ಜಿಲ್ಲೆಯ ಎಲ್ಲ ಶಾಸಕರ ಮುಖವಾಡದೊಂದಿಗೆ ಪ್ರತಿಭಟನೆ
1 min readಜಿಲ್ಲೆಯ ಎಲ್ಲ ಶಾಸಕರ ಮುಖವಾಡದೊಂದಿಗೆ ಪ್ರತಿಭಟನೆ
ಮಗ್ಗಲು ಬದಲಿಸಿದ ಶಾಶ್ವತ ನೀರಾವರಿ ಹೋರಾಟ
ತಾಲೂಕು ಕಚೇರಿ ಮುಂದೆ ತಮಟೆಗಳೊಂದಿಗೆ ಧರಣಿ
ಸತತ ನಾಲ್ಕು ದಶಕಗಳಿಂದ ಹೋರಾಟ ಎಲ್ಲ ರೀತಿಯ ಹೋರಾಟ ಮಾಡಿ ಹೈರಾಣಾಗಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಇದೀಗ ಮಗ್ಗಲು ಬದಲಿಸಿದೆ. ನೀರಾವರಿ ಸಭೆಗಳಿಗೆ ಬಾರದೆ, ಸದನದ ಒಳಗೆ ಮತ್ತು ಹೊರಗೆ ನೀರಾವರಿಯ ಬಗ್ಗೆ ಚಕಾರವೆತ್ತದೆ ಮೌನಕ್ಕೆ ಶರಣಾಗಿರುವ ಶಾಸಕರ ಕ್ರಮದ ವಿರುದ್ಧ ಇಂದು ನೀರಾವರಿ ಹೋರಾಟಗಾರರು ಚಿಕ್ಕಬಳ್ಳಾಪುರ ತಾಲೂಕು ಕಚೇರಿ ಮುಂದೆ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಶಾಸಕರ ಮುಖವಾಡಗಳೊಂದಿಗೆ ಇಂದು ಚಿಕ್ಕಬಳ್ಳಾಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ನೀರಾವರಿ ಹೋರಾಟಗಾರರು ಇಂತಹ ಶಾಸಕರಿಗೆ ಮತ ನೀಡಿದ ಪಾಪಕ್ಕೆ ಇಂದು ಜನರನ್ನು ಬಾದಿಗೆ ತಂದಿದ್ದಾರೆ. ಇವರ ನಿರ್ಲಕ್ಷ ಹೀಗೆ ಮುಂದುವರಿದರೆ ಹೋರಾಟ ತೀವ್ರವಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಯಿತು.
ಬಯಲು ಸೀಮೆಯ ಜಿಲ್ಲೆಗಳ ನೀರಾವರಿ ವಿಚಾರವಾಗಿ ಈ ಜಿಲ್ಲೆಗಳ ಶಾಸಕರು ಸದನದಲ್ಲಿ ಧ್ವನಿ ಎತ್ತದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಶಾಶ್ವತ ನೀರಾವರಿ ಹೋರಾಟಗಾರರು ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು. ನೀರಾವರಿ ಹಕ್ಕೊತ್ತಾಯಕ್ಕೆ ಆಗ್ರಹಿಸಿ ನಡೆಸಿದ ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಮಾತನಾಡಿ, ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಯ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸಬೇಕು. ಕೃಷ್ಣಾ ಪೆನ್ನಾರ್ ನದಿ ನೀರು ಹರಿಸಿ ಈ ಜಿಲ್ಲೆಗಳ ನೀರಿನ ಬವಣೆ ನೀಗಿಸಬೇಕು. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಎಂದು ಶಾಸಕರನ್ನು ನಿರಂತರವಾಗಿ ಆಗ್ರಹಿಸುತ್ತಿದ್ದೇವೆ. ಎರಡು ದುಂಡು ಮೇಜಿನ ಸಭೆ ನಡೆಸಿದ್ದೇವೆ. ಆದರೆ ಈ ಸಭೆಗೆ ಆಹ್ವಾನ ನೀಡಿದ್ದರೂ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರನ್ನು ಹೊರತುಪಡಿಸಿ ಉಳಿದ ಯಾವ ಶಾಸಕರು ಭಾಗಿ ಆಗಲಿಲ್ಲ ಎಂದರು.
