ದಿಲ್ಲಿ ಮೈದಾನದಲ್ಲಿ ಹಿಂದೆಂದೂ ಕಂಡಿರದ ದೃಶ್ಯ; ವಿಚಿತ್ರ ರೀತಿಯಲ್ಲಿ ಔಟಾದ ಮ್ಯಾಥ್ಯೂಸ್
1 min readಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯವು ಅಂತಾರಾಷ್ಟ್ರೀಯ ಕ್ರಿಕೆಟ್ ಎಂದೆದೂ ಕಂಡಿರದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಲಂಕಾದ ಹಿರಿಯ ಆಲ್ ರೌಂಡರ್ ಏಂಜಲೋ ಮ್ಯಾಥ್ಯೂಸ್ ಅವರು ಟೈಮ್ ಔಟ್ ಗೆ ಬಲಿಯಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಪಾತ್ರರಾದರು.
ಲಂಕಾದ ಸದೀರ ಸಮರವಿಕ್ರಮ ಅವರು ಔಟಾದ ಬಳಿಕ ಆಯಂಜಲೋ ಮ್ಯಾಥ್ಯೂಸ್ ಅವರು ಬ್ಯಾಟಿಂಗ್ ಗೆಂದುಬಂದರು. ಆರಂಭದಲ್ಲೇ ಮೈದಾನ ಪ್ರವೇಶಿಸಲು ಸ್ವಲ್ಪ ಸಮಯ ತೆಗೆದುಕೊಂಡ ಮ್ಯಾಥ್ಯೂಸ್ ಗೆ ಬಳಿಕ ಹೆಲ್ಮೆಟ್ ಗೊಂದಲವಾಯಿತು. ಕ್ರೀಸ್ ಗೆ ಬಂದ ಮ್ಯಾಥ್ಯೂಸ್ ತಾನ ತಂದ ಹೆಲ್ಮೆಟ್ ಸರಿ ಇಲ್ಲವೆಂದು ಬದಲಿ ಹೆಲ್ಮೆಟ್ ತರಿಸಲು ಹೇಳಿದರು.
ಆದರೆ ಈ ವೇಳೆ ಆಯಂಜಲೋ ಮ್ಯಾಥ್ಯೂಸ್ ಅವರು ಟೈಮ್ ಔಟ್ ಆದ ಕಾರಣ ಔಟ್ ಎಂದು ಬಾಂಗ್ಲಾದ ನಾಯಕ ಶಕಿಬ್ ಅಲ್ ಹಸನ್ ಅಪೀಲ್ ಮಾಡಿದರು. ಮ್ಯಾಥ್ಯೂಸ್ ಅವರು ಶಕಿಬ್ ಬಳಿ ಮನವಿ ಮಾಡಿದರೂ, ಬಾಂಗ್ಲಾ ನಾಯಕ ತನ್ನ ನಿಲುವು ಬದಲಿಸಲಿಲ್ಲ.
ಎಂಸಿಸಿ ನಿಯಮದ ಪ್ರಕಾರ, “ವಿಕೆಟ್ ಪತನದ ಬಳಿಕ ಅಥವಾ ನಿವೃತ್ತನಾಗಿ ಬ್ಯಾಟರ್ ಹೊರನಡೆದ ಬಳಿಕ ಮೂರು ನಿಮಿಷದೊಳಗೆ ಮುಂದಿನ ಬ್ಯಾಟರ್ ಎಸೆತವನ್ನು ಎದುರಿಸಲು ಸಿದ್ದರಾಗಿರಬೇಕು. ಇಲ್ಲದಿದ್ದರೆ ಮುಂದಿನ ಬ್ಯಾಟರ್ ಟೈಮ್ ಔಟ್ ಮೂಲಕ ಔಟ್ ಎಂದು ಘೋಷಿಸಲಾಗುತ್ತದೆ”.
ಆದರೆ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಮೂರು ನಿಮಿಷದ ಬದಲು ಎರಡು ನಿಮಿಷಗಳ ಅವಕಾಶ ನೀಡಲಾಗುತ್ತದೆ.
ಕ್ರಿಕೆಟ್ ಇತಿಹಾಸದಲ್ಲಿ ಟೈಮ್ ಔಟ್ ಗೆ ಔಟಾದ ಆರನೇ ಬ್ಯಾಟರ್ ಮ್ಯಾಥ್ಯೂಸ್. ಮೊದಲ ಎಲ್ಲಾ ಐದು ಪ್ರಕರಣಗಳು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಬಂದಿದೆ.