ರಾಜ್ಯದ ಜನತೆಗೆ ಮತ್ತೊಂದು ಶಾಕ್: ಹೊಸ ವರ್ಷಕ್ಕೆ ಹಾಲಿನ ದರ ಹೆಚ್ಚಳ ಸಾಧ್ಯತೆ
1 min readನಂದಿನಿ ಹಾಲಿನ ದರ ಹೆಚ್ಚಳಕ್ಕೆ ಹಾಲು ಒಕ್ಕೂಟಗಳು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದು, ದರ ಏರಿಕೆ ಮಾಡುವ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲವೆಂದು ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ಆದರೆ, ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವುದರಿಂದ ಹಾಲಿನ ದರ ಹೆಚ್ಚಳ ಮಾಡಬೇಕೆಂದು ಕೆಎಂಎಫ್ ಮತ್ತು ಹಾಲು ಉತ್ಪಾದಕರ ಒಕ್ಕೂಟಗಳು ಪಶು ಸಂಗೋಪನಾ ಇಲಾಖೆ ಬೇಡಿಕೆ ಇಟ್ಟಿದ್ದು, ಹೊಸ ವರ್ಷದ ವೇಳೆಗೆ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ.
ಆರ್ಥಿಕ ಸ್ಥಿತಿಗತಿ ಆಧರಿಸಿ ಆರು ತಿಂಗಳಿಗೊಮ್ಮೆ ಗರಿಷ್ಠ ಶೇಕಡ 5ರಷ್ಟು ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡಬೇಕೆಂದು ಕೋರಿ ಪಶು ಸಂಗೋಪನಾ ಇಲಾಖೆಯಿಂದ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಎಂಎಫ್ ಹಂತದಲ್ಲಿ ಹಾಲಿನ ದರ ಪರಿಷ್ಕರಣೆಗೆ ಅನುಮತಿ ನೀಡುವಂತೆ ಕೋರಲಾಗಿದೆ.
ಹಾಲಿನ ದರ ಹೆಚ್ಚಳಕ್ಕೆ ರೈತರ ಒತ್ತಡವೂ ಇದೆ. ಒಕ್ಕೂಟಗಳಿಗೆ ಲಾಭ ಮಾಡಿಕೊಡಬೇಕೆಂಬ ಉದ್ದೇಶವಿಲ್ಲವೆಂದು ಸಚಿವ ವೆಂಕಟೇಶ್ ಹೇಳಿದ್ದಾರೆ. ಈ ಹಿಂದೆ ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಒತ್ತಾಯಿಸಲಾಗಿತ್ತು. ಆದರೆ, 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಮುಲ್ 2022ರ ಮಾರ್ಚ್ ನಿಂದ ಇದುವರೆಗೆ 5 ಬಾರಿ ಹಾಲಿನ ದರ ಪರಿಷ್ಕರಿಸಿ ಒಟ್ಟಾರೆ 12 ರೂಪಾಯಿ ಹೆಚ್ಚಳ ಮಾಡಿದೆ. ನಂದಿನಿ ಹಾಲಿನ ದರ ಕೇವಲ 3 ರೂಪಾಯಿ ಹೆಚ್ಚಳ ಮಾಡಿದೆ ಎಂದು ತಿಳಿಸಿದ್ದಾರೆ.