ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಚಿತ್ರಾವತಿ ನದಿಯ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಬೇಕು

1 min read

ಚಿತ್ರಾವತಿ ನದಿ ಉಳಿಸಿ ಆಂದೋಲನ ಅಭಿಯಾನ
ಚಿತ್ರಾವತಿ ನದಿಯ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಬೇಕು
ಪೋಷಕ ಕಾಲುವೆಗಳ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕು
ಎಚ್‌ಎನ್ ವ್ಯಾಲಿ ತ್ಯಾಜ್ಯ ನೀರು ಚಿತ್ರಾವತಿ ನದಿಗೆ ಬಿಡಬಾರದು

ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಚಿತ್ರಾವತಿ ನದಿ ಉಳಿಸಿ ಅಭಿಯಾನ ಕಾವೇರುತ್ತಿದೆ. ಬರದ ನಾಡಾದ ಬಾಗೇಪಲ್ಲಿಯಲ್ಲಿ ಹಲವು ದಶಕಗಳ ಕಾಲ ಹನಿ ನೀರಿಗೂ ಪರದಾಡಿದ ಬಾಗೇಪಲ್ಲಿ ತಾಲ್ಲೂಕಿನ ಜನತೆ ಇದೀಗ ನದಿ ಉಳಿಸುವ ಅಭಿಯಾನಕ್ಕೆ ಮುಂದಾಗಿದ್ದಾರೆ.

ಬಾಗೇಪಲ್ಲಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಜೀವ ಜಲಕ್ಕಾಗಿ ನದಿ ಉಳಿಸಿ ಅಭಿಯಾನ  ಆಯೋಜಿಸಿದ್ದು, ಈ ವೇಳೆ ಹಿರಿಯ ವಕೀಲ ಎ.ಜಿ.ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಗೆ ಬರಲಿಲ್ಲ ಶಾಶ್ವತ ನೀರಾವರಿ, ಹೇಳಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲಾ ನತದೃಷ್ಟ ಜಿಲ್ಲೆಯಾಗಿದ್ದು, ಯಾವುದೇ ಶಾಶ್ವತ ನದಿ ನಾಲೆಗಳಿಲ್ಲದೆ ಮಳೆ ಆಶ್ರಯಿಸಿರುವ ಬಯಲು ಸೀಮೆ ಪ್ರದೇಶವಾಗಿದೆ. ಅಧಿಕಾರ ಅನುಭವಿಸಿದ ಜಿಲ್ಲೆಯ ಜನಪ್ರತಿನಿಧಿಗಳ ದೌರ್ಬಲ್ಯ, ಇಚ್ಛಾಶಕ್ತಿ ಕೊರತೆ ಪರಿಣಾಮ ದಶಕಗಳ ಕಂಡರೂ ಜಿಲ್ಲೆಗೆ ಶಾಶ್ವತ ನೀರಾವರಿ ಬರಲಿಲ್ಲ ಎಂದು ಆರೋಪಿಸಿದರು.

ಎತ್ತಿನಹೊಳೆ ಹೆಸರಲ್ಲಿ ಎರಡು ಚುನಾವಣೆ ಎದುರಿಸಿದ ಜನಪ್ರತಿನಿಧಿಗಳಿಗೆ, ರಾಜಕಾರಣಿ ಗಳಿಗೆ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಎತ್ತಿನಹೊಳೆ ನೆನಪು ಆಗುತ್ತಿದೆ. ಸತತ ೩ ದಶಕಗಳ ಕಾಲ ನೀರಾವರಿ ವಿಚಾರದಲ್ಲಿ ಜಿಲ್ಲೆಗೆ ಆಗಿರುವ ಮೋಸ, ಅನ್ಯಾಯದಿಂದ ರೋಸಿ ಹೋಗಿರುವ ಜಿಲ್ಲೆಯ ಜನತೆ ಸದ್ದಿಲ್ಲದೆ ನದಿ ಉಳಿಸುವ ಅಭಿಯಾನಕ್ಕೆ ಸಜ್ಜಾಗುತ್ತಿರುವುದಾಗಿ ಹೇಳಿದರು. ಜಿಲ್ಲೆಗೆ ಬೆಂಗಳೂರಿನ ಸಂಸ್ಕರಿತ ತ್ಯಾಜ್ಯ ನೀರು ಎಚ್‌ಎನ್ ವ್ಯಾಲಿ ಯೋಜನೆಯಡಿ ಜಿಲ್ಲೆಯ ಕೆರೆಗಳಿಗೆ ಹರಿಸಿದ ಬಳಿಕ ನೀರಿನ ಗುಣಮಟ್ಟದ ಬಗ್ಗೆ ಜನರಲ್ಲಿ ಆತಂಕ ಮರೆಯಾಗಿಲ್ಲ ಎಂದರು.

