ಅಧ್ಯಕ್ಷ ಗಾದಿಗೆ ಖರ್ಗೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಪೇಮೆಂಟ್ ಕೊಟ್ಟಿದ್ದೆಷ್ಟು ಪ್ರಿಯಾಂಕ್ಗೆ ಅಶೋಕ್ ಪ್ರಶ್ನೆ
1 min readಎಷ್ಟು ಪೇಮೆಂಟ್ ಕೊಟ್ಟು ವಿಪಕ್ಷ ನಾಯಕರಾಗಿ ಬಂದಿದ್ದೀರಾ? ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಗರಂ ಆಗಿದ್ದಾರೆ.
ಅಧ್ಯಕ್ಷ ಗಾದಿಗೆ ಖರ್ಗೆ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಪೇಮೆಂಟ್ ಕೊಟ್ಟಿದ್ದೆಷ್ಟು?; ಸಚಿವ ಪ್ರಿಯಾಂಕ್ಗೆ ಅಶೋಕ್ ಪ್ರಶ್ನೆ
ಎಷ್ಟು ಹಣ ಕೊಟ್ಟು ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದರು. ಎಷ್ಟು ಪೇಮೆಂಟ್ ನೀಡಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದರು.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನಿಮ್ಮ ಅಪ್ಪ ಎಷ್ಟು ದುಡ್ಡು ಕೊಟ್ಟು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂದು ಗೊತ್ತಾದರೆ ನಾನೂ ಹೇಳಬಹುದು. ಅದರ ಜೊತೆಗೆ ರಾಜ್ಯದ ಮುಖ್ಯಮಂತ್ರಿ ಅವರು ಮೂರು ದಿನ ದೆಹಲಿಯಲ್ಲಿದ್ದರು. ಅವರೆಷ್ಟು ಪೇಮೆಂಟ್ ನೀಡಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಹೇಳಿದರೆ, ನಾವು ಹೇಳಲು ಸಿದ್ಧರಿದ್ದೇವೆ. ಆದರೆ, ನಮ್ಮ ಪಕ್ಷದಲ್ಲಿ ಪೇಮೆಂಟ್ ಸಂಸ್ಕೃತಿ ಇಲ್ಲ. ಕಾಂಗ್ರೆಸ್ನವರು ಈ ರೀತಿಯ ಸಂಸ್ಕೃತಿ ನಮಗೆ ಬರುವುದಿಲ್ಲ” ಎಂದು ತಿರುಗೇಟು ನೀಡಿದರು.
ಬಳಿಕ, “ಬರ ವೀಕ್ಷಣೆ ಮಾಡುವ ಕುರಿತು ಈಗಾಗಲೇ ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಮಾತುಕತೆ ನಡೆಸಿದ್ದೇನೆ. ಇನ್ನು ಎರಡ್ಮೂರು ದಿನ ಕುಳಿತು ಮಾತುಕತೆ ನಡೆಸಿ ಕಲಬುರಗಿ ಭಾಗದಿಂದ ನಮ್ಮ ರಾಜ್ಯ ಪ್ರವಾಸ ಶುರುವಾಗಲಿದೆ. ಈಗಾಗಲೇ ಬೊಮ್ಮಾಯಿ ಅವರ ಮನೆಯಲ್ಲಿ ಮತ್ತು ವಿಜಯೇಂದ್ರ ಜೊತೆಯಲ್ಲಿ ಚರ್ಚೆ ಮಾಡಿದ್ದೇನೆ. ಕಲಬುರಗಿ ಭಾಗದಿಂದ ನಮ್ಮ ಬರಗಾಲದ ಪ್ರವಾಸ ಆರಂಭಿಸಿ ಬರ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧವಾಗಿ ಕಿವಿ ಹಿಂಡುವ ಕೆಲಸವನ್ನು ಮಾಡುತ್ತೇವೆ” ಎಂದರು.
ತಪ್ಪು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರ ತೆಗೆಯುತ್ತೇವೆ: “ಜನ ನಮ್ಮನ್ನು ಆಯ್ಕೆ ಮಾಡಿರುವುದು ಪ್ರತಿಪಕ್ಷದ ಸ್ಥಾನದಲ್ಲಿದ್ದು, ಸರ್ಕಾರದ ಕಿವಿ ಹಿಂಡಬೇಕು ಎಂದು. ಆ ಕೆಲಸವನ್ನು ನಾವು ಮಾಡುತ್ತೇವೆ. ಕಿವಿ ಹಿಂಡಿದರೂ ಅವರು ಕೆಲಸ ಮಾಡಲಿಲ್ಲ ಎಂದರೆ, ಸರ್ಕಾರ ತೆಗೆಯುವುದಕ್ಕೆ ಯೋಚನೆ ಮಾಡುತ್ತೇವೆ. ಆದರೆ, ಅವರ ಸರ್ಕಾರ ಅವರೇ ಬೀಳಿಸುವ ವ್ಯವಸ್ಥೆಯನ್ನು ಅವರೇ ಮಾಡಿಕೊಳ್ಳುತ್ತಾರೆ. ನಾವು ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಅಷ್ಟೇ” ಎಂದು ವ್ಯಂಗ್ಯವಾಡಿದರು.