ಈ ಹಿಂದೆ ನಡೆದ ಸಭೆ ಮತ್ತು ಕಳೆದ ೧೩ರಂದು ನಡೆದ ಸಭೆ ಸೇರಿ ಎರಡೂ ಸಭೆಗಳಿಗೆ ಯಾವೊಬ್ಬ ಶಾಸಕರೂ ಆಗಮಿಸಿಲ್ಲ. ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಜನರ ನೀರಿನ ಸಮಸ್ಯೆ ನಿವಾರಣೆ ಮಡಾಉವುದಕ್ಕಿಂತ ಯಾವ ಮಹತ್ವದ ಕೆಲಸ ಈ ಶಾಸಕರಿಗಿದೆಯೋ ಗೊತ್ತಿಲ್ಲ. ನೀರಾವರಿ ಸಭೆಗಳಿಗೆ ಬರುತ್ತಿಲ್ಲ, ಸದನದ ಒಳಗೆ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಇದು ಕಳೆದ ೪೦ ವರ್ಷಗಳಿಂದ ಇರುವ ಸಮಸ್ಯೆ ಆಗಿದ್ದು, ಜನಪ್ರತಿನಿಧಿಗಳು ತಮ್ಮ ವರಸೆ ಬದಲಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರವಾಗಿರಲಿದೆ ಎಂದು ಹೇಳಿದರು.
ಶಾಸಕರ ನಿರ್ಲಕ್ಷದ ವಿರುದ್ಧ ಕೋಲಾರ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದ್ದು, ಈ ಮೂರೂ ಜಿಲ್ಲೆಗಳ ಶಸಾಕರು ನೀರಾವರಿ ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡುವ ಜೊತೆಗೆ ಈ ಜಿಲ್ಲೆಗಳ ತಮ್ಮ ಪಾಲಿನ ನೀರು ತರಲು ಸದನದ ಒಳಗೆ ಮತ್ತು ಹೊರಗೆ ಹೋರಾಟ ಬೆಂಬಲಿಸಬೇಕು. ಇಲ್ಲವಾದರೆ ಜನರ ಬಳಿಯೇ ತೆರಳಿ ಇವರ ನಾಟಕದ ವಿರುದ್ಧ ಹೋರಾಟಕ್ಕೆ ಜನಬೆಂಬಲ ಕ್ರೂಡೀಕರಿಸುವುದಾಗಿ ಹೇಳಿದರು.
ಬಯಲು ಸೀಮೆಯ ಜಿಲ್ಲೆಗಳಲ್ಲಿ ಕಳೆದ ೪೦ ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ಹೋರಾಟ ನಡೆಯುತ್ತಿದೆ. ಈ ಜಿಲ್ಲೆಗಳ ರೈತರಿಗೆ ನೀರು ಬೇಕು. ಮನುಷ್ಯರಿಗೆ ಸುರಕ್ಷಿತ ಕುಡಿಯುವ ನೀರು ಬೇಕು ಎಂದು ಹೋರಾಟ ನಡೆಯುತ್ತಿದೆ. ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಎನ್ನುವ ವಿಷಯದ ಯೋಜನೆಗಳು, ಎತ್ತಿನಹೊಳೆ ಎನ್ನುವ ಮೋಸದ ಯೋಜನೆಗೆ ಸರ್ಕಾರ ಜೋತುಬಿದ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಜನರು ಈ ವಿಷದ ನೀರು ಕುಡಿದು ಕಿಡ್ನಿ ವೈಫಲ್ಯ, ಕ್ಯಾನ್ಸರ್‌ಗೆ ತುತ್ತಾಗುತ್ತಿರೆ. ಕೊಳವೆ ಬಾವಿ ಕೊರೆಯಿಸಿ ಅಂತರ್ಜಲ ಕುಸಿದ ಕಾರಣ ಕೊಳವೆ ಬಾವಿಗಳು ವಿಫಲವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶಾಸಕರು ಅಧಿವೇಶನದಲ್ಲಿ ಮೌನಿ ಬಾಬಾ ರೀತಿ ಕುಳಿತುಕೊಳ್ಳುವುದನ್ನು ನಾವು ಸಹಿಸುವುದಿಲ್ಲ. ಶಾಸಕರು, ಮುಖ್ಯಮಂತ್ರಿ ನೀರಾವರಿ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಬೇಕು. ಇಲ್ಲದಿದ್ದರೆ ಸಾರ್ವಜನಿಕ ಸಭೆಗಳನ್ನು ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು
