ಹಾಡ ಹಗಲಿನಲ್ಲಿಯೇ ದರೋಡೆ ಮಾಡಿದ ದುಷ್ಕರ್ಮಿಗಳು
1 min read
ಹಾಡ ಹಗಲಿನಲ್ಲಿಯೇ ದರೋಡೆ ಮಾಡಿದ ದುಷ್ಕರ್ಮಿಗಳು
ಗುಂಡು ಹಾರಿಸಿ ೯೩ ಲಕ್ಷ ಹೊತ್ತೊಯ್ದ ಖದೀಮರು
ಘಟನೆಯಿಂದ ಬೆಚ್ಚಿ ಬಿದ್ದ ಬೀದರ್ ಜಿಲ್ಲೆಯ ಜನತೆ
ಬೀದರ್ ನಗರದಲ್ಲಿ ನಿರೀಕ್ಷೆಯೂ ಮಾಡಲಾಗದ ಅಪರಾಧ ಪ್ರಕರಣವೊಂದು ನಡೆದು ಹೋಗಿದೆ. ಹಾಡ ಹಗಲಿನಲ್ಲಿಯೇ ಗುಂಡು ಹಾರಿಸಿ, ಬ್ಯಾಂಕ್‌ಗೆ ತುಂಬಬೇಕಿದ್ದ ನಗದು ದೋಚಿ ಪರಾರಿಯಾಗುವಲ್ಲಿ ದುಷ್ಕರ್ಮಿಗಳು ಯಶಸ್ವಿಯಾಗಿದ್ದು. ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.
ಬೀದರ್ ನಗರದ ಹೃದಯ ಭಾಗ, ಅದರಲ್ಲೂ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ, ಇನ್ನೂ ಹೇಳಬೇಕೆಂದರೆ ಜಿಲ್ಲಾ ನ್ಯಾಯಾಲಯದ ಕೌಂಪೌ0ಡ್‌ಗೆ ಹೊಂದಿಕೊ0ಡೇ ಇರುವ ಎಸ್‌ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣ ತುಂಬುವಾಗ ಬ್ಯಾಂಕಿನ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಮೇಲೆ ಗುಂಡು ಹಾರಿಸಿ, ನಗದು ದೋಚಲಾಗಿದೆ. ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಏಕಾ ಏಕಿ ಗುಂಡು ಹಾರಿಸಿದ್ದು, ಇದರಿಂದ ಒಬ್ಬರು ಮೃತಪಟ್ಟಿದ್ದು, 93 ಲಕ್ಷ ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಬೀದರ್ ನಗರದ ನಿವಾಸಿ 42 ವರ್ಷದ ಗಿರಿ ವೆಂಕಟೇಶ್ ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಬಲಿಯಾಗಿದ್ದು, ಮತ್ತೊಬ್ಬ ಗುಂಡು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಬೀದರ್ ನಗರದ ಶಿವಾಜಿ ಸರ್ಕಲ್ ಬಳಿಯ ಎಸ್‌ಬಿಐ ಮೈನ್ ಬ್ರಾ0ಚ್ ಮುಂದೆಯೇ ಘಟನೆ ನಡೆದಿದೆ. ಘಟನೆ ನಡೆದ ಸ್ಥಳದಿಂದ ಒಂದು ಕಡೆಗೆ ಜಿಲ್ಲಾಧಿಕಾರಿ ಕಚೇರಿ, ಮತ್ತೊಂದು ಕಡೆ ಜಿಲ್ಲಾ ನ್ಯಾಯಾಲಯ ಇದ್ದು, ದುಷ್ಕರ್ಮಿಗಳು ಯಾವುದೇ ಭಯ ಇಲ್ಲದೆ ಹಾಡ ಹಗಲಿನಲ್ಲಿಯೇ ಬೈಕಿನಲ್ಲಿ ಬಂದು, ಗುಂಡು ಹಾರಿಸಿ, ಒಬ್ಬರನ್ನು ಕೊಲೆ ಮಾಡುವ ಜೊತೆಗೆ ಮತ್ತೊಬ್ಬರನ್ನು ಗಾಯಗೊಳಿಸಿ, 93 ಲಕ್ಷ ದೋಚಿ ನಿರಾಯಾಸವಾಗಿ ಪರಾರಿಯಾಗಿದ್ದಾರೆ.
ಎಟಿಎಂಗೆ ಹಣ ತುಂಬುತ್ತಿದ್ದ ಬ್ಯಾಂಕ್ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ, ಆರು ಸುತ್ತು ಗುಂಡು ಹಾರಿಸಿದ ದುಷ್ಕರ್ಮಿಗಳು ಸುಲಭವಾಗಿ ಹಣ ದೋಚಿ ಪರಾರಿಯಾಗಿದ್ದಾರೆ. ಗುಂಡು ಹಾರಿಸಿದ ರಭಸಕ್ಕೆ ಸಿಎಂಎಸ್ ಸಿಬ್ಬಂದಿ ಗಿರಿ ವೆಂಕಟೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಸಿಬ್ಬಂದಿ ಶಿವಾ ಕಾಶಿನಾಥ್ ಗಂಭೀರ ಗಾಯಗೊಂಡಿದ್ದಾರೆ. ಸಿಎಂಎಸ್ ಏಜನ್ಸಿ ವಾಹನದಲ್ಲಿ ತಂದಿದ್ದ ಹಣ ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಅಡಿಷನಲ್ ಎಸ್ಪಿ ಚಂದ್ರಕಾ0ತ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾಂಕ್ ಸಿಸಿ ಟಿವಿ ಪರಿಶೀಲಿಸಲಾಗುತ್ತಿದೆ. ಘಟನೆಯಿಂದ ಬೀದರ್ ಜಿಲ್ಲೆಯ ಪೊಲೀಸ್ ವೈಫಲ್ಯ ಮತ್ತೆ ಸಾಭೀಕಾಗಿದ್ದು, ಪೊಲೀಸ್ ಇಲಾಖೆ ಭಯ ಇದ್ದಿದ್ದರೆ ಹಾಡ ಹಗಲಿನಲ್ಲಿಯೇ ಇಂತಹ ಕೃತ್ಯ ನಡೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.