ಮೂರನೇ ಹಂತದ ಶುದ್ಧೀಕರಣದ ಬಗ್ಗೆಯೂ ಸರ್ಕಾರ ಗಂಭೀರವಾಗಿ ಕಾಳಜಿ ವಹಿಸುತ್ತಿಲ್ಲ. ಜಿಲ್ಲೆಯಲ್ಲಿ ದಶಕಗಳ ಹಿಂದೆ ಜೀವ ನದಿಗಳಾಗಿ ಹರಿಯುತ್ತಿದ್ದ ಚಿತ್ರಾವತಿ ನದಿ ಉಳಿಸಲು ಹಲವು ಜನಪರ ಸಂಘಟನೆಗಳು, ಪರಿಸರವಾದಿಗಳು, ನೀರಾವರಿ ಹೋರಾಟಗಾರರು, ನಿವೃತ್ತ ಸರ್ಕಾರಿ ಅಧಿಕಾರಿಗಳು, ಚಿಂತಕರು ಕನ್ನಡ ಸಂಘಟನೆಗಳು, ರೈತ ಸಂಘಟನೆಗಳು, ಪ್ರಗತಿಪರ ರೈತರು ಹಾಗೂ ಪತ್ರಕರ್ತರು ಕೈ ಜೋಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಈಗ ನದಿಗಳ ಉಳಿಸಿ ಅಭಿಯಾನ ಆರಂಭವಾಗಿದೆ ಎಂದು ಹೇಳಿದರು.

ಚಿತ್ರಾವತಿ ಉಳಿಸಿ ಆಂದೋಲನದ ರಾಜ್ಯ ಕಾರ್ಯದರ್ಶಿ ರಾಜಶೇಖರ ನಾಯ್ಡು ಮಾತನಾಡಿ, ಚಿತ್ರಾವತಿ ನದಿ ಉಳಿಸಿ ಅಭಿಯಾನದ ಭಾಗವಾಗಿ ಸಮಗ್ರ ನೀಲನಕ್ಷೆ ಮಂಡಿಸಿ, ಚಿತ್ರಾವತಿ ಕಲುಷಿತ ಆಗಿರುವ ಬಗ್ಗೆ, ಗಣಿಗಾರಿಕೆ ಪ್ರಭಾವ, ಅಂತರ್ಜಲದ ದುಸ್ಥಿತಿ, ಚಿತ್ರಾವತಿ ಅಚ್ಚುಕಟ್ಟು ಒತ್ತುವರಿದಾರರಿಂದ ಹೇಗೆ ಮಾಯವಾಗಿದೆ ಎಂಬ ಪಕ್ಷಿನೋಟ ಜನರ ಮುಂದೆ ಇಟ್ಟು ಚಿತ್ರಾವತಿ ನದಿ ಉಳಿಸಿ ಅಭಿಯಾನ ಮಾಡುವುದಾಗಿ ಹೇಳಿದರು.

ಚಿತ್ರಾವತಿ ನದಿಯಿಂದ ನೂರಾರು ಕೆರೆಗಳಿಗೆ ನೀರು ಪೂರೈಸುವ ಕೆರೆಗಳ ಪೋಷಕ ಕಾಲುವೆಗಳ ಒತ್ತುವರಿ ತೆರುವಾಗಬೇಕು, ಚಿತ್ರಾವತಿ ನದಿ ಸುತ್ತ ಶೇ.೩೩ ರಷ್ಟು ಅರಣ್ಯ, ತೋಟಗಾರಿಕೆ, ಸಾಮಾಜಿಕ ಅರಣ್ಯ ಬೆಳೆಸಬೇಕಿದೆ. ಚಿತ್ರಾವತಿ ನದಿಗೆ ಕೊಳಚೆ ನೀರಾದ ಎಚ್‌ಎನ್ ವ್ಯಾಲಿ ನೀರು ಹರಿಸಬಾರದು. ಜಿಲ್ಲೆಯಲ್ಲಿ ಚಿತ್ರಾವತಿ ನದಿ ಮಹತ್ವದ್ದಾಗಿದೆ. ಇದರ ಜಲಾಯನದ ವ್ಯಾಪ್ತಿಯಲ್ಲಿ ಹಲವು ದಶಕಗಳ ಹಿಂದೆ ಎಗ್ಗಿಲ್ಲದೇ ನಡೆದ ಮರಳು  ಪಿನಾಕಿನಿ ನದಿಯನ್ನು ಆಹುತಿ ಪಡೆದಿದೆ. ಮಳೆಗಾಲದಲ್ಲಿ ಸುಮಾರು 7 ಟಿ.ಎಂಸಿ ನೀರು ವ್ಯರ್ಥವಾಗಿ ಆಂಧ್ರಕ್ಕೆ ಹರಿದು ಹೋಗುತ್ತಿದೆ. ಆದ್ದರಿಂದ ನದಿಯನ್ನು ಸಮಗ್ರವಾಗಿ ಪುನಶ್ಚೇತನಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.

ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಜಲ ಸಂಪನ್ಮೂಲ ಅಧಿಕಾರಿಗಳ ಜೊತೆ ಜಲ ಸಂವಾದ ಏರ್ಪಡಿಸಿ ಚುನಾಯಿತ ಜನಪ್ರತಿನಿಧಿಗಳು, ಜಲತಜ್ಞರು, ಪರಿಸರ ವಾದಿ ಗಳು, ಆಸಕ್ತ ಸಂಘ, ಸಂಸ್ಥೆಗಳು, ಪ್ರಗತಿಪರ ರೈತರನ್ನು ಸಮಾಲೋಚನಾ ಸಭೆಗೆ ಆಹ್ವಾನಿಸಿ ಚಿತ್ರಾವತಿ ನದಿ ಪುನಶ್ಚೇನಕ್ಕೆ ಸೂಕ್ತ ನಿರ್ಧರ ತೆಗೆದುಕೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು. ಚಿತ್ರಾವತಿ ಸಂಸ್ಕೃತಿ, ಸಂಪತ್ತು ಹಾಗೂ ಸಮೃದ್ಧಿಯನ್ನು ಸಂರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಚಿತ್ರಾವತಿ ನೀರಾವರಿ ಹೋರಾಟ ಸಮಿತಿ ರೂಪಿಸಲಾಗಿದೆ. ಜಿಲ್ಲೆಗೆ ಎತ್ತಿನಹೊಳೆಯಿಂದ ನೀರಿನ ನ್ಯಾಯ ಸಿಗುವುದಿಲ್ಲ, ಮಳೆ ನೀರು ಸಂರಕ್ಷಿಸಿ ಕೆರೆಗಳಿಗೆ ಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕು, ಕೆರೆಗಳ ಹೂಳು ತೆಗೆಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದರು.

ಸಿಪಿಎಂ ಮುಖಂಡ ಚನ್ನರಾಯಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಹಲವಾರು ಕ್ರಾಂತಿಗಳಾಗಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ದೊರೆಯಲೆಂದು ಆರೋಗ್ಯಕ್ಕೆ ಮಾರಕವಾದ ಕೀಟನಾಶಕಗಳು ಹಾಗೂ ರಸಗೊಬ್ಬರಗಳ ಬಳಕೆ ಯಾಗುತ್ತಿದೆ. ಮಳೆಗಾಲದಲ್ಲಿ ತೋಟ, ಹೊಲ-ಗದ್ದೆಗೆ ನುಗ್ಗುವ ನೀರು ಹರಿದುಬಂದು ನದಿ ಸೇರಿದಾಗ, ಆ ನೀರು ವಿಷಯುಕ್ತವಾಗುತ್ತದೆ. ಇಂಥ ನೀರನ್ನು ಪ್ರಾಣಿ-ಪಕ್ಷಿ, ಜಾನುವಾರುಗಳಷ್ಟೇ ಅಲ್ಲದೆ ಜನ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಸಹಜ ಎಂದರು.

ಚಿತ್ರಾವತಿ ನದಿ ನೀರು ಕುಡಿಯಲಾಗಲೀ, ನಿತ್ಯ ಬಳಕೆಗಾಗಲೀ ಯೋಗ್ಯವಾಗಿಲ್ಲವೆಂದು ವರದಿಗಳು ಹೇಳುತ್ತವೆ. ಸಾಕ್ಷಾತ್ ದೇವರ ಸ್ವರೂಪ ಎಂದು ನಂಬಲಾಗಿರುವ ನೀರು ನಾವು ಬರೀ ದಾಹ ತಣಿಸುವ ಹಾಗೂ ಶುಚಿಗೊಳಿಸುವ ಒಂದು ವಸ್ತುವೆಂಬ0ತೆ ನೋಡುತ್ತಿರುವುದು ವಿಷಾದನೀಯ. ಪರಿಸರದ ಮೇಲೆ ಅವ್ಯಾಹತವಾಗಿ ನಡೆದಿರುವ ದೌರ್ಜನ್ಯದಿಂದ ನಮ್ಮ ಮುಂದಿನ ತಲೆಮಾರು ಬೆಲೆ ತೆರಬೇಕಾಗುತ್ತದೆ. ಪ್ರಕೃತಿ ನಮಗೆ ನೀಡಿದ ಪಂಚತಗಳನ್ನು ಭಕ್ತಿ`ಭಾವದಿಂದ ಬಳಸಿ ಮುಂದಿನ ಪೀಳಿಗೆಯೂ ಅನುಭವಿಸಲು ಯೋಗ್ಯವಾಗಿರುವಂತೆ ಉಳಿಸಿ ಹೋಗುವ ಮನಃಸ್ಥಿತಿ ನಮ್ಮಲ್ಲಿ ಬರಬೇಕು. ಇಲ್ಲವಾದಲ್ಲಿ ಮುಂದಿನ ಮಕ್ಕಳೇ ನಮಗೆ ಶಾಪ ಹಾಕುತ್ತಾರೆ ಎಂದು ಹೇಳಿದರು.

About The Author

Leave a Reply

Your email address will not be published. Required fields are marked *