ಕೆಲವೇ ಗಂಟೆಗಳಲ್ಲಿ ನಗರಸಭೆಗೆ ನೂತನ ಸಾರಥಿ ನೇಮಕ
1 min readಕೆಲವೇ ಗಂಟೆಗಳಲ್ಲಿ ನಗರಸಭೆಗೆ ನೂತನ ಸಾರಥಿ ನೇಮಕ
ಇಂದು ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಸದಸ್ಯರು
ರಾತ್ರಿ ವೇಳೆಗೆ ಬೆಂಗಳೂರಿಗೆ ಬರಲಿರುವ ಬಿಜೆಪಿ ಸದಸ್ಯರು
ತೀವ್ರಗೊಂಡ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಆಯ್ಕೆ ಕಸರತ್ತು
ಅಂತೂ ಇಂತೂ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷರ ಆಯ್ಕೆ ಸಮಯ ಸಮೀಪಿಸಿದೆ. ರಾಜಸ್ಥಾನದಲ್ಲಿದ್ದ ಕಾಂಗ್ರೆಸ್ ನಗರಸಭಾ ಸದಸ್ಯರು ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಖಾಸಗಿ ಹೋಟೆವೊಂದರಲ್ಲಿ ಮೊಕ್ಕಾಂ ಹೂಡಿರುವ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ಮುಳುಗಿದ್ದಾರೆ. ಇನ್ನು ಬಿಜೆಪಿ ಸದಸ್ಯರು ಇಂದು ಸಂಜೆ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಪ್ರವಾಸಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದ ಕಾಂಗ್ರೆಸ್ ಸದಸ್ಯರು ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದು, ಖಾಸಗಿ ಹೋಟೆಲ್‌ವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಎರಡು ದಿನ ತಡವಾಗಿ ಹೊರಟು, ಒಂದು ದಿನ ಮುಂಚಿತವಾಗಿಯೇ ಕಾಂಗ್ರೆಸ್ ಸದಸ್ಯರು ವಾಪಸ್ ಆಗಿದ್ದು, ಅಂತಿಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅಭ್ಯರ್ಥಿಗಳು ಯಾರಾಗಬೇಕು ಎಂಬ ಗೊಂದಲ ನಿವಾರಣೆಗಾಗಿ ಸಭೆ ನಡೆಸಿದ್ದಾರೆ. ಆದರೆ ಸಭೆಯಲ್ಲಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಇನ್ನೂ ಸಹಮತ ವ್ಯಕ್ತವಾಗಿಲ್ಲ ಎಂದು ತಿಳಿದುಬಂದಿದೆ.
ಕಾ0ಗ್ರೆಸ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳು ಯಾರು ಎಂಬ ಗೊಂದಲ ಇನ್ನೂ ನಿವಾರಣೆಯಾಗಿಲ್ಲ ಎನ್ನಲಾಗಿದ್ದು, ಬಿಜೆಪಿಯಲ್ಲಿ ಬಹುತೇಕ ಈ ಗೊಂದಲಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ. ಇಂದು ಸಂಜೆ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ಬಿಜೆಪಿ ಸದಸ್ಯರು. ಬೆಂಗಳೂರಿಗೆ ಆಗಮಿಸುವುದಕ್ಕೂ ಮೊದಲೇ ಅಧ್ಯಕ್ಷ ಅಭ್ಯರ್ಥಿಯನ್ನು ಬಹುತೇಕ ಅಂತಿಮ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಅಧ್ಯಕ್ಷ ಅಭ್ಯರ್ಥಿಯಾಗಿ 10ನೇ ವಾರ್ಡಿನ ನಗರಸಭಾ ಸದಸ್ಯ ಸುಬ್ರಹ್ಮಣ್ಯಾಚಾರಿ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ೫ನೇ ವಾರ್ಡಿನ ಜೆ. ನಾಗರಾಜ್ ಅವರ ಹೆಸರು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಡಾರ್ಜಲಿಂಗ್‌ನಲ್ಲಿ ಬಂಧಿಯಾಗಿದ್ದ ಬಿಜೆಪಿ ಸದಸ್ಯರು ಇಂದು ಸಂಜೆ ಬಿಡುಗಡೆಯಾಗಲಿದ್ದು, ಸಂಜೆ ಬೆಂಗಳೂರಿಗೆ ಆಗಮಿಸಿ, ಖಾಸಗಿ ಹೋಟೆಲ್‌ವೊಂದರಲ್ಲಿ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಳೆ ಬೆಳಗ್ಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ಇರುವುದರಿಂದ ಚುನಾವಣೆ ಸಮಯಕ್ಕೆ ಸರಿಯಾಗಿ ನಗರಸಭೆಗೆ ಎಲ್ಲ 18ಸದಸ್ಯರೂ ಒಟ್ಟಾಗಿ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಕಾಂಗ್ರೆಸ್ ಬಳಿ ಬಹುಮತಕ್ಕೆ ಕೊರತೆ ಇದ್ದು, ಕೊರತೆ ಪೂರೈಸಲು ಬಿಜೆಪಿ ಜೊತೆ ಪ್ರವಾಸಕ್ಕೆ ತೆರಳಿರುವ ಸದಸ್ಯರಲ್ಲಿ ಕನಿಷ್ಠ ಇಬ್ಬರನ್ನಾದರೂ ಸೆಳೆಯುವ ಪ್ರಯತ್ನದಲ್ಲಿ ಕಾಂಗ್ರೆಸ್ ನಿರತವಾಗಿದೆ. ಆದರೆ ಸದಸ್ಯರ ಮೊಬೈಲ್‌ಗಳು ಕಳೆದ ನಾಲ್ಕು ದಿನಗಳಿಂದ ಸ್ಥಬ್ದವಾಗಿದ್ದು, ಸದಸ್ಯರನ್ನು ಸಂಪರ್ಕಿಸಲು ಕಾಂಗ್ರೆಸ್ ನಯಾಕರಿಗೆ ಸಾಧ್ಯವಾಗಿಲ್ಲ. ಹಾಗಾಗಿಯೇ ಸದಸ್ಯರ ಕುಟುಂಬ ಇಲ್ಲವೇ ಅವರ ಸಂಬ0ಧಿಕರನ್ನು ಸಂಪರ್ಕಿಸಿ, ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಕೋರಲಾಗುತ್ತಿದ್ದು, ಇದರಲ್ಲಿ ಕೊಡುವ ಮತ್ತು ಪಡೆಯುವ ವ್ಯವಹಾರಗಳೂ ನಡೆದಿವೆ ಎಂದು ತಿಳಿದುಬಂದಿದೆ.
ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲಿಯೂ ಅಧಿಕೃತವಾಗಿ ಅಧ್ಯಕ್ಷ ಅಭ್ಯರ್ಥಿ ಯಾರು ಎಂಬುದು ಇನ್ನೂ ಘೋಷಣೆಯಾಗಿಲ್ಲ. ಇದರಿಂದ ಸದಸ್ಯರಲ್ಲಿ ಗೊಂದಲ ಇದ್ದು, ಕೆಲ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಇರುವ ಸದಸ್ಯರು, ತಮಗೆ ಇಷ್ಟವಿಲ್ಲದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಯಾವುದೇ ಕಾರಣಕ್ಕೂ ಒಪ್ಪುತ್ತಿಲ್ಲ ಎನ್ನಲಾಗಿದೆ. ಹಾಗಾಗಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಮೇಲೆ ಪ್ರವಾಸಕ್ಕೆ ತೆರಳಿರುವ ಸದಸ್ಯರು ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸುವ ಆತಂಕ ಉಭಯ ಪಕ್ಷಗಳನ್ನೂ ಕಾಡುತ್ತಿದೆ.
ಅಲ್ಲದೆ ಗೆಲ್ಲುವ ಪಕ್ಷ ಯಾವುದು ಎಂಬುದನ್ನು ನೋಡಿಕೊಂಡು ಬೆಂಬಲಿಸಲು ಹಲವು ಸದಸ್ಯರು ಗೋಡೆಯ ಮೇಲೆ ನಿಂತಿದ್ದಾರೆ ಎನ್ನಲಾಗಿದೆ. ಇನ್ನೂ ಒಂದು ವರ್ಷ ನಗರಸಭೆ ಅವಧಿ ಇದೆ, ಕಳೆದ ಒಂದೂವರೆ ವರ್ಷದಿಂದ ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಆಡಳಿತಕ್ಕೆ ಬರಲಿರುವ ಅಭ್ಯರ್ಥಿ ಪರ ಇದ್ದರೆ, ಮುಂದಿನ ಒಂದು ವರ್ಷದಲ್ಲಾದರೂ ಅಭಿವೃದ್ಧಿ ಕಾಮಗಾರಿಗಳನ್ನು ವಾರ್ಡಿಗೆ ತಂದು, ಮತ್ತೆ ವಾರ್ಡಿನ ಜನತೆಯನ್ನು ಮತ ಕೇಳಲು ಹೋಗಬಹುದು, ಸೋಲುವ ಅಭ್ಯರ್ಥಿಯನ್ನು ಬೆಂಬಲಿಸಿದರೆ, ನಂತರ ಗೆದ್ದ ಅಭ್ಯರ್ಥಿ ತಮಗೆ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡದೆ, ವಾರ್ಡಿನ ಜನತೆಗೆ ಮುಖ ತೋರಿಸಲೂ ಸಾಧ್ಯವಾಗದ ಸ್ಥಿತಿ ಎದುರಾಗಲಿದೆ ಎಂಬ ಆತಂಕ ಸದಸ್ಯರನ್ನು ಕಾಡುತ್ತಿದೆ.
ಇದರಿಂದಾಗಿ ಗೆದ್ದ ಎತ್ತಿನ ಬಾಲ ಹಿಡಿಯಲು ಹಲವು ಸದಸ್ಯರು ಎದುರು ನೋಡುತತಿದ್ದರೆ, ಅಧ್ಯಕ್ಷ ಸ್ಥಾನದ ಅಧಿಕೃತ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಮೇಲೆ ತಮ್ಮ ಬೆಂಬಲ ವ್ಯಕ್ತಪಡಿಸಲು ಹಲವು ಸದಸಯ್ರು ಕಾದು ಕುಳಿತಿದ್ದಾರೆ. ಇವರಿಬ್ಬರ ನಡುವೆ ಸದಸ್ಯರ ಮನವೊಲಿಸಿ, ಬಹುಮತ ಸಾಬೀತು ಪಡಿಸುವ ಮೂಲಕ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಹಲವರು ಎದುರು ನೋಡುತ್ತಿದ್ದು, ಅಂತಿಮನವಾಗಿ ನಾಳೆ ಮಧ್ಯಾಹ್ನದ ಒಳಗೆ ನಗರದ ಪ್ರಥಮ ಪ್ರಜೆ ಯಾರು ಎಂಬುದು ಸಾಬೀತಾಗಲಿದ್ದು, ಅಲ್ಲಿಯವರೆಗೂ ಕುತೂಹಲ ಮುಂದುವರಿಯಲಿದೆ ಎಂದರೆ ತಪ್ಪಾಗಲಾರದು.