“ಈ ಸರ್ಕಾರದ ಬಳಿ ಯಾವುದಕ್ಕೂ ಹಣ ಇಲ್ಲ. ಶಾಲಾ ಮಕ್ಕಳಿಗೆ ಶೋ ಕೊಡುತ್ತೇವೆ ಎಂದು ಚಪ್ಪಲಿ ಕೊಡುವಷ್ಟು ಬರ್ಬಾದ್ ಆಗಿರುವ ಸರ್ಕಾರವಿದು. ವರ್ಗಾವಣೆ ದಂಧೆಯಲ್ಲಿ ಬಹಿರಂಗವಾಗಿ ವ್ಯವಹಾರಗಳನ್ನು ಮಾಡುತ್ತಿದೆ. ಇಡೀ ಅವರ ಕುಟುಂಬ ಈ ವ್ಯವಹಾರದಲ್ಲಿ ಪಾಲ್ಗೊಂಡಿದೆ. ಅವರೇ ಈ ಎಲ್ಲಾ ಅಸ್ತ್ರಗಳನ್ನು ಕೊಟ್ಟಿದ್ದಾರೆ. ಅದರ ಜೊತೆಗೆ ಜಮೀರ್ ಅಹ್ಮದ್ ಒಂದು ಅಸ್ತ್ರ ಕೊಟ್ಟಿದ್ದಾರೆ. ಇದರ ಜೊತೆಗೆ ಸಾವರ್ಕರ್ ಫೋಟೋ ತೆರವು ಮಾಡಲು ಹೊರಟಿದ್ದಾರೆ. ಈ ಎಲ್ಲ ವಿಷಯ ಇರಿಸಿಕೊಂಡು ಚಳಿಗಾಲದ ಅಧಿವೇಶನದಲ್ಲಿ ಹೋರಾಟ ನಡೆಸುತ್ತೇವೆ” ಎಂದು ಗುಡುಗಿದರು.
ಖರ್ಗೆ, ರಾಹುಲ್, ಸಿದ್ದು ಸೋತಿರಲಿಲ್ಲವೇ?.. “ಕನಕಪುರದಲ್ಲಿ ಠೇವಣಿ ಕಳೆದುಕೊಂಡ ವ್ಯಕ್ತಿಗೆ ಪ್ರತಿಪಕ್ಷ ನಾಯಕ ಸ್ಥಾನ ನೀಡಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಆದರೆ, ನೀವು ತಿನ್ನುತ್ತಿರುವ ಅನ್ನದಲ್ಲಿ ಹೆಗ್ಗಣ ಬಿದ್ದಿದೆ. ಅದನ್ನು ನೀವು ನೋಡುತ್ತಿಲ್ಲ. ನಮ್ಮ ತಟ್ಟೆಯಲ್ಲಿ ಸೊಳ್ಳೆ ಬಿದ್ದಿರುವುದನ್ನು ನೋಡುತ್ತಿದ್ದೀರಿ. ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಲಬುರಗಿಯಿಂದ ಸೋಲಿಸಿ ಓಡಿಸಿದರೂ, ನೀವು ಸೋತವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಹೇಗೆ ಮಾಡಿದಿರಿ?” ಎಂದು ಪ್ರಶ್ನಿಸಿದರು.
“ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸಿದ್ದರಾಮಯ್ಯ ಸೋತಿದ್ದರು. ಮುಖ್ಯಮಂತ್ರಿಯಾಗಿದ್ದವರು ಹೀನಾಯವಾಗಿ ಸೋತು ಬಾದಾಮಿಗೆ ಓಡಿ ಹೋದರು. ಬಾದಾಮಿಯಲ್ಲಿ ಅಲ್ಪ ಮತಗಳಿಂದ ಗೆದ್ದರು. ಆದರೆ ನಾನು 55,000 ಮತಗಳ ಅಂತರದಿಂದ ಗೆದ್ದಿದ್ದೇನೆ. 2000 ಅಂತರದಿಂದ ಗೆದ್ದಿದ್ದ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾದರೆ, 55,000 ಮತಗಳ ಅಂತರದಿಂದ ಗೆದ್ದ ನಾನು ಪ್ರತಿ ಪಕ್ಷದ ನಾಯಕನಾಗಬಾರದಾ?” ಎಂದು ತಿರುಗೇಟು ಕೊಟ್ಟರು.
