ಪ.ಬಂಗಾಳ: ಗರ್ಭಿಣಿಯಾಗುತ್ತಿರುವ ಮಹಿಳಾ ಕೈದಿಗಳು- ಜೈಲಿನಲ್ಲಿ 196 ಶಿಶುಗಳ ಜನನ
1 min readಪಶ್ಚಿಮ ಬಂಗಾಳದ ವಿವಿಧ ಸುಧಾರಣಾ ಜೈಲಿನಲ್ಲಿ ಬಂಧನದಲ್ಲಿರುವ ಕೆಲವು ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿದ್ದು, ಈವರೆಗೆ 196 ಶಿಶುಗಳು ಜನಿಸಿವೆ ಎಂದು ಕಳವಳ ವ್ಯಕ್ತಪಡಿಸಿರುವ ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಇರುವ ಸಲಹೆಗಾರ) ಕೋಲ್ಕತ್ತಾ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ, ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಭಾಗೀಯ ಪೀಠದೆದುರು ಪ್ರಕರಣವನ್ನು ಪ್ರಸ್ತಾಪಿಸುವಂತೆ ಸೂಚಿಸಿದೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜೈಲು ಸುಧಾರಣೆಗಳು ಮತ್ತು ಸುಧಾರಣಾ ಗೃಹಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ವಿವರಿಸುವಾಗ ಅಮಿಕಸ್ ಕ್ಯೂರಿ ಈ ಹೇಳಿಕೆ ನೀಡಿದ್ದಾರೆ.
ಕಾರಾಗೃಹಗಳಲ್ಲಿ ಕೈದಿಗಳು ಹೆಚ್ಚುತ್ತಿರುವ ಕಾರಣ ಮೇಲ್ವಿಚಾರಣೆ ನಡೆಸಲು ಮತ್ತು ವಿಭಾಗೀಯ ಪೀಠದ ಮುಂದೆ ಅಲ್ಲಿನ ಸಮಸ್ಯೆಗಳನ್ನು ವಿವರಿಸಿ, ಸಲಹೆಗಳನ್ನು ನೀಡಲು 2018 ರಲ್ಲಿ ಕೋಲ್ಕತ್ತಾ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಅಮಿಕಸ್ ಕ್ಯೂರಿಯಾಗಿ ವಕೀಲ ತಪಸ್ ಕುಮಾರ್ ಭಂಜಾ ಅವರನ್ನು ನೇಮಕ ಮಾಡಿತ್ತು.
ತಪಸ್ ಕುಮಾರ್ ಅವರು ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿರುವ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ್ದು, ಸುಧಾರಣಾ ಗೃಹಗಳ ಪುರುಷ ಉದ್ಯೋಗಿಗಳು ಮಹಿಳಾ ಕೈದಿಗಳಿರುವ ಆವರಣ ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿದ್ದಾರೆ.