ಗೃಹಲಕ್ಷ್ಮಿ ನೋಂದಣಿ ಯಶಸ್ವಿ ಮೆಸೇಜ್ ಬಂತು; 2000 ರೂ. ಬಂದಿಲ್ಲ!
1 min readರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗೃಹಲಕ್ಷ್ಮೀ ಯೋಜನೆಯ ನೋಂದಣಿಯಾಗಿದ್ದವರ ಪೈಕಿ 10 ಲಕ್ಷ ಮಹಿಳೆಯರಿಗೆ ಹಣ ವರ್ಗಾವಣೆಯಾಗಿಲ್ಲ. ಈ ಬಗ್ಗೆ ಸರ್ಕಾರ ಹೆಚ್ಚಿನ ನಿಗಾವಹಿಸುತ್ತಿಲ್ಲ. ಇತ್ತ ಆಸೆ ತೋರಿಸಿ ಕೈಕೊಟ್ಟ ಸರ್ಕಾರದ ವಿರುದ್ಧ ಮಹಿಳೆಯರು ಬೇಸರಗೊಂಡಿದ್ದಾರೆ.
ಬೆಂಗಳೂರು:’ ಅರ್ಜಿ ಸಲ್ಲಿಕೆಯಲ್ಲಿ ದೋಷವಿಲ್ಲ. ನಿಮ್ಮ ಹೆಸರನ್ನು ಅನುಮೋದಿಸಲಾಗಿದೆ. ಎರಡು ಸಾವಿರ ರೂ. ಪಡೆಯಲು ಅರ್ಹರಾಗಿದ್ದೀರಿ…’ – ಹೀಗೆ ಸಂದೇಶ ಬಂದು ಎರಡು ತಿಂಗಳಾದರೂ ಗೃಹಲಕ್ಷ್ಮಿ ಹಣ ಮಾತ್ರ ಬಂದಿಲ್ಲ!
ಇನ್ನು ಈ ಬಗ್ಗೆ ವಿಚಾರಣೆ ಮಾಡಿದಾಗ, ಎಲ್ಲವೂ ಸರಿಯಿದ್ದು ತಾಂತ್ರಿಕ ದೋಷಗಳಿಂದ ಬಂದಿಲ್ಲವೆಂದು ಅಥವಾ ಆಧಾರ್ ಜೋಡಣೆಯಾಗಿಲ್ಲಎಂದು ಏಕ ಉತ್ತರ ಬರುತ್ತಿದೆ.
ಎಲ್ಲಾ ದಾಖಲೆಗಳು ಸರಿಯಾಗಿಲ್ಲದಿದ್ದರೆ ದೃಢೀಕರಣದ ಸಂಖ್ಯೆ, ಸಂದೇಶ ಏಕೆ ಬರುತ್ತದೆ? ಕೆಲವು ಗ್ರಾಹಕರಿಗೆ ಹಣ ಕೊಟ್ಟಂತೆ ಕೊಟ್ಟು, ಇತರರ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡುತ್ತಿದೆ ಸರಕಾರ ಎಂದು ಯೋಜನೆ ವಂಚಿತ ಮಹಿಳಾ ವಲಯ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ. ಸುಮಾರು 10 ಲಕ್ಷ ಮಂದಿ ನೋಂದಾಯಿತರಿಗೆ ಹಣ ಹಾಕದೆ ತಾಂತ್ರಿಕ ದೋಷ ಮತ್ತು ದಾಖಲೆಗಳು ಸರಿಯಾಗಿಲ್ಲಎಂದು ಸರಕಾರ ನೆಪ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.