ಅವಸಾನದತ್ತ ಸಾಗುತ್ತಿದೆಯೇ ರೇಷ್ಮೇ ಕೃಷಿ
1 min read
ಅವಸಾನದತ್ತ ಸಾಗುತ್ತಿದೆಯೇ ರೇಷ್ಮೇ ಕೃಷಿ
ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣದಲ್ಲಿ ಇಳಿಕೆ
ರೀಲರ್‌ಗಳ ಜೊತೆಗೆ ಇತರೆ ಕಾರ್ಮಿಕರೂ ಆತಂಕ
ಪ್ರತಿ ರೈತ 500 ರಿಂದ 1000 ಮೊಟ್ಟೆ ಹುಳು ಮೇಯಿಸುವ ಮೂಲಕ ರೇಷ್ಮೆ ಕ್ರಾಂತಿ ಮಾಡುತ್ತಿದ್ದ ಕಾಲದಲ್ಲಿ ಮಾರುಕಟ್ಟೆಗೆ ಬಂದರೆ, ಜಾಲರಿಗಳು ಸಿಗದೇ ನೆಲದಲ್ಲಿ ಒಂದಷ್ಟು ಜಾಗ ಸಿಕ್ಕಿದರೆ ಸಾಕು, ಗೂಡು ಹಾಕೋಣವೆಂದು ರೈತರು ಹಾತೊರೆಯುತ್ತಿದ್ದರು. ಆದರೆ ಈಗ ಚಿತ್ರಣ ಬದಲಾಗಿದೆ. ಗೂಡು ತುಂಬಿರುತ್ತಿದ್ದ ಜಾಲರಿಗಳು ಖಾಲಿ ಹೊಡೆಯುತ್ತಿವೆ.
ಒಂದು ಕಾಲದಲ್ಲಿ ಇಡೀ ರಾಜ್ಯಕ್ಕೆ ಹಾಲು, ಹಣ್ಣು, ತರಕಾರಿ, ರೇಷ್ಮೆ ಪೂರೈಕೆ ಮಾಡಿ, ಪೋಷಣೆ ಮಾಡುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿ¯್ಲೆಗಳ ರೈತರು, ನೆಚ್ಚಿಕೊಂಡಿದ್ದ ರೇಷ್ಮೆ ಉದ್ಯಮ ತೆರೆಮರೆಗೆ ಸರಿಯುತ್ತಿದ್ದು, ವಾಣಿಜ್ಯ ಬೆಳೆಗಳತ್ತ ಗಮನಹರಿಸುವ ಮೂಲಕ ರೈತರಿಂದಲೇ ಉದ್ಯಮ ನಶಿಸಿಹೋಗುವಂತಾಗಿದೆ. ಕಾಲ ಬದಲಾದಂತೆಲ್ಲಾ ಜನರ ನಿರೀಕ್ಷೆಗೆ ತಕ್ಕಷ್ಟು ಸಂಪಾದನೆಯಿಲ್ಲದ ಕಾರಣ, ಆರ್ಥಿಕವಾಗಿ ಸಬಲತೆ ಕಾಣಬೇಕು ಎಂಬ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆಯಲ್ಲಿ ತೊಡಗಿದ್ದ ರೈತರು, ಇತ್ತೀಚಿಗೆ ದ್ರಾಕ್ಷಿ, ದಾಳಿಂಬೆಯತ್ತ ಗಮನಹರಿಸಿದ ಪರಿಣಾಮ ಹಿಪ್ಪುನೇರಳೆ ತೋಟಗಳು ನಾಶವಾಗಿ, ರೇಷ್ಮೆ ಉದ್ಯಮಕ್ಕೆ ಕಂಟಕ ಎದುರಾಗಿದೆ.
ಸಾವಿರಾರು ಕುಟುಂಬಗಳು ಅವಲಂಬಿತವಾಗಿದ್ದ ರೇಷ್ಮೆ ಉದ್ಯಮ, ಮೂರು ಜಿಲ್ಲೆಗಳ ಬಹುತೇಕ ರೈತರ ಪಾಲಿಗೆ ಆಶಾಕಿರಣವಾಗಿತ್ತು. ಇತ್ತಿಚೆಗೆ ಬದಲಾಗುತ್ತಿರುವ ವಾತಾವರಣದ ಜೊತೆಗೆ, ರೈತರು, ರೇಷ್ಮೆ ಬೆಳೆಯುತ್ತಿದ್ದ ಜಾಗದಲ್ಲಿ ವಾಣಿಜ್ಯ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಬೆಳೆಯಲು ಮುಂದಾಗಿರುವ ಕಾರಣ, ಶತಮಾನದಿಂದ ರೈತರನ್ನು ಕಾಪಾಡಿದ್ದ ರೇಷ್ಮೆ ತೆರೆಮರೆಗೆ ಸರಿಯುತ್ತಿರುವುದು ನೂಲು ಬಿಚ್ಚಣಿಕೆದಾರರು ಹಾಗೂ ಈ ಉದ್ಯಮದಲ್ಲಿ ತೊಡಗಿದ್ದವರ ಬದುಕಿನಲ್ಲಿ ಬಿರುಗಾಳಿ ಬೀಸುವಂತೆ ಮಾಡಿದೆ.
