ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಹೋ ರಾತ್ರಿ ಧರಣಿ
1 min readವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಹೋ ರಾತ್ರಿ ಧರಣಿ
ಅಂಗನವಾಡಿ ನೌಕರರ ಸಂಘದಿ0ದ ಡಿ.17ಕ್ಕೆ ಪ್ರತಿಭಟನೆ
ರಾಜ್ಯ ಸರ್ಕಾರದ 6ನೇ ಗ್ಯಾರೆಂಟಿ ಅನುಷ್ಠಾನ ಮಾಡದ ಬಗ್ಗೆ ಆಕ್ರೋಶ
ಕನಿಷ್ಠ ವೇತನ, ಗ್ರಾಜ್ಯುಟಿ, ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆಗೇರಿಸುವುದು, ಗುಣಮಟ್ಟದ ಆಹಾರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.17, 18ರಂದು ರಾಜ್ಯ ಅಂಗನವಾಡಿ ನೌಕರರ ಸಂಘದಿ0ದ ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಜಿ.ಎಂ. ಲಕ್ಷಿದೇವಮ್ಮ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಜಿ.ಎಂ. ಲಕ್ಷಿದೇವಮ್ಮ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ ನೌಕರರಿಗೆ 15 ಸಾವಿರ ಕನಿಷ್ಠ ವೇತನ ನೀಡುವ 6ನೇ ಗ್ಯಾರಂಟಿಯ ಭರವಸೆ ನೀಡಿತ್ತು. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ಈವರೆಗೆ 6ನೇ ಗ್ಯಾರಂಟಿಯನ್ನು ಕೊಟ್ಟಿಲ್ಲ ಎಂದು ದೂರಿದರು.
ಅಂಗನವಾಡಿ ನೌಕರರನ್ನು ಇಲಾಖೆಯ ಕೆಲಸಗಳಷ್ಟೇ ಅಲ್ಲದೇ ಮಾತೃ ವಂದನಾ, ಚುನಾವಣೆ ಕಾರ್ಯಗಳು ಸೇರಿದಂತೆ ವಿವಿಧ ಇಲಾಖೇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಯಾವುದೇ ಗೌರವ ಧನವಿಲ್ಲದ ಅಂಗನವಾಡಿ ನೌಕರರು ಇಲಾಖೇತರ ಕೆಲಸಗಳನ್ನು ನಿಭಾಯಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ. ಅಂಗನವಾಡಿ ನೌಕರರೇ ತಮ್ಮ ಸ್ವಂತ ಹಣ ನೀಡಿ ಮೊಟ್ಟೆ, ತರಕಾರಿ ತರುವ ದುಸ್ಥಿತಿ ಎದುರಾಗಿದೆ. ಅಂಗನವಾಡಿ ನೌಕರರನ್ನು ೩ ಮತ್ತು ೪ನೇ ದರ್ಜೆ ನೌಕರರನ್ನಾಗಿ ಪರಿಗಣಿಸಿ ನಿಯಮ ರೂಪಿಸುವಂತೆ ಸುಪ್ರೀಂ ಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ಹೇಳಿವೆ. ಆದರೂ ಸರಕಾರಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.17, 18ರಂದು ಸುಮಾರು 1.500ಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಎರಡು ದಿನಗಳ ಕಾಲ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ. ರತ್ನಮ್ಮ ಮಾತನಾಡಿ, ಸರಕಾರ ೩ ತಿಂಗಳಿಗೊಮ್ಮೆ ಮೊಟ್ಟೆ ಹಣ ನೀಡುತ್ತಿದೆ. ಇದರಿಂದ ನಾವೇ ಸ್ವಂತ ಹಣ ನೀಡಿ ಮೊಟ್ಟೆ ತರಬೇಕಿದೆ. ಸರಕಾರದಿಂದ ಗುಣಮಟ್ಟದ ಆಹಾರ ಪದಾರ್ಥಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.
ತುಷ್ಟಿ ಕಂಪನಿಯ ರೆವೆ, ಬೆಲ್ಲ, ಮಸಾಲೆ ಇತ್ಯಾದಿ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿಲ್ಲ. ರೆವೆಯಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಮಸಾಲೆಯನ್ನು ಹಾಕಿದರೆ ಮಕ್ಕಳು ಊಟ ಮಾಡುತ್ತಿಲ್ಲ. ರಾಜ್ಯಾದ್ಯಂತ ಏಕಮಾದರಿಯ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ಮಕ್ಕಳು ಆಹಾರ ಸೇವನೆ ಮಾಡಲು ಕಷ್ಟವಾಗುತ್ತಿದೆ. ಸರಕಾರ ಈ ಹಿಂದಿನ ಮಾದರಿಯ ಜಿಲ್ಲಾಧಿಕಾರಿಗಳ ನೇತೃತ್ವದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಖಜಾಂಚಿ ವೆಂಕಟಲಕ್ಷಮ್ಮ, ಲಕ್ಷಮ್ಮ, ಮಂಜುಳಾ, ಸುಜಾತ, ಭಾಗ್ಯಲಕ್ಷಮ್ಮ ಇದ್ದರು.