ನಿನ್ನೆ ಸಂಜೆ (27.10.23) ಕೋಯಿಕ್ಕೋಡ್‌ನಲ್ಲಿ ಮಾಧ್ಯಮಗೋಷ್ಠಿ ಇತ್ತು. ಆ ವೇಳೆ, ಸುರೇಶ್ ಗೋಪಿ ಅವರು ಮಹಿಳಾ ಪತ್ರಕರ್ತೆ ವಿರುದ್ಧ ಅನುಚಿತವಾಗಿ ವರ್ತಿಸಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಶ್ನೆ ಕೇಳಿದ ಪತ್ರಕರ್ತೆಯ ಭುಜದ ಮೇಲೆ ಸುರೇಶ್ ಗೋಪಿ ಕೈ ಹಾಕಿದ್ದಾರೆ. ಪತ್ರಕರ್ತೆ ದೂರ ಸರಿದರೂ ಕೂಡ ಸುರೇಶ್ ಗೋಪಿ ತಮ್ಮ ಈ ವರ್ತನೆಯನ್ನು ಮುಂದುವರಿಸಿದ್ದಾರೆ. ವಿಡಿಯೋದಲ್ಲಿ ಈ ವರ್ತನೆ ಸ್ಪಷ್ಟವಾಗಿ ಕಂಡಿದೆ. ಪತ್ರಕರ್ತೆ ಈ ಸಂಬಂಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಮಾಧ್ಯಮ ಸಂಸ್ಥೆ ಕೂಡ ಕಾನೂನು ಕ್ರಮ ಸೇರಿದಂತೆ ಮುಂದಿನ ಎಲ್ಲಾ ಹೆಜ್ಜೆಗಳಿಗೆ ತಮ್ಮ ಬೆಂಬಲ ನೀಡುವುದಾಗಿ ತಿಳಿಸಿದೆ.
ಕ್ಷಮೆಯಾಚನೆಗೆ ಒತ್ತಾಯ: ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ (The Kerala Union of Working Journalists)ವು, ಶುಕ್ರವಾರದಂದು ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನಟ, ರಾಜಕಾರಣಿ ಸುರೇಶ್ ಗೋಪಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಕೆಯುಡಬ್ಲ್ಯುಜೆ ಹೇಳಿಕೆಯಲ್ಲಿ, ಬಿಜೆಪಿ ನಾಯಕನ ಈ ವರ್ತನೆ ‘ಉದ್ಯೋಗಿ ಮಹಿಳೆಯರಿಗೆ ಮಾಡಿದ ಅವಮಾನ’ ಎಂದು ಹೇಳಿದೆ. ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭ, ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿದ ಸುರೇಶ್ ಗೋಪಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು, ಜೊತೆಗೆ ಇತರ ಸೂಕ್ತ ಕಾನೂನು ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಒಕ್ಕೂಟ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.