ಕೋಚಿಮುಲ್‌ಗೆ ಕೂಡಲೇ ಆಡಳಿತಾಧಿಕಾರಿ ನೇಮಿಸಿ
1 min readಕೋಚಿಮುಲ್‌ಗೆ ಕೂಡಲೇ ಆಡಳಿತಾಧಿಕಾರಿ ನೇಮಿಸಿ
ನಿಗಧಿತ ಸಮಯಕ್ಕೆ ಕೋಚಿಮುಲ್ ಚುನಾವಣೆ ನಡೆಸಬೇಕು
ಭ್ರಷ್ಟಾಚಾರ ಆರೋಪ ಹೊತ್ತ ಆಡಳಿತ ಮಂಡಳಿ ರದ್ದು ಮಾಡಬೇಕು
ಚುನಾವಣೆ ನಡೆಸಲು ನ್ಯಾಯ ಹೋರಾಟಕ್ಕೂ ಸಿದ್ಧ ಎಂದ ಕೆವಿಎನ್
ಕೋಲಾರ ಚಿಕ್ಕಬಳ್ಳಾಪುರ ಹಾಲು ಕ್ಕೂಟದ ಆಡಳಿತ ಮಂಡಳಿ ಅವಧಿ ಮುಗಿದಿದ್ದರೂ ಚುನಾವಣೆ ನಡೆಸದೆ ಸರ್ಕಾರ ಮೌನ ವಹಿಸಿದೆ. ಅಲ್ಲದೆ ಹಾಲು ಒಕ್ಕೂಟದ ನೇಮಕದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ ಈಗಾಗಲೇ ಸ್ಪಷ್ಟ ಪಡಿಸಿದ್ದು, ಇಂದ ಭ್ರಷ್ಟಾಚಾರ ಆರೋಪ ಹೊತ್ತಿರುವ ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ಮುಂದುವರಿಯಬಾರದು ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ. ನಾಗರಾಜ್ ಆಗ್ರಹಿಸಿದರು.
ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೋಚಿಮುಲ್ ಮಾಡಿ ಅಧ್ಯಕ್ಷ ಕೆ.ವಿ. ನಾಗರಾಜ್, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಹಿಂದೆoದೂ ನೋಡದಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಒಕ್ಕೂಟದ ನೇಮಕದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯವೇ ದೃಢಪಡಿಸಿದೆ. ಹಾಗಿದ್ದರೂ ಅದೇ ಆಡಳಿತ ಮಂಡಳಿಯನ್ನು ಮುಂದುವರಿಸಲು ಸರ್ಕಾರ ಮುಂದಾಗಿರುವುದು ಆತಂಕಕಾರಿ ವಿಚಾರವಾಗಿದ್ದು, ಇನ್ನೂ ಯಾವ ಭ್ರಷ್ಟಾಚಾರ ನಡೆಸಲು ಈ ಆಡಳಿತ ಮಂಡಳಿ ಮುಂದುವರಿಯಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ಏಪ್ರಿಲ್ 28ಕ್ಕೆ ಕೋಚಿಮುಲ್ ಆಡಳಿತ ಮಂಡಳಿ ಚುನಾವಣೆಯನ್ನು ನಿಗಧಿ ಪಡಿಸಿ, ಕೋಲಾರ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು, ಲೋಕಸಭಾ ಚುನಾವಣೆ ನೆಪ ಹೇಳಿ ಹಾಲು ಒಕ್ಕೂಟದ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ ಕಳೆದ ಐದು ವರ್ಷಗಳ ಹಿಂದೆ 2019ರಲ್ಲಿ ಇದೇ ಲೋಕಸಭಾ ಚುನಾವಣೆ ನೀತಿ ಸಂಹಿತೆ ಇದ್ದರೂ ಕೋಚಿಮುಲ್ ಚುನಾವಣೆ ನಡೆಸಲಾಗಿತ್ತು. ಈಗಲೂ ಯಾಕೆ ನಡೆಸಲಿಲ್ಲ ಎಂದು ಪ್ರಶ್ನಿಸಿರುವ ಅವರು, ವಿನಾಕಾರಣ ಚುನಾವಣೆ ತಡ ಮಾಡಿ, ಆಡಳಿತ ಮಂಡಳಿ ಮುಂದುವರಿಸುವ ಹುನ್ನಾರ ಸರ್ಕಾರ ಮಾಡುತ್ತಿದೆ ಎಂದು ಅವರು ಕಿಡಿ ಕಾರಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟಚಿಮುಲ್ ವಿಭಜಿಸಿ, ಚಿಮುಲ್ ಪ್ರತ್ಯೇಕ ಮಾಡಿದ್ದರೂ ವಿನಾಕಾರಣ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ನಿರ್ದೇಶಕರು ನ್ಯಾಯಾಲಯದ ಮೊರೆ ಹೋದ ಕಾರಣ ವಿಭಜನೆ ನೆನಗುದಿಗೆ ಬಿತ್ತು. ಆದರೆ ಈಗ ಅದೇ ನಿರ್ದೇಶಕರು ವಿಭಜನೆ ನಂತರವೇ ಚುನಾವಣೆ ನಡೆಸುವಂತೆ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿರುವ ಬಗ್ಗೆ ಮಾಹಿತಿ ಇಧ್ದು, ಇದು ಹಾಸ್ಯಾಸ್ಪದ ಎಂದರು. ಈ ಎಲ್ಲಾ ತಂತ್ರಗಳೂ ಈಗಿನ ಆಡಳಿತ ಮಂಡಳಿಯನ್ನು ಮುಂದುವರಿಸುವುದೇ ಆಗಿದ್ದು, ಕೂಡಲೇ ಆಡಳಿತಾಧಿಕಾರಿ ನೇಮಿ, ಚುನಾವಣೆ ನಡೆಸದಿದ್ದರೇ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಹೇಳಿದರು.
