ಎರಡೇ ವಾರದಲ್ಲಿ ಈರುಳ್ಳಿ ಬೆಲೆ 60% ಏರಿಕೆ, ಹಲವೆಡೆ ಕೆಜಿಗೆ 50 ರೂ. ದಾಟಿದ ದರ
1 min readಈರುಳ್ಳಿ ಬೆಲೆ ನಿಯಂತ್ರಣಕ್ಕೆ ತರಲು ರಫ್ತಿನ ಮೇಲೆ ನಿರ್ಬಂಧ, ನಾಫೆಡ್ ಮೂಲಕ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟದಂತಹ ಕೇಂದ್ರ ಸರ್ಕಾರದ ಕ್ರಮಗಳು ಯಾವುದೇ ಫಲ ನೀಡಿದಂತೆ ಕಾಣಿಸುತ್ತಿಲ್ಲ. ಕಳೆದ ಹದಿನೈದು ದಿನಗಳಲ್ಲಿ ಈರುಳ್ಳಿಯ ಸರಾಸರಿ ಸಗಟು ಬೆಲೆ ಶೇಕಡಾ 60ರಷ್ಟು ಏರಿಕೆ ಕಂಡಿದ್ದು, ಕಳೆದ ಒಂದು ವಾರದಲ್ಲೇ ದರ ಶೇಕಡಾ 18ರಷ್ಟು ಹೆಚ್ಚಾಗಿದೆ. ಪರಿಣಾಮ ದೇಶದೆಲ್ಲೆಡೆ ಈರುಳ್ಳಿ ಬೆಲೆ ಒಂದೇ ಸಮನೆ ಏರಿಕೆ ಕಾಣಲಾರಂಭಿಸಿದ್ದು, ಕೆಲವೆಡೆ 50 ರೂ.ಗಳ ಗಡಿಯನ್ನೂ ದಾಟಿದೆ.
ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಮಹಾರಾಷ್ಟ್ರದ ಲಾಸಲ್‌ಗಾಂವ್ ಎಪಿಎಂಸಿಯಲ್ಲಿ ಕಳೆದ ಹದಿನೈದು ದಿನಗಳಲ್ಲಿ ಈರುಳ್ಳಿಯ ಸರಾಸರಿ ಸಗಟು ಬೆಲೆ ಶೇ. 60ರಷ್ಟು ಏರಿಕೆ ಕಂಡಿದೆ. ಕಳೆದ ಒಂದು ವಾರದಲ್ಲೇ ದರ ಶೇ. 18ರಷ್ಟು ಹೆಚ್ಚಾಗಿದೆ. ಪರಿಣಾಮ ದೇಶದೆಲ್ಲೆಡೆ ಈರುಳ್ಳಿ ಬೆಲೆ ಒಂದೇ ಸಮನೆ ಏರಿಕೆ ಕಾಣಲಾರಂಭಿಸಿದೆ.
ಬುಧವಾರದಂದು ದೆಹಲಿಯಲ್ಲಿ ಹಾಗೂ ಮಹಾರಾಷ್ಟ್ರದ ಕೆಲವು ಮಾರುಕಟ್ಟೆಗಳಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿಯ ಗರಿಷ್ಠ ಬೆಲೆ ಕೆಜಿಗೆ 50 ರೂ. ತಲುಪಿದೆ. ಸುಮಾರು ಎರಡು ತಿಂಗಳ ವಿಳಂಬದ ನಂತರ ಹೊಸ ಖಾರಿಫ್ ಬೆಳೆ ಡಿಸೆಂಬರ್‌ಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಅಲ್ಲಿವರೆಗೆ ದರ ಹೆಚ್ಚಿನ ಮಟ್ಟದಲ್ಲೇ ಇರುವ ಸಾಧ್ಯತೆ ಇದೆ.