ಚಿಕ್ಕಬಳ್ಳಾಪುರದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ
1 min readಚಿಕ್ಕಬಳ್ಳಾಪುರದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ
ನ್ಯಾಯಾಧೀಶರು, ಆರ್‌ಟಿಒ ಸೇರಿ ಹಲವರು ಭಾಗಿ
ತಪ್ಪದೆ ಸಂಚಾರ ನಿಯಮ ಪಾಲಿಸಲು ಸಲಹೆ
ರಸ್ತೆ ಸುರಕ್ಷತೆಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ತಡೆಯುವ ಜೊತೆಗೆ ಅಪಘಾತಗಳಲ್ಲಿ ಸಂಭವಿಸುವ ಸಾವುಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ. ಭವಾನಿ ಅವರು ಹೇಳಿದರು.
ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಮಾತನಾಡಿದ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎನ್.ವಿ. ಭವಾನಿ ಅವರು, ಅಪ್ರಾಪ್ತರು ವಾಹನ ಓಡಿಸಬಾರದು, ಒಂದು ವೇಳೆ ಅಪ್ರಾಪ್ತರು ವಾಹನ ಚಲಾಯಿಸಿದರೆ ಅವರ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಅಲ್ಲದೆ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಆ ಮೂಲಕ ಅಪಘಾತಗಳ್ನು ತಡೆಯಬಹುದಾಗಿದ್ದು, ಬೈಕ್ ಚಲಾಯಿಸುವ ವೇಳೆ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ತಪ್ಪದೇ ಹೆಲ್ಮೆಟ್ ಧರಿಸಬೇಕು. ಅಪಘಾತಗಳಲ್ಲಿ ಮೃತಪಡುವವರು ಹೆಚ್ಚಾಗಿ ತಲೆಗೆ ಪೆಟ್ಟಾಗುವುದರಿಂದಲೇ ಸಾವು ಸಂಭವಿಸುತ್ತಿದೆ. ಹೆಲ್ಮೆಟ್ ಧರಿಸಿದಲ್ಲಿ ತಲೆಗೆ ಗಾಯವಾಗುವುದನ್ನು ತಪ್ಪಿಸಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬ ವಾಹನ ಸವಾರರೂ ತಪ್ಪದೇ ಹೆಲ್ಮೆಟ್ ಧರಿಸಬೇಕು ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ಮಾತನಾಡಿ, ಪ್ರತಿ ವರ್ಷ ಜಿಲ್ಲಾ ರಸ್ತೆ ಸುರಕ್ಷತಾ ಮಾಸಾಚರಣೆ ಆಚರಿಸಲಾಗುತ್ತದೆ. ಆ ಮೂಲಕ ವಾಹನ ಚಲಾವಣೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ರಸ್ತೆ ಸುರಕ್ಷತಾ ಸ್ತಾಹ ನಡೆಸಲಾಗುತ್ತದೆ ಎಂದರು.
ರಸ್ತೆಯಲ್ಲಿ ವಾಹನ ಚಲಾಯಿಸುವಾಗ ತಪ್ಪದೇ ಸುರಕ್ಷತಾ ಕ್ರಮ ಅನುಸರಿಸಬೇಕು, ಪ್ರತಿಯೊಬ್ಬರೂ ತಪ್ಪದೇ ಹೆಲ್ಮೆಟ್ ಧರಿಸಬೇಕು, ವೇಗ ಮಿತಿಯಲ್ಲಿ ವಾಹನ ಚಲಾಯಿಸಬೇಕು, ಕಾರಿನಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಚಾಲಕರು ತಪ್ಪದೇ ಸೀಟ್ ಬೆಲ್ಟ್ ಧರಿಸಬೇಕು. ಇದರಿಂದ ಅಪಘಾತ ಸಂಭವಿಸಿದರೆ ಅಪಾಯ ಕಡಿಮೆ ಆಗಲಿದೆ ಎಂದು ಹೇಳಿದರು.