ಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ಅರಿವು ತರಬೇತಿ
1 min readಅನಕ್ಷರಸ್ಥ ಗ್ರಾಪಂ ಸದಸ್ಯರಿಗೆ ಅರಿವು ತರಬೇತಿ
ಕನಿಷ್ಠ ಜ್ಞಾನ ಪಡೆಯಲು ವಯಸ್ಸಿನ ಮುಜುಗರ ಬೇಡ
ಬಾಗೇಪಲ್ಲಿಯಲ್ಲಿ ವಿನೂತನ ಕಾರ್ಯಕ್ರಮಕ್ಕೆ ಚಾಲನೆ
ಗ್ರಾಮಾಭಿವೃದ್ಧಿಯೇ ದೇಶಾಭಿವೃದ್ಧಿ ಎನ್ನುವಂತೆ ದೇಶದಲ್ಲಿ ಉತ್ತಮ ಆಡಳಿತ ನಡೆಯಲು ಗ್ರಾಮ ಪಂಚಾಯತಿ ಮಟ್ಟದಲ್ಲೇ ಪರಿಣಾಮಕಾರಿ ಮತ್ತು ಪ್ರಾಮಾಣಿಕ ಆಡಳಿತ ನಡೆಸಬೇಕು ಎಂದು ಶಿಕ್ಷಣ ಸಮನ್ವಯ ಅಧಿಕಾರಿ ಆರ್. ವೆಂಕಟರಾಮ್ ತಿಳಿಸಿದರು.
ಗ್ರಾಮಾಭಿವೃದ್ಧಿಯೇ ದೇಶಾಭಿವೃದ್ಧಿ ಎನ್ನುವಂತೆ ದೇಶದಲ್ಲಿ ಉತ್ತಮ ಆಡಳಿತ ನಡೆಯಲು ಗ್ರಾಮ ಪಂಚಾಯತಿ ಮಟ್ಟದಲ್ಲೇ ಪರಿಣಾಮಕಾರಿ ಮತ್ತು ಪ್ರಾಮಾಣಿಕ ಆಡಳಿತ ನಡೆಸಬೇಕು ಎಂದು ಶಿಕ್ಷಣ ಸಮನ್ವಯ ಅಧಿಕಾರಿ ಆರ್. ವೆಂಕಟರಾಮ್ ತಿಳಿಸಿದರು. ಬಾಗೇಪಲ್ಲಿ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳಿಗೆ ಸಾಕ್ಷರತಾ ಕಾರ್ಯಕ್ರಮದಡಿ ಸಾಕ್ಷರತಾ ಬೋಧಕರ ಮತ್ತು ಅರಿವು ಮೇಲ್ವಿಚಾರಕರ ತರಬೇತಿಯನ್ನು ಆ.26 ರಿಂದ 31 ರವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವೆಂಕಟರಾಮ್, ಅಂಬೇಡ್ಕರ್ ಅವರು ದೇಶದ ಪ್ರತಿ ಪ್ರಜೆಯನ್ನು ಗಮನದಲ್ಲಿಟ್ಟುಕೊಂಡು, ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವ ಸಂವಿಧಾನ ನೀಡಿದ್ದಾರೆ. ಹಾಗಾಗಿ ಆಡಳಿತದಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಿದ್ದು, ಅನಕ್ಷರಸ್ಥರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಚುನಾಯಿತರಾದವರನ್ನು ಸಾಕ್ಷರರನ್ನಾಗಿಸಲು ತರಬೇತಿಗೊಳಿಸಲಾಗುತ್ತಿದೆ. ಇದರ ಸದುಪಯೋಗ ಪಡಿಯಬೇಕು. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ವ್ಯವಹಾರಿಕ, ಆಡಳಿತಾತ್ಮಕ ಪತ್ರಗಳನ್ನು ಓದಲು, ಮಾಹಿತಿ ತಿಳಿಯಲು ಕನಿಷ್ಠ ಮಟ್ಟದ ಸಾಕ್ಷರತೆ ಪಡೆಯಬೇಕು ಎಂದು ತಿಳಿಸಿದರು.
ಇದೇ ವೇಳೆ ಸಾಕ್ಷರತಾ ಇಲಾಖೆ ವಿಕೇಂದ್ರೀಕೃತ ಸಂಯೋಜಕ ಮಾರತಿ ಪ್ರಸಾದ್ ಮಾತನಾಡಿ, ಗ್ರಾಮ ಪಂಚಾಯತಿಗಳಿಗೆ ಸರಕಾರಗಳಿಂದ ಯಾವ ಯಾವ ಯೋಜನೆಗಳಿಂದ ಎಷ್ಟೆಷ್ಟು ಅನುದಾನ ದೊರೆಯುತ್ತಿದೆ. ಅದರ ಫಲಾನುಭವಿಗಳು ಯಾರು, ಸಮರ್ಪಕ ರೀತಿಯಲ್ಲಿ ಯೋಜನೆಗಳ ಅನುಷ್ಠಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾಹಿತಿ ತಿಳಿಯಲು ವಿದ್ಯಾಭ್ಯಾಸ ಮುಖ್ಯವಾಗುತ್ತದೆ. ಅಲ್ಲದೆ ಜವಬ್ದಾರಿಗಳನ್ನು ಮತ್ತು ಜನಪ್ರತಿನಿಧಿಯಾಗಿ ಮಾಡಬೇಕಾದ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಲು ಶಿಕ್ಷಣ ಪಡೆಯಬೇಕು. ಇದಕ್ಕೆ ಯಾವುದೇ ವಯಸ್ಸಿನ ಮುಜುಗರ ಪಡಬಾರದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಕ್ಷರತೆ ಶಿವಪ್ಪ, ಗ್ರಂಥಪಾಲಕ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.