ಕೋಚಿಮುಲ್‌ನಲ್ಲಿ ರೈತರ ಪರ ಯಾವುದೇ ತೀರ್ಮಾನ ಕೈಗೊಳ್ಳುತ್ತಿಲ್ಲ, ರೈತರಿಂದ ಖರೀದಿಸುವ ಹಾಲಿನ ಬೆಲೆಯನ್ನು ಈ ಸರ್ಕಾರ ಇಳಿಕೆ ಮಾಡಿದೆ. ಅಲ್ಲದೆ ಹಾಲಿನ ಮಾರಾಟ ಬೆಲೆಯನ್ನು ಹೆಚ್ಚಳ ಮಾಡಿದೆ. ಇನ್ನು ಹಾಲು ಹಾಕದ, ಡೇರಿಯ ಮುಖವನ್ನೇ ನೋಡದ ವ್ಯಕ್ತಿಗಳಿಗೆ ಮತ ಹಕ್ಕು ನೀಡುವ ಮೂಲಕ ಹೈನು ರೈತರಿಗೆ ಅನ್ಯಾಯ ಮಾಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಅಲ್ಲದೆ ಈಗ ಇರುವ ಡೆಲಿಗೇಟ್‌ಗಳ ಅವಧಿ ಮುಗಿಯುವವರಿಗೂ ಚುನಾವಣೆ ಮುಂದೂಡಿ, ನಂತರ ಸರ್ಕಾರದಿಂದ ನೂತನ ಡೆಡಲಿಗೇಟ್ಸ್ ನೇಮಕ ಮಾಡಿ, ಚುನಾವಣೆ ಗೆಲ್ಲುವ ಕುತಂತ್ರ ಸರ್ಕಾರ ನಡೆಸುತ್ತಿದ್ದು, ಇಂತಹ ತಂತ್ರಗಳ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾದರೆ ನ್ಯಾಯಾಲಯದ ಮೊರೆ ಹೋಗಲು ಸಿದ್ಧರಿರುವುದಾಗಿ ಕೆ.ವಿ. ನಾಗರಾಜ್ ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ, ಪ್ರಸ್ತುತ ರಾಜ್ಯ ಸಹಕಾರಿ ಸಚಿವರಾಗಿರುವ ರಾಜಣ್ಮ ಅವರು ಕಳೆದ ಹಲವು ದಶಕಗಳ ಕಾಲ ಸಹಕಾರಿ ಕ್ಷೇತ್ರದಲ್ಲಿ ಅನುಭವ ಇರುವ ನಾಯಕರಾಗಿದ್ದಾರೆ. ಆದರೆ ಅವರು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸಸರಿಸುತ್ತಿರುವುದು ವಿಪರ್ಯಾಸ. ಎಪಿಎಂಸಿ, ಟಿಎಪಿಸಿಎಂಸಿ ಸೇರಿದಂತೆ ಇತರೆ ಸಹಕಾರಿ ಕ್ಷೇತ್ರಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶಿಸಿರುವ ಸಹಕಾರಿ ಸಚಿವರು ಹಾಲು ಒಕ್ಕೂಟಕ್ಕೆ ಯಾಕೆ ಆಡಳಿತಾಧಿಕಾರಿಯನ್ನು ನೇಮಿಸಿಲ್ಲ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರ ಇದೀಗ ಕೋಚಿಮುಲ್ ಚುನಾವಣೆಯಲ್ಲಿಯೂ ಹಿನ್ನೆಡೆಯಾಗಲಿದೆ ಎಂದು ಹೆದರಿ, ಪ್ರಸ್ತುತ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿದ್ದು, ಇದಕ್ಕೆ ನ್ಯಾಯಾಲಯದ ಮೂಲಕವೇ ತಕ್ಕ ಪಾಠ ಕಲಿಸುವುದಾಗಿ ಮುನಿಯಪ್ಪ ಹೇಳಿದರು. ಅಲ್ಲದೆ ಕೂಡಲೇ ಕೋಚಿಮುಲ್‌ಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಮತ್ತು ಈಗಿರುವ ಆಡಳಿತ ಮಂಡಳಿಯನ್ನು ರದ್ದು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕೋಚಿಮುಲ್‌ನಲ್ಲಿ ಹೈನು ರೈತರ ಕಷ್ಟದೊಂದಿಗೆ ಚೆಲ್ಲಾಟವಾಡುತ್ತಿರುವ ಈಗಿನ ಆಡಳಿತ ಮಂಡಳಿ ಕೂಡಲೇ ರದ್ದಾಗಬೇಕು. ಚುನಾವಣೆ ನಡೆದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಭೀತಿಯಿಂದಲೇ ಚುನಾವಣೆ ಮುಂದೂಡುವ ತಂತ್ರಗಳಿಗೆ ಸರ್ಕಾರ ಮೊರೆ ಹೋಗಿದ್ದು, ಸಹಕಾರ ಸಸಚಿವರು ಕೂಡಲೇ ಇತ್ತ ಗಮನ ಹರಿಸಿ, ಕೋಚಿಮುಲ್‌ಗೆ ಆಡಳಿತಾಧಿಕಾರಿ ನೇಮಕ ಮಾಡಿ, ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲೆಯ ಆರೂ ತಾಲೂಕುಗಳ ಮಾಜಿ ನಿರ್ದೇಶಕರು, ಮಾಜಿ ಅಧ್ಯಕ್ಷರು ಭಾಗವಹಿಸಿದ್ದರು.