ಬೆಂಗಳೂರು-ಮಂಗಳೂರು ಕಾರಿಡಾರ್: ಪ್ರಯಾಣದ ಅವಧಿ ಮೂರುವರೇ ಗಂಟೆಗೆ ಇಳಿಕೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್
1 min read
1 year ago
ಮಂಗಳೂರಿನ ಲಕ್ಷಾಂತರ ಜನ ಉದ್ಯೋಗದಲ್ಲಿ ಬೆಂಗಳೂರಲ್ಲಿ ನೆಲೆಸಿದ್ದು, ಪ್ರತೀ ಭಾರಿ ಊರಿಗೆ ಹೋಗಲು 5 ರಿಂದ 12 ಗಂಟೆವರೆಗೂ ಕಾರು, ಬಸ್, ರೈಲಿನಲ್ಲಿ ಪ್ರಯಾಣದ ಅವಧಿ ಇದೆ. ಇದನ್ನು ಮೂರುವರೇ ಗಂಟೆಗೆ ಇಳಿಸಲಾಗುವುದು. ಇದಕ್ಕಾಗಿ ಸರ್ಕಾರಕ್ಕೆ ಬೆಂಗಳೂರು-ಮಂಗಳೂರು ಕಾರಿಡಾರ್ ನಿರ್ಮಾಣದ ಉದ್ದೇಶ ಇದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
”ಬೆಂಗಳೂರು-ಮಂಗಳೂರು ಕಾರಿಡಾರ್ ನಿರ್ಮಾಣ ಯೋಜನೆ ಜಾರಿಗೆ ಉದ್ದೇಶಿಸಿದ್ದು, ಕರಾವಳಿಯ ಮತ್ತಷ್ಟು ಪ್ರಗತಿಗೆ ಪೂರಕವಾಗಲಿದೆ,” ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ವಿಶ್ವ ಬಂಟರ ಸಮ್ಮೇಳನದ ಅಂಗವಾಗಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ತೆರೆದ ಮೈದಾನದ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ನಡೆದ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಸಮಾರೋಪದಲ್ಲಿ ಮಾತನಾಡಿದರು.
”ಬೆಂಗಳೂರು-ಮಂಗಳೂರು ಕಾರಿಡಾರ್ ನಿರ್ಮಾಣದಿಂದ ಪ್ರಯಾಣದ ಅವಧಿ ಮೂರೂವರೆ ಗಂಟೆಗೆ ಇಳಿಯಲಿದೆ,” ಎಂದ ಅವರು, ”ಮಂಗಳೂರಿನಲ್ಲಿ ಚಿನ್ನ ಸಂಸ್ಕರಣೆ ಉದ್ಯಮದ ನಿಟ್ಟಿನಲ್ಲಿ ಜಾಗ ಕೊಡಲು ಸರಕಾರ ಸಿದ್ಧವಿದ್ದು, ಬಂಡವಾಳ ಹೂಡಿಕೆಗೆ ಮುಂದಾಗುವವರು ಅವಕಾಶ ಸದ್ಬಳಕೆ ಮಾಡಬಹುದು,” ಎಂದರು.
”ದಕ್ಷಿಣ ಕನ್ನಡ ವೇಗವಾಗಿ ಬೆಳೆಯುತ್ತಿದೆ. 20 ವರ್ಷ ಹಿಂದೆ ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಮಂಗಳೂರು ರಾಜ್ಯದ ಎರಡನೇ ನಗರವಾಗಿ ಬೆಳೆಯಬಹುದೆನ್ನುವ ನಿರೀಕ್ಷೆ ನಿಜವಾಗುತ್ತಿದೆ. ಬಂಟರು ಶಿಕ್ಷಣ, ಉದ್ಯಮಕ್ಕೆ ಒತ್ತು ಕೊಡಿ. ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿ ಜನಪರ ಆಡಳಿತದ ಮೂಲಕ ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತಬೇಕು,” ಎಂದರು.
”ಆಡು ಮುಟ್ಟದ ಸೊಪ್ಪಿಲ್ಲ, ಬಂಟರು ಮುಟ್ಟದ ಕ್ಷೇತ್ರವಿಲ್ಲ,” ಎಂದು ಬಣ್ಣಿಸಿದ ಡಾ. ಜಿ.ಪರಮೇಶ್ವರ್, ”ಸಹನಶೀಲ, ಸಾಹಸಿ ವ್ಯಕ್ತಿತ್ವದ ಬಂಟರು ಧೈರ್ಯವಂತರು. ಜಗತ್ತಿನಲ್ಲಿ 200 ಬಂಟರ ಸಂಘ ಸ್ಥಾಪನೆ, ನಾಡಿಗೆ ಕೊಡುಗೆ ಶ್ಲಾಘನೀಯ,” ಎಂದರು.