ಪಾಳು ಬಿದ್ದ ಬದನವಾಳು ಉಪ ಪೊಲೀಸ್ ಠಾಣೆ
1 min readಪಾಳು ಬಿದ್ದ ಬದನವಾಳು ಉಪ ಪೊಲೀಸ್ ಠಾಣೆ
ಮುಚ್ಚಿ ಹೋದ ಉಪ ಪೊಲೀಸ್ ಠಾಣೆ ಕಾಯಕಲ್ಪ ಯಾವಾಗ
ಗೃಹ ಸಚಿವರನ್ನು ಬೇಡುತ್ತಿರುವ ಸುತ್ತಮುತ್ತಲ ನಾಗರಿಕರು
ದಿವಂಗತ ಶ್ರೀನಿವಾಸ್ ಪ್ರಸಾದ್ ಹಾಗೂ ದಿವಂಗತ ಧುವನಾರಾಯಣ್ ಅವರ ನಿರಂತರ ಒತ್ತಡಕ್ಕೆ ಮಣಿದ ಸರ್ಕಾರ ಸ್ಥಾಪಿಸಿದ ಬದನವಾಳು ಉಪ ಪೊಲೀಸ್ ಠಾಣೆ ಅವಸಾನದ ಅಂಚಿಗೆ ತಲುಪಿದೆ. ಪೊಲೀಸ್ ಇಲಾಖೆ ನಿರ್ಲಕ್ಷಕ್ಕೆ ಒಳಗಾಗಿ ನಿರಪಯುಕ್ತವಾಗಿ ಪಾಳು ಬಿದ್ದಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಸುಸಜ್ಜಿತ ಕಟ್ಟಡ ಬಳಕೆಗೆ ಬಾರದೆ ಮೂಕ ವೇಧನೆ ಅನುಭವಿಸುತ್ತಿದೆ. ಕಿಡಿಗೇಡಿಗಳು, ಸಮಾಜ ಘಾತಕರಿಗೆ ಸಿಂಹಸ್ವಪ್ನವಾಗಿದ್ದ ಠಾಣೆ ಇದೀಗ ಕೇಳುವವರಿಲ್ಲದೆ ಅಸ್ತಿತ್ವಕ್ಕಾಗಿ ಎದುರು ನೋಡುತ್ತಿದೆ.
ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಹಿಂದೆ ನಡೆದ ಮತೀಯ ಸಂಘರ್ಷ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸಂಚಲನ ಮೂಡಿಸಿತ್ತು. ಕಿಡಿಗೇಡಿಗಳ ಅಟ್ಟಹಾಸಕ್ಕೆ ಬದನವಾಳು ಗ್ರಾಮ ನಲುಗಿತ್ತು. ಸಮಾಜದ ಸ್ವಾಸ್ಥ ಹಾಳು ಮಾಡುವ ಖದೀಮರ ಹೆಡೆಮುರಿ ಕಟ್ಟುವ ಉಶದಿಂದಲೇ ಇದು ಉಪಠಾಣೆ ಸ್ಥಾಪನೆ ಆಗಲೇಬೇಕೆಂದು ಪಟ್ಟುಹಿಡಿದ ಶ್ರೀನಿವಾಸ್ ಪ್ರಸಾದ ಹಾಗೂ ಧುವನಾರಾಯಣ್ ಸರ್ಕಾರದ ಕಣ್ಣು ತೆರೆಸಿ ಯಶಸ್ವಿಯಾಗಿ 1992-93ನೇ ಸಾಲಿನಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಠಾಣೆ ಚಾಲನೆಗೆ ಬಂತು.
ಹತ್ತಾರು ವರ್ಷಗಳ ಕಾಲ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಹಿತರಕ್ಷಣೆಗಾಗಿ ಸ್ಪಂದಿಸಿದ ಪೊಲೀಸ್ ಠಾಣೆ ಇದೀಗ ಪಾಳು ಬಿದ್ದಿದೆ. ರವಿ.ಡಿ.ಚೆನ್ನಣ್ಣನವರ್ ಅವರು ಮೈಸೂರು ಜಿಲ್ಲಾ ಅಧೀಕ್ಷಕರಾಗಿದ್ದ ಸಮಯದಲ್ಲಿ ಈ ಉಪ ಪೊಲೀಸ್ ಠಾಣೆಯ ಉಸಿರು ಸ್ಥಗಿತವಾಯಿತು. ಸಾಕಷ್ಟು ಅನುಕೂಲಗಳಿದ್ದ ಸುಸಜ್ಜಿತ ಕಟ್ಟಡ ಕ್ರಮೇಣ ಅವಸಾನದ ಅಂಚಿಗೆ ತಲುಪಿದೆ. ಲಕ್ಷಾಂತರ ರೂ ವೆಚ್ಚ ಮಾಡಿದ ಕಟ್ಟಡಕ್ಕೆ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಇಲ್ಲಿ ನಡೆಯಬೇಕಿದ್ದ ಕಾರ್ಯಚಟುವಟಿಕೆಗಳು ದೊಡ್ಡ ಕವಲಂದೆ ಪೊಲೀಸ್ ಠಾಣೆಗೆ ಶಿಫ್ಟ್ ಆಗಿದೆ.
ಬದನವಾಳು ಗ್ರಾಮದಲ್ಲಿ ಮುಚ್ಚಿ ಹೋಗಿರುವ ಸುಸಜ್ಜಿತ ಕೊಠಡಿಯಲ್ಲಿ ಎರಡು ಸೆಲ್ ಗಳಿವೆ. ಪೀಠೋಪಕರಣಗಳು ಸಧ್ಯ ಗೆದ್ದಲು ಹಿಡಿದಿದೆ. ಕೇಳುವವರಿಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎನ್ನಲಾಗಿದೆ. ಎಲ್ಲಾ ರೀತಿಯ ಮೂಲ ಸೌಕರ್ಯಗಳಿದ್ದರೂ ಇದನ್ನ ಕಡೆಗಣಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ನಂಜನಗೂಡು ಚಾಮರಾಜನಗರ ರಾಷ್ಟಿಯ ಹೆದ್ದಾರಿಯಲ್ಲಿರುವ ಈ ಉಪ ಪೊಲೀಸ್ ಠಾಣೆಗೆ ಜೀವ ತುಂಬಲು ಗೃಹ ಸಚಿವರೇ ಮನಸ್ಸು ಮಾಡಬೇಕಿದೆ. ಸ್ಥಳೀಯರ ಪಾಲಿಗೆ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ವರದಾನವಾಗಿದ್ದ ಈ ಉಪಠಾಣೆಗೆ ಕಾಯಕಲ್ಪ ನೀಡಿ ಮರುಬಳಕೆ ಮಾಡುವರೇ, ಕಾದು ನೋಡಬೇಕಿದೆ.