ವಿಜಯಪುರದಲ್ಲಿ ಅದ್ಧೂರಿ ವೈಕುಂಠ ಏಕಾದಶಿ
1 min readವಿಜಯಪುರದಲ್ಲಿ ಅದ್ಧೂರಿ ವೈಕುಂಠ ಏಕಾದಶಿ
ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು
ಉತ್ತರ ಬಾಗಿಲ ಮೂಲಕ ಪ್ರವೇಶ ಮಾಡಿದ ಭಕ್ತರು
ವೈಕುಂಠ ಏಕಾದಶಿ ಪ್ರಯುಕ್ತ ವಿಜಯಪುರದ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ಆಯೋಜಿಸಲಾಗಿತ್ತು. ದೇವಾಲಯಗಳಿಗೆ ಆಗಮಿಸುವ ಭಕ್ತರಿಗೆ ಉತ್ತ್ತರ ಬಾಗಿಲ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಅಲ್ಲದೆ ಎಲ್ಲ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗವೂ ನಡೆಯಿತು.
ವೈಕುಂಠ ಏಕಾದಶಿ ಅಂಗವಾಗಿ ವಿಜಯಪುರದಲ್ಲಿ ಅರ್ಜುನ ಪ್ರತಿಷ್ಟಾಪಿಸಿದ ಎನ್ನಲಾಗುವ ಕೋಟೆ ಬೀದಿಯ ಸೌಮ್ಯ ಚನ್ನಕೇಶವಸ್ವಾಮಿ ದೇವಾಲಯ, ಬಲಿಜಿಗರ ಬೀದಿಯ ವೆಂಕಟರಮಣಸ್ವಾಮಿ ದೇವಾಲಯ, ಹಾರ್ಡಿಪುರದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಇಂದು ಬೆಳಗ್ಗೆಯಿಂದಲೇ ಭಕ್ತರು ದೇವಾಲಯಗಳಿಗೆ ತೆರಳಿ, ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಹೂವಿನ ಅಲಂಕಾರದಿ0ದ ದೇವರ ಮೂರ್ತಿಗಳು ಕಂಗೊಳಿಸುತ್ತಿದ್ದವು. ಭಕ್ತರು ಉತ್ತರಾಭಿಮುಖವಾಗಿ ದೇವಾಲಯಗಳಿಗೆ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿತ್ತು. ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದರೆ, ಪಾಪಗಳು ನಿವಾರಣೆಯಾಗಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿ0ದ ಭಕ್ತ ಸಾಗರ ದೇವಾಲಯಗಳ ಕಡೆಗೆ ಹರಿದು ಬಂದಿತ್ತು.
ದೇವಾಲಯಗಳಲ್ಲಿ ವೈಕುಂಠ ಪ್ರವೇಶದ್ವಾರಗಳನ್ನು ನಿರ್ಮಾಣ ಮಾಡಲಾಗಿತ್ತು. ಬಗೆ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ದೀಪಗಳಿಂದ ದೇವಾಲಯಗಳು ಕಂಗೊಳಿಸಿದವು. ಭಕ್ತರಿಗೆ ಲಾಡು ಪ್ರಸಾದ ವಿತರಣೆ ಮಾಡಿದರು. ಅರ್ಚಕರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತರಿಗೆ ದೇವರ ದರ್ಶನ ಮಾಡಿಸಿದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಧಾರ್ಮಿಕ ಮುಖಂಡರು, ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ದೇವಾಲಯಗಳತ್ತ ಬಂದಿದ್ದರು. ದೇವಾಲಯಗಳ ಸಮೀಪದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರನ್ನು ನಿಯೋಜನೆಗೊಳಿಸಲಾಗಿತ್ತು.