ಗ್ರೀಟಿಂಗ್ ಕಾರ್ಡ್ ಬರೆದ ಆದಾಯದಲ್ಲೇ ಓದಿ ಚಿನ್ನದ ಪದಕ ಪಡೆದ ಬಡ ವಿದ್ಯಾರ್ಥಿನಿ!
1 min readರೇಷ್ಮಾ ಗ್ಯಾಬ್ರಿಯೆಲ್ ಎಂಬ ವಿದ್ಯಾರ್ಥಿನಿ ಧಾರವಾಡದಲ್ಲಿ ನೆಲೆಸಿರುವ ಸಿದ್ದಿ ಸಮುದಾಯವೊಂದಕ್ಕೆ ಸೇರಿದವಳು. ಅವರ ಮನೆಯಲ್ಲಿ ತಂದೆ – ತಾಯಿ, ಸಹೋದರ – ಸಹೋದರಿಯರು. ಮೂರು ಎಕರೆ ಜಮೀನು ಮಾತ್ರ ಅವರ ಜೀವನಕ್ಕೆ ಆಧಾರ. ಕೃಷಿಯಲ್ಲಿ ತೊಡಗಿಸಿಕೊಂಡು ಓದಿನಲ್ಲೂ ಆಸಕ್ತಿ ವಹಿಸಿದ್ದ ಆಕೆಯ ವಿದ್ಯಾಭ್ಯಾಸಕ್ಕೆ ಬಡತನವೇ ಅಡ್ಡಿಯಾಗಿತ್ತು. ಅದರಿಂದ ವಿಚಲಿತರಾಗದ ಆಕೆ, ಎನ್.ಜಿ.ಒ. ಒಂದರಲ್ಲಿ ಗ್ರೀಟಿಂಗ್ ಕಾರ್ಡ್ ಗಳನ್ನು ಬರೆಯುವ ಕೆಲಸ ಮಾಡುತ್ತಾ ಅದರಿಂದ ಬಂದ ಆದಾಯದಲ್ಲಿ ಓದಿ, ಎಂ.ಎಡ್ (M.Ed) ನಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ.
ಇವರದು ಕೃಷಿ ಪ್ರಧಾನ ಕುಟುಂಬ. ಕಿತ್ತು ತಿನ್ನುವ ಬಡತನ ಬೇರೆ. ಇಷ್ಟಿದ್ದರೂ ಓದುವ ತುಡಿತ ಮಾತ್ರ ನಿಂತಿರಲಿಲ್ಲ. ಹಾಗೋ ಹೀಗೋ ಎನ್‌ಜಿಒದಲ್ಲಿ ಕೆಲಸ ಮಾಡುತ್ತ ಅಲ್ಲಿ ಸ್ಪಾನ್ಸರ್ ಗ್ರೀಟಿಂಗ್ ಕಾರ್ಡ್ ಬರೆದು ಗಳಿಸಿದ ಹಣದಲ್ಲೇ ಓದು ಮುಂದುವರಿಸಿದ ಈಕೆ ಇದೀಗ ಅಕ್ಷರಶಃ ಚಿನ್ನದ ಹುಡುಗಿ!
ಸಿದ್ದಿ ಸಮುದಾಯದಲ್ಲಿ ಜನಿಸಿ ಈಗ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಇಡಿ ಪದವಿಯಲ್ಲಿ ಎರಡು ಚಿನ್ನದ ಪದಕ ಪಡೆದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ರಾಮಾಪುರ ಗ್ರಾಮದ ರೇಷ್ಮಾ ಗಾಬ್ರೆಕರ್ ಎಂಬ ವಿದ್ಯಾರ್ಥಿನಿಯ ಯಶೋಗಾಥೆ ಇದು.
ತಂದೆ ಕೃಷಿಕ. ಕುಟುಂಬಕ್ಕೆ 3 ಎಕರೆ ಜಮೀನೇ ಆಧಾರ. ಹೀಗಾಗಿ ತಂದೆ ಪಾಸ್ಕೋಲ್, ತಾಯಿ ಅವರೇಟ್, ಸಹೋದರ ಝೇವಿಯರ್, ಸಹೋದರಿಯರಾದ ಶೀಲಾ-ಟೀನಾ ಜತೆಗೆ ಕೃಷಿ ಕೆಲಸ ಮಾಡುತ್ತಲೇ ರೇಷ್ಮಾ ಪಿಯುಸಿ, ಬಿಎ, ಎಂಎ ಪದವಿ ಪಡೆದರು. ತರಕಾರಿ ಕಟಾವು ಮಾಡಿ ಮಾರಾಟ ಮಾಡುವ ಕೆಲಸದೊಂದಿಗೆ ಉನ್ನತ ಶಿಕ್ಷಣದಲ್ಲಿ ಸಾಧಿಸುವ ಛಲ ಹೊಂದಿದ್ದರು. ಬಡತನ ಅಡ್ಡಿಯಾಗಿ ಶುಲ್ಕ ಪಾವತಿಯೂ ಕಷ್ಟವಾದಾಗ ಸಹೋದರಿ ಟೀನಾಳ ಜತೆ ಎನ್‌ಜಿಒದಲ್ಲಿ ಕೆಲಸಕ್ಕೆ ಸೇರಿ, ಅಲ್ಲಿ 500 ಗ್ರೀಟಿಂಗ್ ಕಾರ್ಡ್ ಬರೆದುಕೊಟ್ಟರೆ ನೀಡುತ್ತಿದ್ದ 1,000 ರೂ. ಗೌರವಧನವನ್ನು ಓದಿಗೆ ಬಳಸಿಕೊಂಡು ಈಗ ಎಂಇಡಿಯಲ್ಲಿ ಅತ್ಯುನ್ನತ ಸಾಧನೆ ತೋರಿದ್ದಾರೆ.
ಓದಿಗೆ ಎದುರಾದ ಕಷ್ಟ-ಕಾರ್ಪಣ್ಯಗಳನ್ನು ‘ವಿಕ’ ಜತೆ ಹಂಚಿಕೊಂಡಿರುವ ರೇಷ್ಮಾ, ”ಈಗ ನಾನು ಪಿಎಚ್‌ಡಿ ಮಾಡುತ್ತಿದ್ದೇನೆ. ಪ್ರೊಫೆಸರ್ ಆಗುವ ಕನಸಿದೆ. ನಮ್ಮ ಸಿದ್ದಿ ಸಮುದಾಯ ಉನ್ನತ ಶಿಕ್ಷಣ ಪಡೆಯಲು ಹಿಂಜರಿಯುತ್ತಿದೆ. ಹೀಗಾಗಿ ಸಾಧಿಸಿ ತೋರುವ ಮೂಲಕ ನಮ್ಮ ಸಮುದಾಯಕ್ಕೆ ನಾನೇ ಮಾದರಿ ಆಗುವೆ” ಎಂದು ಅಭಿಪ್ರಾಯಪಟ್ಟರು.