ಅ. 31 ಮತ್ತು ನ. 1ರಂದು ಕರ್ನಾಟಕಕ್ಕೆ ಮಳೆಯ ಭಾಗ್ಯ!
1 min readಅ. 31ರಿಂದ ನ. 1ರವರಿಗಿನ ಅವಧಿಯಲ್ಲಿ ಕರ್ನಾಟಕದ ಶೇ. 80ರಷ್ಟು ಕಡೆ ತೀವ್ರ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಕರ್ನಾಟಕ ಪ್ರಾಕೃತಿಕ ವಿಕೋಪ ನಿಗಾ ಕೇಂದ್ರ (ಕೆಎಸ್ ಎನ್ ಡಿಎಂಸಿ) ತಿಳಿಸಿದೆ. ಈ ಕುರಿತಂತೆ ಸಂಸ್ಥೆಯು ಉಪಗ್ರಹಾಧಾರಿತ ಮಳೆ ನಕ್ಷೆಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮಂಡ್ಯ, ಕೊಡಗು ಹಾಗೂ ತುಮಕೂರಿನಲ್ಲಿ ವ್ಯಾಪಕ ಮಳೆಯಾಗುವುದಾಗಿ ತಿಳಿಸಲಾಗಿದೆ. ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೇ ಸಾಧಾರಣದಿಂದ ಅಧಿಕ ಮಳೆಯಾಗುತ್ತದೆ ಎಂದು ನಕ್ಷೆಯಲ್ಲಿ ವಿವರಿಸಲಾಗಿದೆ.
ಮಂಗಳವಾರದಂದು (ಅ. 31) ದಿಢೀರ್ ಪ್ರಕಟಣೆ ಹೊರಡಿಸಿರುವಕರ್ನಾಟಕ ಪ್ರಾಕೃತಿಕ ವಿಕೋಪ ನಿಗಾ ಕೇಂದ್ರ (ಕೆಎಸ್ ಎನ್ ಡಿ ಎಂಸಿ) ದಕ್ಷಿಣ ಒಳನಾಡಿನಲ್ಲಿ ನ. 31ರ ಸಂಜೆಯಿಂದ ನ. 1ರ ಬೆಳಗ್ಗೆಯವರೆಗೆ ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ.
ಸಂಸ್ಥೆಯು ಬಿಡುಗಡೆ ಮಾಡಿರುವ ಮಳೆಯ ನಕ್ಷೆಯನ್ವಯ ರಾಜ್ಯದ ಶೇ. 80ರಷ್ಟು ಕಡೆ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಮೇಲಿನ ವಿಜಯಪುರದಿಂದ ದಕ್ಷಿಣ ಕರ್ನಾಟಕದ ತುಟ್ಟತುದಿಯಲ್ಲಿರುವ ಚಾಮರಾಜನಗರ ಜಿಲ್ಲೆಯವರೆಗೆ ಮಳೆ ಬೀಳುವ ನಿರೀಕ್ಷೆ ದಟ್ಟವಾಗಿದೆ. ಆದರೆ, ಮಳೆ ಪ್ರಮಾಣ ಮಾತ್ರ ಮೇಲಿನಿಂದ ಕೊಂಚ ಹೆಚ್ಚು ಕಡಿಮೆಯಾಗಲಿದೆ.
ಅಂದರೆ, ವಿಜಯಪುರದಿಂದ ಮಧ್ಯ ಕರ್ನಾಟಕದವರೆಗೆ ಚದುರಿದ ಮಳೆಯಿಂದ ಸಾಧಾರಣ ಮಳೆಯಾಗಬಹುದು. ಆದರೆ, ಕರ್ನಾಟಕದ ದಕ್ಷಿಣ ಭಾಗಕ್ಕೆ ಬರುತ್ತಾ ಮಳೆಯ ತೀವ್ರತೆ ಹೆಚ್ಚಾಗಲಿದೆ. ಅದರಲ್ಲೂ ಮೈಸೂರು, ಕೊಡಗು, ಮಂಡ್ಯ, ತುಮಕೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮೂರು ಜಿಲ್ಲೆಗಳಿಗೆ ಹೆಚ್ಚು ಮಳೆ
ಅ. 31ರಿಂದ ನ. 1ರವರೆಗಿನ ಅವಧಿಯಲ್ಲಿ ಒಟ್ಟು ಮೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಬಹುದೆಂದು ಸಂಸ್ಥೆ ತಿಳಿಸಿದೆ. ಅವುಗಳೆಂದರೆ, ಮಂಡ್ಯ, ತುಮಕೂರು, ಕೊಡಗು. ಇವುಗಳಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಭಾರೀ ಮಳೆ ಬೀಳಬಹುದಾಗಿದ್ದು, ತುಮಕೂರು ಹಾಗೂ ಕೊಡಗು ಜಿಲ್ಲೆಗಳ ಅರ್ಧ ಭಾಗಗಳು ಮಳೆಯಲ್ಲಿ ತೊಯ್ಯಲಿವೆ ಎಂದು ನಕ್ಷೆಯಲ್ಲಿ ತಿಳಿಸಲಾಗಿದೆ.
ಇನ್ನೂ ವಿವರಿಸಿ ಹೇಳುವುದಾದರೆ, ಅ. 31ರಿಂದ ನ. 1ರ ಅವಧಿಯಲ್ಲಿ ಮಂಡ್ಯ ಜಿಲ್ಲೆಯು ಸಂಪೂರ್ಣವಾಗಿ ಮಳೆಯಿಂದ ಆವೃತವಾಗಲಿದೆ. ಆ ಜಿಲ್ಲೆಯ ತಾಲೂಕುಗಳಾದ ಮಂಡ್ಯ, ಕೃಷ್ಣರಾಜಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ, ಮದ್ದೂರು ತಾಲೂಕುಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಅಂದರೆ 64.5 ಮಿ.ಮೀನಿಂದ 115.5 ಮಿ.ಮೀನಷ್ಟು ಮಳೆಯಾಗಲಿದೆ ಎಂದು ಹೇಳಲಾಗಿದೆ.