INDIA ಮೈತ್ರಿಯಲ್ಲಿ ಮಹಾ ಬಿರುಕು: ಇಂಡಿಯಾ ಒಕ್ಕೂಟ ಛಿದ್ರ ಎಂದ ಮಾಜಿ ಸಿಎಂ
1 min read ಕಾಂಗ್ರೆಸ್ ಪಕ್ಷದ ವರ್ತನೆಯಿಂದ ಬೇಸತ್ತು ಇಂಡಿಯಾ ಒಕ್ಕೂಟದ ಪಕ್ಷಗಳು ದೂರವಾಗುತ್ತಿದ್ದು, ಮಮತಾ ಬ್ಯಾನರ್ಜಿ ಹೊರಗೆ ಹೋಗಿದ್ದು, ಶರತ್ ಪವ್ವಾರ್, ನಿತೀಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗಿಟ್ಟಿದ್ದು, ಇಂಡಿಯಾ ಒಕ್ಕೂಟ ಛಿದ್ರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈತ್ರಿಯಿಂದ ಹೊರಗೆ ಬಂದಿದ್ದಾರೆ.
ಶರತ್ ಪವಾರ್ ಕೂಡ ಹೊರ ಬರಲಿದ್ದಾರೆ. ಬಿಹಾರ ಸಿಎಂ ನಿತಿಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗೆ ಇಟ್ಟಿದ್ದಾರೆ. ಇಂಡಿಯಾ ಒಕ್ಕೂಟ ಮುಂದಿನ ದಿನಗಳಲ್ಲಿ ಉಳಿಯುವುದಿಲ್ಲ. ಕಾಂಗ್ರೆಸ್ ನವರ ಕಟಾದಿಂದ ಅವರು ಹೊರಗೆ ಬರುತ್ತಿದ್ದಾರೆ. ಮೊದಿಯವರು 3ನೇ ಬಾರಿಗೆ ಪ್ರಧಾನಿಯಾದ ಮೇಲೆ ಒಕ್ಕೂಟ ಇರುವುದಿಲ್ಲ. ಮಮತಾ ಬ್ಯಾನರ್ಜಿಯವರಿಗೆ ಭ್ರಮನಿರಸನ ಆಗಿದೆ ಎಂದು ಹೇಳಿದರು. ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಗೆ ಕರೆ ತರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಗದೀಶ್ ಶೆಟ್ಟರ್ ಅವರು ಜನಸಂಘದಿಂದ ಇದ್ದವರು, ಅವರಿಗೆ ಕಾಂಗ್ರೆಸ್ ನಲ್ಲಿ ಇರಲು ಕಷ್ಟವಾಗಲಿದೆ. ಅವರನ್ನು ಪಕ್ಷಕ್ಕೆ ಕರೆತರಲು ಯಾರ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ. ಅವರ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿರುತ್ತೇವೆ.ಬಿಹಾರದ ಮಾಜಿ ಸಿಎಂ ದಿ. ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ಎತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದಲಿತರು, ಒಬಿಸಿ ಕಾಂಗ್ರೆಸ್ ನ ಗುತ್ತಿಗೆಯಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿದ್ದು ಯಾರು ? ಕಾಂಗ್ರೆಸ್ ಯಾಕೆ ಕೊಡಲಿಲ್ಲಾ. ಪ್ರಣಬ್ ಮುಖರ್ಜಿ, ಅಬ್ದುಲ್ ಕಲಾಂ ಅವರಿಗೆ ನಾವು ಕೊಟ್ಟಿದ್ದೇವೆ. ಯಾರು ಒಳ್ಳೆಯ ಕೆಲಸ ಮಾಡಿದ್ದಾರೆ ಅವರಿಗೆ ಬಿಜೆಪಿ ಗುರುತಿಸಿ ಭಾರತ ರತ್ನ ಗೌರವ ಕೊಡುತ್ತಿದೆ ಎಂದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಮನ ಕುರಿತು ಆಡಿರುವ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ರಾವಣನ ಕನ್ನಡಕ ಹಾಕಿಕೊಂಡು ನೋಡಿದರೆ ರಾಮ ರಾಜ್ಯ ಕಾಣಿಸುವುದಿಲ್ಲ. ಭಕ್ತಿಯ ಕನ್ನಡಕದಿಂದ ನೋಡಿದರೆ ಎಲ್ಲೆಡೆಯೂ ರಾಮ ಕಾಣಿಸುತ್ತಾನೆ ಎಂದು ಹೇಳಿದರು. ಇನ್ನು ಹಾವೇರಿಯಲ್ಲಿ ಬಿಜೆಪಿ ಗೆಲ್ಲುವ ಅವಕಾಶ ಹೆಚ್ಚಿರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಬಿ.ಸಿ ಪಾಟೀಲ್, ಸಂದೀಪ್ ಪಾಟೀಲ್, ಈಶ್ವರಪ್ಪ ಮಗ ಬಹಳ ಜನ ಇದ್ದಾರೆ ಎಂದು ಹೇಳಿದರು.