ಕುದಿ ಕಂಬಳಕ್ಕೆ ಅದ್ಧೂರಿ ಚಾಲನೆ
1 min readಅರಮನೆ ಮೈದಾನದ 5ನೇ ಗೇಟ್‌ನಲ್ಲಿ ನಿರ್ಮಿಸಲಾದ ಕಣದಲ್ಲಿ ಕುದಿ ಕಂಬಳಕ್ಕೆ ಗುರುವಾರ ಅದ್ಧೂರಿ ಚಾಲನೆ ದೊರೆತಿದೆ.
ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಕುದಿ ಕಂಬಳ ಉದ್ಘಾಟಿಸಿದರು. ಮಹಿಳೆಯರು ಕರೆ(ಟ್ರ್ಯಾಕ್) ಪೂಜಾ ಕೈಂಕರ್ಯ ನೆರವೇರಿಸಿದರು.
ಸಮಿತಿಯ ಎಲ್ಲ ಪದಾಧಿಕಾರಿಗಳು ಇದರಲ್ಲಿ ಭಾಗಿಯಾದರು. ತಿಂಗಳಡಿ ಬಾಲಯ ರೋಹಿತ್ ಬಂಗೇರ ಎರಡು ಜೊತೆ ಕೋಣಗಳು, ಸುಳ್ಯದ ಕಾಂತಮಂಗಿಲದ ಒಂದು ಜೊತೆ ಕೋಣಗಳನ್ನು ಕುದಿ ಕಂಬಳದಲ್ಲಿ ಪ್ರಾಯೋಗಿಕವಾಗಿ ಓಡಿಸಲಾಯಿತು. ಕೋಣಗಳು ಓಡುವ ಟ್ರ್ಯಾಕ್‌ನ ಪರೀಕ್ಷಣೆ ನಡೆದಿದ್ದು ಅದನ್ನು ಅತ್ಯುತ್ತಮವಾಗಿ ಸಿದ್ಧಪಡಿಸಲಾಗಿದೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಬೆಳಗ್ಗೆ 10.30 ಕ್ಕೆ ಕಂಬಳ ಶುರುವಾದರೂ ಅಸಲಿ ಕಂಬಳದ ಕ್ರೀಡೆ ನಡೆಯೋದು ಸಾಯಂಕಾಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಸಂಜೆ 5.30ಕ್ಕೆ ಆಗಮಿಸಲಿದ್ದಾರೆ. ಕಂಬಳ ಸಾಮಾನ್ಯವಾಗಿ ಮಧ್ಯರಾತ್ರಿಯವರೆಗೆ ನಡೆಯತ್ತದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಕೋಣಗಳಿಗೆ ಹುರಿದುಂಬಿಸುವ ಸಲುವಾಗಿ ಬೆಂಗಳೂರು ಕಂಬಳದ ಪೂರ್ವಭಾವಿಯಾಗಿ ದಕ್ಷಿಣ ಕನ್ನಡದಿಂದ ಆಗಮಿಸಿದ ಮೂರು ಜೋಡಿ ಕೋಣಗಳು ಕುದಿ ಕಂಬಳದ ಟ್ರಯಲ್‌ಗೆ ಇಳಿದು ಓಡಿರುವುದು ವಿಶೇಷವಾಗಿತ್ತು.
ಕುದಿ ಕಂಬಳ ಏಕೆ?: ಕರಾವಳಿ ಭಾಗದಲ್ಲಿ ಕಂಬಳ ಸ್ಪರ್ಧಾಕೂಟ ಸಮೀಪಿಸುತ್ತಿದ್ದಂತೆ ಸ್ಪರ್ಧೆ ನಡೆಯುವ ಒಂದು ತಿಂಗಳ ಮೊದಲು ಕುದಿ ಕಂಬಳ ಎಂಬ ಕೋಣಗಳ ಓಟದ ರಿಹರ್ಸಲ್ (ಪ್ರಾಯೋಗಿಕ) ಅಥವಾ ಓಟದ ತಾಲೀಮು ನಡೆಸಲಾಗುತ್ತದೆ. ಕುದಿ ಕಂಬಳ ಮಾಡುವ ಉದ್ದೇಶವೇನೆಂದರೆ ಕೋಣಗಳನ್ನು ಪ್ರಾಯೋಗಿಕವಾಗಿ ಓಡಿಸುವುದರಿಂದ ಕರೆಯ(ಟ್ರ್ಯಾಕ್) ಸಾಧಕ-ಬಾಧಕ, ಅಲ್ಲಿ ಮಣ್ಣು, ಮರಳು ಕಡಿಮೆಯಿದ್ದರೆ ಸರಿಪಡಿಸಲಾಗುತ್ತದೆ. ಕರೆಯ ಕೆಲವು ಕಡೆ ಸಮತಟ್ಟಿಲ್ಲದಿದ್ದರೆ ಕೋಣಗಳ ಕಾಲು ಹೂಳುತ್ತದೆ. ಬೆಂಗಳೂರು ಕಂಬಳದ ಕರೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ತಿಳಿದು ಬಂದಿದೆ ಎಂಬುದಾಗಿ ಸಮಿತಿಯ ಕಾರ್ಯಾಧ್ಯಕ್ಷ ಮುರಳೀರ್ ರೈ ಮಠಂತಬೆಟ್ಟು ಮಾಹಿತಿ ನೀಡಿದ್ದಾರೆ.