ರಾಹುಲ್ ಕೂಡಾ ಸೋತಿದ್ದರು; “ರಾಹುಲ್ ಗಾಂಧಿಯವರು ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಅವರು ನಿಮ್ಮ ರಾಷ್ಟ್ರೀಯ ನಾಯಕರು. ಸೋತು ಸುಣ್ಣವಾಗಿರುವವರನ್ನೆಲ್ಲ, ಇಟ್ಟುಕೊಂಡು ನನ್ನನ್ನು ಪ್ರಶ್ನೆ ಮಾಡುತ್ತೀರಾ? ಪದ್ಮನಾಭನಗರದಲ್ಲಿ ಏಳು ಬಾರಿ ನಾನು ಗೆದ್ದಿದ್ದೇನೆ. ಸಿದ್ದರಾಮಯ್ಯ ಅವರ ರೀತಿ ಸೋಲುವ ಭೀತಿಯಿಂದ ಬಾದಾಮಿಗೆ ಹೋದಂತೆ ನಾನು ಕನಕಪುರಕ್ಕೆ ಹೋಗಲಿಲ್ಲ, ನಾನು ಗೆದ್ದಿದ್ದೇನೆ. ನನಗೆ ಪಕ್ಷದ ಕಾರ್ಯಕರ್ತರು, ಶಾಸಕರು ಅವಕಾಶ ಕೊಟ್ಟಿದ್ದಾರೆ. ಹಾಗಾಗಿ ಪ್ರತಿಪಕ್ಷದ ನಾಯಕನಾಗಿದ್ದೇನೆ” ಎಂದು ತಿರುಗೇಟು ನೀಡಿದರು.
“ಹೈಕಮಾಂಡ್ ಭೇಟಿ ಕುರಿತು ಈಗಾಗಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಅವರು ಚುನಾವಣಾ ಕೆಲಸದ ನಿಮಿತ್ತ ರಾಜಸ್ಥಾನ ಪ್ರವಾಸದಲ್ಲಿದ್ದಾರೆ. ಅವರು ಅನುಮತಿ ನೀಡಿದಾಗ ನಾನು ವಿಜಯೇಂದ್ರ ದೆಹಲಿಗೆ ಹೋಗಿ ಅವರ ಮಾರ್ಗದರ್ಶನ ಪಡೆಯುತ್ತೇವೆ. ಮತ್ತೆ ರಾಜ್ಯದಲ್ಲಿ ಬಿಜೆಪಿಯಲ್ಲಿ ಕಮಲ ಅರಳಿಸುವತ್ತ ಮುನ್ನಡೆಯುತ್ತೇವೆ” ಎಂದರು.
ದೇವೇಗೌಡ ಅನುಭವಿ ರಾಜಕಾರಿಣಿ: “ದೇವೇಗೌಡರು ಎನ್ಡಿಎ ಮೈತ್ರಿಕೂಟದ ಹಿರಿಯ ಅನುಭವಿ ರಾಜಕಾರಣಿಯಾಗಿದ್ದಾರೆ. ನಮಗೆ ಇಬ್ಬರು ಹಿರಿಯ ನಾಯಕರಿದ್ದಾರೆ. ಒಂದು ಯಡಿಯೂರಪ್ಪ ಮತ್ತೊಂದು ದೇವೇಗೌಡರು. ನಮಗೆ ಇಬ್ಬರು ಚಾಣಕ್ಯರು ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುಂದೆ ಲೋಕಸಭಾ ಚುನಾವಣೆಯಲ್ಲಿ ನಾವು ಗೆಲುವನ್ನ ಸಾಧಿಸುತ್ತೇವೆ. ಕಾಂಗ್ರೆಸ್ಗೆ ಆ ರೀತಿಯ ಯಾವ ನಾಯಕರು ಇಲ್ಲ. ಮಾರ್ಗದರ್ಶನ ಮಾಡುವವರಿಲ್ಲ. ಕಾಂಗ್ರೆಸ್ನವರಿಗೆ ಮಾರ್ಗ ಇಲ್ಲ. ಆದರೆ ನಮಗೆ ಮಾರ್ಗ ಇದೆ” ಎಂದು ಕೈ ನಾಯಕರಿಗೆ ಕುಟುಕಿದರು.