ವಿಧಾನಸಭೆ ಉಪಚುನಾವಣೆ: ಇಂಡಿಯಾ ಬಣಕ್ಕೆ 10, ಬಿಜೆಪಿಗೆ 2 ಸ್ಥಾನ
1 min readಏಳು ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆಲ್ಲುವ ಮೂಲಕ ‘ಇಂಡಿಯಾ’ ಬಣದ ಪಕ್ಷಗಳು ಮೇಲುಗೈ ಸಾಧಿಸಿವೆ. ಬಿಜೆಪಿ 2 ಕಡೆ ಜಯ ಸಾಧಿಸಿದ್ದರೆ, ಇನ್ನೊಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.
ಪಶ್ಚಿಮ ಬಂಗಾಳದ 4, ಹಿಮಾಚಲ ಪ್ರದೇಶದ 3, ಉತ್ತರಾಖಂಡದ 2 ಹಾಗೂ ಪಂಜಾಬ್, ಮಧ್ಯಪ್ರದೇಶ, ಬಿಹಾರ, ತಮಿಳುನಾಡಿನ ತಲಾ 1 ಕ್ಷೇತ್ರಗಳಿಗೆ ಬುಧವಾರ (ಜುಲೈ 10) ಮತದಾನ ನಡೆದಿತ್ತು.
ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಇಂಡಿಯಾ ಹಾಗೂ ಎನ್‌ಡಿಎ ಮೈತ್ರಿ ಪಕ್ಷಗಳ ನಡುವೆ ನೇರ ಹಣಾಹಣಿ ಇತ್ತು.
‘ಇಂಡಿಯಾ’ ಬಣದಿಂದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ಡ್ರಾವೀಡ ಮುನ್ನೇತ್ರ ಕಳಗಂ (ಡಿಎಂಕೆ) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
* ಪಶ್ಚಿಮ ಬಂಗಾಳದ ನಾಲ್ಕೂ ಕ್ಷೇತ್ರಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಹುರಿಯಾಳುಗಳ ಎದುರು ಜಯ ಸಾಧಿಸಿದ್ದಾರೆ. ರಾಯ್‌ಗಂಜ್ ಕ್ಷೇತ್ರದಲ್ಲಿ ಕೃಷ್ಣ ಕಲ್ಯಾಣಿ ಅವರು ಮಾನಸ್ ಕುಮಾರ್ ಘೋಷ್ ಎದುರು 50,077 ಮತಗಳಿಂದ, ರಾಣಾಘಾಟ್ ದಕ್ಷಿಣದಲ್ಲಿಎಂ.ಎನ್.ಅಧಿಕಾರಿ ಅವರು ಮನೋಜ್ ಕುಮಾರ್ ಬಿಸ್ವಾಸ್ ಎದುರು 74,485 ಮತಗಳಿಂದ ಗೆಲುವು ಗೆದ್ದಿದ್ದಾರೆ. ಮಧುಪರ್ಣ ಠಾಕೂರ್‌ಅವರು ಬಾಗ್ದಾ ಕ್ಷೇತ್ರದಲ್ಲಿ ಬಿ.ಕೆ. ಬಿಸ್ವಾಸ್ ಅವರನ್ನು 74,251 ಮತಗಳಿಂದ ಹಾಗೂ ಸುಪ್ತಿ ಪಾಂಡೆ ಅವರು ಮಣಿಕ್ತಾಲಾದಲ್ಲಿ ಕಲ್ಯಾಣ್ ಚೌಬೇ ಅವರನ್ನು 62,312 ಮತಗಳಿಂದ ಮಣಿಸಿದ್ದಾರೆ.