ಕೋಣದ ಮಾಲೀಕರಿಂದ ಹರ್ಷ: ನಮ್ಮ ಕೋಣಗಳು ಬೆಂಗಳೂರಿನಲ್ಲಿ ಓಟ ಪ್ರಾರಂಭಿಸಿರುವ ಬಗ್ಗೆ ಬಹಳ ಖುಷಿ ಇದೆ. ನಮ್ಮ ಕೋಣಗಳು ಹಲವು ವರ್ಷಗಳಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿವೆ. ಕೋಣಗಳಿಗೆ ಕೊಡಲು ಊರಿನಿಂದಲೂ ನೀರು ತಂದಿದ್ದೇವೆ. ಹೆಚ್ಚಾಗಿ ಬಿಸಿಲೇರಿ ನೀರು ಕೊಡುತ್ತೇವೆ. ಕೋಣಗಳಿಗೆ ಆರೋಗ್ಯ ಸಮಸ್ಯೆ ಎದುರಾದರೆ ಮತ್ತೆ ಅದನ್ನು ಸರಿಪಡಿಸಲು ಸುಮಾರು ಒಂದು ತಿಂಗಳು ಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕೋಣಗಳ ಮಾಲೀಕರೊಬ್ಬರು ತಿಳಿಸಿದ್ದಾರೆ.
ಸಾಲಾಗಿ ಬೆಂಗಳೂರಿಗೆ ಎಂಟ್ರಿ ಕೊಟ್ಟ ಕೋಣಗಳು
ಹಾಸನದಿಂದ ಕೋಣಗಳನ್ನು ತುಂಬಿದ ಟೆಂಪೋಗಳು ಒಂದರ ಹಿಂದೆ ಒಂದರಂತೆ ಸಾಲಾಗಿ ಬೆಂಗಳೂರಿಗೆ ಬಂದವು. ಹೆಚ್ಚು ಸಂಚಾರ ದಟ್ಟಣೆ ಆಗಬಾರದು ಎಂಬ ಉದ್ದೇಶದಿಂದ ಒಂದಿಷ್ಟು ಸಮಯದ ಬಳಿಕ ಬ್ಯಾಚ್ ವೈಸ್ ಪ್ರಕಾರ ಕೋಣಗಳ ಟೆಂಪೋಗಳನ್ನು ಹಂತ-ಹಂತವಾಗಿ ಕಳುಹಿಸಲಾಯಿತು.
ರಾತ್ರಿ 11.30ಕ್ಕೆ ನೆಲಮಂಗಲದ ಬಳಿಯಿರುವ ಖಾಲಿ ಜಾಗದಲ್ಲಿ ಎಲ್ಲ ಕೋಣಗಳೂ ಜೊತೆಯಾದವು. ಬಳಿಕ ಬೆಂಗಳೂರಿನಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗದಂತೆ ಪೊಲೀಸರ ಸಮ್ಮುಖದಲ್ಲಿ ಕೋಣಗಳಿರುವ ಟೆಂಪೋಗಳನ್ನು ಅರಮನೆ ಮೈದಾನಕ್ಕೆ ಕರೆ ತರಲಾಯಿತು. ಸಂಚಾರ ದಟ್ಟಣೆಯಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿ ಕಂಬಳದ ಕೋಣಗಳ ತುಂಬಿದ ವಾಹನಕ್ಕೆ ಸಾಗಲು ಸುಸಜ್ಜಿತ ವ್ಯವಸ್ಥೆ ಮಾಡಿಕೊಟ್ಟರು.
ತಡರಾತ್ರಿ 11.30 ರಿಂದ 12 ಗಂಟೆ ಸುಮಾರಿಗೆ 160 ಜೊತೆ ಕೋಣಗಳು ಅರಮನೆ ಮೈದಾನಕ್ಕೆ ಎಂಟ್ರಿ ಕೊಟ್ಟವು. ಇತ್ತ ಸಕಲ ಸಿದ್ದತೆಗೊಂಡಿದ್ದ ಅರಮನೆ ಮೈದಾನದಲ್ಲಿ ಕೋಣಗಳಿಗಾಗಿ ನಿರ್ಮಿಸಿರುವ ಜಾಗದಲ್ಲಿ ಅವುಗಳು ಗುರುವಾರ ರಾತ್ರಿ ಕಳೆದಿವೆ.