ಈಗ ಆಯ್ಕೆಯಾಗಿರುವ ಮೂರೂ ಜಿಲ್ಲೆಗಳ ಶಾಸಕರು ಸಂಘಟಿತ ಹೋರಾಟ ಕೋರಿ ಮನವಿ ನೀಡಲಾಗಿತ್ತು. ಸಭೆ ನಡೆಸಿ, ನೀರಿನ ಬೇಡಿಕೆ, ಕೃಷಿ ಮತ್ತು ಕುಡಿಯುವ ನೀರು, ಕೈಗಾರಿಗೆಳಿಗೆ ಬೇಡಿಕೆಗೆ ಆಹಾರವಾಗಿ ನೀರು ತರುವ ಕೆಲಸವಾಗಬೇಕಿತ್ತು. ಸರ್ಕಾರ, ಅಧಿಕಾರಿಗಳು, ರಾಜಕಾರಣಿಗಳು ಎತ್ತಿನಹೊಳೆ, ಕೆಸಿ. ಎಚ್‌ಎನ್ ವ್ಯಾಲಿಗೆ ಜೋತು ಬಿದ್ದಿದ್ದಾರೆ. ನಿಜವಾದ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸುಷ್ಮಾಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಶಾಸಕರಾಗಿರುವವರಿಗೆ ಮತ ಹಾಕಿದ ತಪ್ಪಿಗೆ ಇಂದು ಅವರದೇ ಮುಖವಾಡ ಧರಿಸಿ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀರು ತರುವುದಾಗಿ ಸುಳ್ಳು ಮಾತುಗಳನ್ನು ಹೇಳಿ ಗೆದ್ದು ಬಂದ ಜಿಲ್ಲೆಯ ಶಾಸಕರು ಜನರನ್ನು ಬೀದಿಗೆ ತಳ್ಳಿದ್ದಾರೆ, ಸಭೆಗೆ ಬರಲೂ ಇವರಿಗೆ ವ್ಯವಧಾನವಿಲ್ಲ, ಇವರ ನಿರ್ಲಕ್ಷ ಹೀಗೇ ಮುಂದುವರಿದರೆ ಇವರು ಯಾವ ಮುಖ ಇಟ್ಟಿಕೊಂಡು ಕ್ಷೇತ್ರಗಳಲ್ಲಿ ಓಡಾಡುತ್ತಾರೆ ಎಂದು ಪ್ರಶ್ನಿಸಿದರು.
ಜಿಲ್ಲೆಯ ಶಾಸಕರಿಗೆ ನಾಚಿಕೆಯಾಗಬೇಕು, ನಮ್ಮ ಜಿಲ್ಲೆಗಳ ಶಾಸಕರು ತಾಯಿ ಹಾಲು ಕುಡಿದಿದ್ದರೆ ಸದನದಲ್ಲಿ ನೀರಾವರಿ ಬಗ್ಗೆ ಮಾತನಾಡಿ, ಇಲ್ಲವಾದರೆ ರಾಜಿನಾಮೆ ನೀಡಿ, ಸೀರೆ ಉಟ್ಟುಕೊಳ್ಳಿ ಎಂದು ಸವಾಲು ಹಾಕಿದರು. ಮುಂದಿನ ಪೀಳಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ, ನಿಮ್ಮ ರೀತಿಯಲ್ಲಿ ನಾವು ಸ್ವಾರ್ಥಿಗಳಲ್ಲ, ನಿಮ್ಮ ನಿರ್ಲಕ್ಷ ಮುಂದುವರಿದರೆ ನಿಮ್ಮನ್ನು ಕಾರ್ಯಕ್ರಮಗಳಲ್ಲಿಯೇ ಮಾತನಾಡುತ್ತೇವೆ, ನಿಮಗೆ ಮನುಷ್ಯತ್ವ ಇದ್ದರೆ ನಮ್ಮನ್ನು ಮಾತನಾಡಿ, ಪೊಲೀಸರನ್ನು ಬಿಟ್ಟು ಬಾಯಿ ಮುಚ್ಚಿಸಬೇಡಿ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಎಂ.ಆರ್. ಲಕ್ಷಿನಾರಾಯಣ್, ಪ್ರತೀಶ್, ಸುಷ್ಮಾ ಶ್ರೀನಿವಾಸ್, ಕರವೇ ನಾರಾಯಣಸ್ವಾಮಿ, ಶ್ರೀರಾಮಗೌಡ, ವೇಣು, ಆನಂದಪ್ಪ, ಜ್ಯೋತಿರವಿ ಸೇರಿದಂತೆ ಇತರರು ಇದ್ದರು.