ದೇವನಹಳ್ಳಿ ತಾಲ್ಲೂಕಿನ ವಿಜಯಪುರ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದ್ದ ಗೂಡಿನ ಪ್ರಮಾಣ ದಿಢೀರನೆ ಕುಸಿಯುತ್ತಿದೆ. 200 ಕ್ಕೂ ಹೆಚ್ಚು ಲಾಟುಗಳು ಬರುತ್ತಿದ್ದ ಗೂಡು, ಇಂದು ಕೇವಲ 22 ಲಾಟುಗಳಿಗೆ ಬಂದು ನಿಂತಿದೆ. ವಿಜಯಪುರದಲ್ಲಿ ಸುಮಾರು 350 ಕ್ಕೂ ಹೆಚ್ಚು ಮಂದಿ ನೂಲು ಬಿಚ್ಚಣಿಕೆ ಮಾಡುವ ರೀಲರ್ಸ್ ಇದ್ದಾರೆ. ಮಾರುಕಟ್ಟೆಗೆ ಬರುವ ಗೂಡನ್ನು ನಂಬಿರುವ ರೀಲರ್ಸ್ ಇಂದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೆ.ಜಿ.ಗೂಡು 650 ರೂಪಾಯಿ ದಾಟಿದರೂ ನಿರೀಕ್ಷಿಸಿದಷ್ಟು ಗೂಡು ಮಾರುಕಟ್ಟೆಗೆ ಬರುತ್ತಿಲ್ಲ.
ಮಾರುಕಟ್ಟೆಯಲ್ಲಿ ರೈತರು ತರುವ ಗೂಡಿನ ರಕ್ಷಣೆಗಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ, ಇ-ಹರಾಜು ಪ್ರಕ್ರಿಯೆ ಮೂಲಕ ಹರಾಜು ನಡೆಸಿ, ರೈತರು ಒಪ್ಪಿಕೊಂಡರೆ ಮಾತ್ರ ಬೆಲೆ ನಿಗದಿ ಮಾಡಲಾಗುತ್ತದೆ. ಗೂಡು ಹರಾಜಾಗಿ ತೂಕ ಮಾಡುತ್ತಿದ್ದಂತೆ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆಯಾಗುತ್ತಿದೆ. ಆದರೂ ಬಹಳಷ್ಟು ರೈತರು ಮಾರುಕಟ್ಟೆಗೆ ಗೂಡು ತರಲು ಹಿಂದೇಟು ಹಾಕುತ್ತಿದ್ದಾರೆ.
ಮೋಡ ಮುಸುಕಿದ ವಾತಾವರಣ, ವಾತಾವರಣ ವೈಧರಿತ್ಯ ಹಾಗೂ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ, ರೈತರ ನಿರೀಕ್ಷೆಗೆ ತಕ್ಕಂತೆ ಹಿಪ್ಪುನೇರಳೆ ಸೊಪ್ಪು ಬೆಳೆಯಲು ರೈತರಿಗೆ ಸಾಧ್ಯವಾಗದ ಕಾರಣ, ರೇಷ್ಮೆಗೂಡು ಉತ್ಪಾದನೆ ಕುಂಠಿತವಾಗುತ್ತಿದ್ದು, ಈ ಕಾರಣ ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ ಕಡಿಮೆಯಾಗಿದೆ. ಕೆಲ ರೀಲರ್ಸ್ ಗಳು, ಮಾರುಕಟ್ಟೆಯಲ್ಲಿ ಇ-ಹರಾಜಿನಲ್ಲಿ ಗೂಡು ಖರೀದಿಸುವ ಬದಲು ನೇರವಾಗಿ ರೈತರ ಮನೆಗಳಿಗೆ ಹೋಗಿ ಗೂಡು ಖರೀದಿ ಮಾಡುತ್ತಿರುವ ಕಾರಣದಿಂದಲೂ ಮಾರುಕಟ್ಟೆಗೆ ಗೂಡು ಬರುತ್ತಿಲ್ಲವೆಂದು ಕೆಲವರು ಹೇಳುತ್ತಾರೆ.
ಹೊರಗಡೆ ಗೂಡು ಮಾರಾಟವಾಗುತ್ತಿರುವ ಕಾರಣ, ಸರ್ಕಾರಕ್ಕೆ ಬರಬೇಕಾಗಿರುವ ತೆರಿಗೆ ಹಣಕ್ಕೆ ಪೆಟ್ಟು ಬಿದ್ದಿದ್ದು, ಮಾರುಕಟ್ಟೆಗೆ ಗೂಡು ಬರುವಂತೆ ಅಧಿಕಾರಿಗಳು ಮಾಡಬೇಕು ಎಂದು ರೀಲರ್ಸ್ ಒತ್ತಾಯಿಸಿದ್ದಾರೆ.