ದಣಿದ ಕೋಣಗಳಿಗೆ ವಿಶ್ರಾಂತಿ
ಉಪ್ಪಿನಂಗಡಿಯಿಂದ ಒಂದೇ ದಿನ ಬೆಂಗಳೂರಿಗೆ ವಾಹನದಲ್ಲಿ ಪ್ರಯಾಣಿಸಿದ ಹಿನ್ನೆಲೆಯಲ್ಲಿ ಬಹುತೇಕ ಕೋಣಗಳು ದಣಿದು ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದು ಕಂಡು ಬಂತು. ಬೇರೆ ಊರಿಂದ ಬೆಂಗಳೂರಿಗೆ ಬಂದ ಹಿನ್ನೆಲೆಯಲ್ಲಿ ಇಲ್ಲಿನ ವಾಹನ ದಟ್ಟಣೆ, ಅರಮನೆ ಮೈದಾನದಲ್ಲಿ ವೇದಿಕೆ, ಆಸನ, ಪಾರ್ಕಿಂಗ್, ಸ್ಟಾಲ್‌ಗಳಲ್ಲಿರುವ ಜನ ಜಂಗುಳಿ, ಜಗಮಗಿಸುವ ಲೈಟಿಂಗ್ಸ್ ಕಂಡು ದಂಗಾದವು. ಕೋಣಗಳನ್ನು ನೋಡಿಕೊಳ್ಳಲೆಂದು ಬಂದಿದ್ದ ಸಹಾಯಕರು ಅವುಗಳನ್ನು ಸಮಾಧಾನಪಡಿಸಿ ವಿಶ್ರಾಂತಿಗೆ ಕೆರೆದೊಯ್ಯುವ ದೃಶ್ಯ ಕಂಡು ಬಂತು. ಬೆಂಗಳೂರಿನ ವಿದ್ಯುತ್ ದೀಪದ ಅಲಂಕಾರಗಳಿಗೆ ಕೆಲವು ಕೋಣಗಳು ಬೆಚ್ಚಿ ಬಿದ್ದು ಓಡಲು ಆರಂಭಿಸಿದಾಗ ಸಹಾಯಕರು ಅವುಗಳನ್ನು ನಿಯಂತ್ರಿಸಿದರು.
ಹಾಸನದಲ್ಲಿ ಕೋಣಗಳಿಗೆ ಭರ್ಜರಿ ಸ್ವಾಗತ
ಹಾಸನ: ಬೆಂಗಳೂರು ಕಂಬಳ -ನಮ್ಮ ಕಂಬಳಕ್ಕೆ ತೆರಳುತ್ತಿದ್ದ ಕಂಬಳದ ಕೋಣಗಳಿಗೆ ಹಾಸನದಲ್ಲಿ ಗುರುವಾರ ಭರ್ಜರಿ ಸ್ವಾಗತ ನೀಡಲಾಯಿತು. ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಲಾರಿಗಳಲ್ಲಿ ಹೊರಟ 175 ಜೋಡಿ ಕಂಬಳದ ಕೋಣಗಳು ಮಧ್ಯಾಹ್ನ 2.30ರ ವೇಳೆಗೆ ಹಾಸನ ನಗರದ ಹೊರವಲಯಕ್ಕೆ ಆಗಮಿಸಿದಾಗ ಹಾಸನದ ಕರಾವಳಿ ಮಿತ್ರ ಮಂಡಳಿಯ ಸದಸ್ಯರು ಸಂಭ್ರಮದಿಂದ ಸ್ವಾಗತಿಸಿದರು.
ಕಂಬಳದ ಕೋಣಗಳನ್ನು ಸ್ವಾಗತಿಸಲು ನಸುಗೆಂಪು ಬಣ್ಣದ ಮುಂಡಾಸು ಧರಿಸಿ ಹಾಸನದ ಹೊರವಲಯದ ದೇವರಾಯಪಟ್ಟಣದ ಬಳಿ ಕಾದಿದ್ದ ನೂರಾರು ಜನರು ಘೋಷಣೆ ಕೂಗಿ ಕೋಣಗಳನ್ನು ಹೊತ್ತಿದ್ದ ಲಾರಿಗಳನ್ನು ಸ್ವಾಗತಿಸಿದರು. ಆನಂತರ ಲಾರಿಗಳು ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮೈದಾನಕ್ಕೆ ಬಂದಿಳಿದವು. ಲಾರಿಯಿಂದ ಕೋಣಗಳನ್ನು ಇಳಿಸಲು ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ದಿಣ್ಣೆಯನ್ನು ನಿರ್ಮಿಸಲಾಗಿತ್ತು.
ಲಾರಿಯಿಂದ ದೀಣೆಗೆ ಇಳಿದ ಕೋಣಗಳನ್ನು ಮೈದಾನದಲ್ಲಿ ಕಟ್ಟಿ ಮೇವು, ನೀರು ಕುಡಿಸಿಪರಿಚಾರಕರು ಉಪಚರಿಸಿದರು. ಕೋಣಗಳಿಗೆ ಸ್ನಾನ ಮಾಡಿಸಲು ಹಾಸನ ಹಾಲು ಒಕ್ಕೂಟವು ಟಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಿತು. ಕೋಣಗಳ ಮಾಲಿಕರು ಹಾಗೂ ಪರಿಚಾರಕರಿಗೆ ಊಟದ ವ್ಯವಸ್ಥೆಯನ್ನು ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಹಾಸನದ ಕರಾವಳಿ ಮಿತ್ರ ಮಂಡಳಿ ಮಾಡಿತ್ತು.