರೆ ನಂಬಬೇಕಲ್ಲ ಎಂದು ತಿಳಿಸಿದರು.
“ಯಾದಗಿರಿ ಹಾಗೂ ಕಲಬುರಗಿಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ನಡೆಸುವ ಪ್ರಯತ್ನ ನಡೆದಿದೆ. ಪರೀಕ್ಷೆ ಅಕ್ರಮ ಆಗದಂತೆ ಕ್ರಮ ತೆಗೆದುಕೊಂಡಿದ್ದೇವೆ. ಪರೀಕ್ಷೆ ಕೇಂದ್ರದಲ್ಲಿ ಅಕ್ರಮ ಆಗಿಲ್ಲ. ಪರೀಕ್ಷಾ ಕೇಂದ್ರದ ಪ್ರವೇಶಕ್ಕೂ ಮೊದಲೇ ಅಕ್ರಮ ತಡೆದು ವಶಕ್ಕೆ ಪಡೆದಿದ್ದೇವೆ. ಈಗಾಗಲೇ 9 ಜನ ಅರೆಸ್ಟ್ ಮಾಡಿದ್ದೇವೆ” ಎಂದು ಪರೀಕ್ಷಾ ಅಕ್ರಮದ ಬಗ್ಗೆ ವಿವರಿಸಿದರು.
ದಲಿತ ಸಿಎಂ ವಿಚಾರ ಕುರಿತು ಮಾತನಾಡಿ, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗ ಆ ಪ್ರಶ್ನೆಯೇ ಇಲ್ವಲ್ಲ. ಈಗ ಯಾರ್‍ಯಾರಿಗೆ ಯಾವ ಯಾವ ಹುದ್ದೆ ಕೊಟ್ಟಿದ್ದಾರೋ ಅದನ್ನು ಎಲ್ಲರೂ ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದರು