ನಂಜನಗೂಡಿನಲ್ಲಿ ಅಂಧಕಾಸುರ ವಧೆ ಕಾರ್ಯಕ್ರಮ ಅದ್ಧೂರಿ
1 min readನಂಜನಗೂಡಿನಲ್ಲಿ ಅಂಧಕಾಸುರ ವಧೆ ಕಾರ್ಯಕ್ರಮ ಅದ್ಧೂರಿ
ಕಳೆದ ಬಾರಿ ಗೊಂದಲಕ್ಕೀಡಾಗಿದ್ದ ಅಂಧಕಾಸುವರ ಚಿತ್ರಪಟ
ಈ ಬಾರಿ ಯಾವುದೇ ಗೊಂದಲವಿಲ್ಲದೆ ನಿರ್ವಿಘ್ನವಾಗಿ ಯಶಸ್ವಿ
ಕಳೆದ ಬಾರಿ ಗೊಂದಲ ಉಂಟಾಗಿದ್ದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ಅಂಧಕಾಸುರ ವಧೆ ಕಾರ್ಯಕ್ರಮ ರಾತ್ರಿ ಯಾವುದೇ ಗೊಂದಲವಿಲ್ಲದೆ ನಿರ್ವಿಘ್ನವಾಗಿ ಮತ್ತು ಅದ್ಧೂರಿಯಾಗಿ ನೆರವೇರಿತು. ಇದರಿಂದ ಆಡಳಿತ ವ್ಯವಸ್ಥೆ ನಿಟ್ಟುಸಿರು ಬಿಡುವಂತಾಗಿದೆ.
ಶ್ರೀಕ0ಠೇಶ್ವರ ದೇವಾಲಯದಿಂದ ನಂಜನಗೂಡು ನಗರದ ರಾಕ್ಷಸ ಮಂಟಪ ವೃತ್ತದ ಬಳಿ ಅಂಧಕಾಸುರನ ಚಿತ್ರವನ್ನು ರಂಗೋಲಿಯಲ್ಲಿ ಬರೆಯಲಾಗಿತ್ತು. ಅಲ್ಲದೆ ಬೃಹತ್ ಗಾತ್ರದ ಅಂಧಕಾಸುರನ ಚಿತ್ರಪಟವನ್ನು ನಿರ್ಮಿಸಲಾಗಿತ್ತು, ಮೊದಲಿಗೆ ದೇವಾಲಯದ ಆಗಮಿಕ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಅಂಧಕಾಸುರನ ರಂಗೋಲಿಯಲ್ಲಿ ಬರೆಯಲಾಗಿದ್ದ ಚಿತ್ರಕ್ಕೆ ಬಲಿ ಪೂಜೆ ನೆರವೇರಿಸಿ ಜೀವ ಕಳೆ ತುಂಬಲಾಯಿತು.
ಶ್ರೀಕ0ಠೇಶ್ವರ ದೇವಾಲಯದಿಂದ ನಟರಾಜ ಅವತಾರದ ಉತ್ಸವ ಮೂರ್ತಿಯನ್ನು ದೇವಾಲಯದ ಅರ್ಚಕರ ತಂಡ ಹೂವಿನ ಪಲ್ಲಕ್ಕಿಯೊಡನೆ ಮೆರವಣಿಗೆ ಮೂಲಕ ಕರೆತರಲಾಯಿತು. ರಾಕ್ಷಸ ಮಂಟಪ ಬಳಿ ಬರೆಯಲಾಗಿದ್ದ ಅಂಧಕಾಸುರನ ರಂಗೋಲಿಯ ಭಾವಚಿತ್ರವನ್ನು ಉತ್ಸವ ಮೂರ್ತಿಯನ್ನು ಹೊತ್ತಿದ್ದ ಅರ್ಚಕರ ತಂಡ ತುಳಿದು ರಂಗೋಲಿಯನ್ನು ಅಳಿಸುವ ಮೂಲಕ ಸಂಹಾರ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಇದೇ ವೇಳೆಗೆ ಅಂಧಕಾಸುರನ ಬೃಹತ್ ಗಾತ್ರದ ಭಾವಚಿತ್ರವನ್ನು ಕೆಳಗೆ ಇಳಿಸುವ ಮೂಲಕ ಅಂಧಕಾಸುರನ ವಧೆಯ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನಿರ್ವಿಘ್ನವಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತಾಧಿಗಳು ಜೈ ಶ್ರೀಕಂಠೇಶ್ವರ, ಜೈ ಪಾರ್ವತಿ ದೇವಿ, ಎಂದು ಘೋಷಣೆ ಮುಗಿಲು ಮುಟ್ಟುವಂತೆ ಕೂಗಿ, ಅಂಧಕಾಸುರನ ರಂಗೋಲಿಯ ಚಿತ್ರವನ್ನು ತುಳಿದು ಕುಣಿದು ಕುಪ್ಪಳಿಸಿದರಲ್ಲದೆ, ದೇವರ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊ0ಡು, ಇಷ್ಟಾರ್ಥಗಳನ್ನು ನೆರವೇರಿಸುವಂತೆ ಹರಕ್ಕೆ ಕಟ್ಟಿ ಭಕ್ತಿ ಮೆರೆದರು.
ಕಳೆದ ಬಾರಿ ಅಂಧಕಾಸುರನ ಚಿತ್ರಪಟದ ಬದಲಾಗಿ ಮಹಿಷಾಸುರನ ಚಿತ್ರವನ್ನು ಅಳವಡಿಸಿದ್ದರಿಂದಾಗಿ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿ ತಾರಕಕೇರಿತ್ತು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ ಪೂರ್ವಭಾವಿ ಸಭೆ ಕರೆದು ಅಂದಕಾಸುರನ ಭಾವಚಿತ್ರವನ್ನು ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಆಗಮಿಕರ ನೇತೃತ್ವದಲ್ಲಿ ಶಿವ ಪುರಾಣದಲ್ಲಿರುವಂತೆ ಚಿತ್ರಪಟವನ್ನು ಪ್ರದರ್ಶಿಸಿ ಒಪ್ಪಿಗೆ ಪಡೆಯಲಾಗಿತ್ತು,
ಅಲ್ಲದೆ ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ರಘು, ವೃತ್ತ ನಿರೀಕ್ಷಕ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿತ್ತು. ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಹೆಚ್ಚುವರಿ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ರಘು, ಯುವ ಬ್ರಿಗೇಡ್ ದಕ್ಷಿಣ ವಲಯ ಸಂಚಾಲಕ ಚಂದ್ರಶೇಖರ್, ಕೃಷ್ಣಜೋಯಿಸ್, ರಾಚಪ್ಪ, ಸುನಿಲ್, ಗಿರೀಶ್ ಇದ್ದರು.