* ಹಿಮಾಚಲ ಪ್ರದೇಶದ ಮೂರು ಕ್ಷೇತ್ರಗಳ ಪೈಕಿ ಎರಡು ಕಾಂಗ್ರೆಸ್ ಪಾಲಾಗಿವೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಅವರು ಬಿಜೆಪಿಯ ಹೊಶಿಯಾರ್ ಸಿಂಗ್ ಅವರನ್ನು ಡೇಹ್ರಾ ಕ್ಷೇತ್ರದಲ್ಲಿ 9,399 ಮತಗಳಿಂದ ಸೋಲಿಸಿದ್ದಾರೆ. ನಾಲಗಢದಲ್ಲಿ ಕಾಂಗ್ರೆಸ್ ಅಭ್ಯರ್ಥಿಹರದೀಪ್ ಸಿಂಗ್ ಬಾವಾ ಅವರು ಬಿಜೆಪಿಯ ಕೆ.ಎಲ್ ಠಾಕೂರ್ ಎದುರು 25,618 ಮತಗಳಿಂದ ಗೆದ್ದಿದ್ದಾರೆ. ಮತ್ತೊಂದು ಕ್ಷೇತ್ರ ಹಮೀರ್‌ಪುರದಲ್ಲಿ ಬಿಜೆಪಿಯ ಆಶಿಷ್ ಶರ್ಮಾ ಅವರು ಕಾಂಗ್ರೆಸ್‌ನ ಪುಷ್ಪಿಂದರ್ ವರ್ಮಾ ಎದುರು 25,470 ಮತಗಳಿಂದ ಜಯ ಸಾಧಿಸಿದ್ದಾರೆ.
* ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಲಖಪತ್ ಸಿಂಗ್ ಬುಟೊಲ ಅವರು ಬದರಿನಾಥ್ ಕ್ಷೇತ್ರದಲ್ಲಿ ಹಾಗೂ ಕ್ವಾಜಿ ಮೊಹಮ್ಮದ್ ನಿಜಾಮುದ್ದೀನ್ ಅವರು ಮಂಗ್ಳೌರ್‌ನಲ್ಲಿ ಬಿಜೆಪಿ ಸ್ಪರ್ಧಿಗಳನ್ನು ಮಣಿಸಿದ್ದಾರೆ. ಲಖಪತ್ ಅವರು ರಾಜೇಂದ್ರ ಸಿಂಗ್ ಭಂಡಾರಿ ಎದುರು 5,224 ಮತಗಳಿಂದ ಹಾಗೂ ನಿಜಾಮುದ್ದೀನ್ ಅವರು ಕರ್ತಾರ್ ಸಿಂಗ್ ಎದುರು 422 ಮತಗಳಿಂದ ಗೆದ್ದಿದ್ದಾರೆ.
* ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಎಎಪಿಯ ಮೋಹಿಂದರ್ ಭಗತ್ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶೀತಲ್ ಅಂಗೂರಲ್ ವಿರುದ್ಧ 37,325 ಮತಗಳಿಂದ ಜಯ ಸಾಧಿಸಿದ್ದಾರೆ. ಎಎಪಿಯಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಅಂಗೂರಲ್ ಅವರು ಇದೇ ವರ್ಷ ಮಾರ್ಚ್‌ನಲ್ಲಿ ಬಿಜೆಪಿ ಸೇರಿದ್ದರು. ಹೀಗಾಗಿ ಇಲ್ಲಿ ಉಪಚುನಾವಣೆ ನಡೆದಿತ್ತು.
* ತಮಿಳುನಾಡಿನ ವಿಕ್ರವಂಡಿ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನ್ನಿಯೂರ್ ಶಿವ ಅವರು ಎನ್‌ಡಿಎ ಮೈತ್ರಿಕೂಟದ ಪಿಎಂಕೆ ಪಕ್ಷದ ಅಭ್ಯರ್ಥಿ ಸಿ. ಅನ್ಬುಮಣಿ ಎದುರು 67,757 ಮತಗಳಿಂದ ಗೆದ್ದಿದ್ದಾರೆ.
* ಮಧ್ಯಪ್ರದೇಶದ ಅಮರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಮಲೇಶ್ ಪ್ರತಾಪ್ ಶಾ ಜಯ ಸಾಧಿಸಿದ್ದಾರೆ. ಅವರು ಕಾಂಗ್ರೆಸ್‌ನ ಧೀರನ್ ಶಾ ಎದುರು 3,027 ಮತಗಳಿಂದ ಗೆಲುವು ಕಂಡಿದ್ದಾರೆ.
* ಬಿಹಾರದ ರೂಪೌಲಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶಂಕರ್ ಸಿಂಗ್ ಅವರು ಪ್ರತಿಸ್ಪರ್ಧಿ, ಜೆಡಿಯು ಅಭ್ಯರ್ಥಿ ಕಲಾಧರ್ ಪ್ರಸಾದ್ ಮಂಡಲ್ ಅವರನ್ನು 8,246 ಮತಗಳಿಂದ ಮಣಿಸಿದ್ದಾರೆ.