ಸಾಧಿಸಬೇಕೆಂಬ ಕಿಚ್ಚು ವಿದ್ಯಾರ್ಥಿಗಳಲ್ಲಿ ಇದ್ದರೆ ಬದುಕು ಬಂಗಾರ
1 min readಸಾಧಿಸಬೇಕೆಂಬ ಕಿಚ್ಚು ವಿದ್ಯಾರ್ಥಿಗಳಲ್ಲಿ ಇದ್ದರೆ ಬದುಕು ಬಂಗಾರ
ಇದೇ ಶಾಲೆ ವಿದ್ಯಾರ್ಥಿಯಾಗಿದ್ದ ನಾನು ಇಂದು ಶಾಸಕನಾಗಿದ್ದೇನೆ
ನೀವ್ಯಾಕೆ ಉನ್ನತ ಹುದ್ದೆ ಏರಬಾರದು ಎಂದ ಶಾಸಕ ಸುಬ್ಬಾರೆಡ್ಡಿ
ನಮ್ಮ ತಂದೆ ಕೃಷಿಕನಾದರೆ ನಾನು ಕೃಷಿ ಅಧಿಕಾರಿಯಾಗಬೇಕು, ನರೇಗಾ ಕೂಲಿಯಾಳಾದರೆ ನಾನು ನರೇಗ ಅಧಿಕಾರಿಯಾಗಬೇಕು ಎನ್ನುವ ಕಿಚ್ಚು ಇಂದಿನ ಮಕ್ಕಳಲ್ಲಿ ಇದ್ದಾಗ ಅವರ ಬದುಕನ್ನು ಭವ್ಯವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.
ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗೂಳೂರು ಹೋಬಳಿ ಮಟ್ಟದ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಸರ್ಕಾರಿ ಶಾಲೆಗಳೆಂದರೆ ನಿರ್ಲಕ್ಷದಿಂದ ಕಾಣುವ ಮನಸ್ಥಿತಿ ಬಿಡಿ. ಯಾವುದೇ ಸೌಲಭ್ಯ ಇಲ್ಲದ ವೇಳೆಯೇ ಸರ್ಕಾರಿ ಶಾಲೆಯಲ್ಲಿ ಓದಿ ವಿವಿಧ ಹುದ್ದೇಗಳನ್ನು ಅಲಂಕರಿಸುವ ಮೂಲಕ ಬದುಕು ರೂಪಿಸಿಕೊಂಡಿದ್ದೀವಿ. ಈಗ ನಿಮಗೆ ಎಲ್ಲಾ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅವುಗಳನ್ನು ಬಳಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು. ನಿಮಗಾಗಿ ನಿಮ್ಮ ತಂದೆ-ತಾಯಿಗಳು ಪಡುತ್ತಿರುವ ಕಷ್ಟ ಸದಾ ಸ್ಮರಿಸಿಕೊಳ್ಳಬೇಕು. ಶಿಕ್ಷಣ ನಿರ್ಲಕ್ಷಿಸಿದರೆ ಬದುಕೇ ಅಂಧಕಾರದಲ್ಲಿ ಮುಳುಗುತ್ತದೆ. ಭಯ, ಭಕ್ತಿ, ಗೌರವ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ಪ್ರತಿಯೊಬ್ಬರೂ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಲೇ ಬೇಕು ಎಂಬ ಉದ್ದೇಶದಿಂದ ಇಂತಹ ಮಹತ್ವಾಕಾಂಕ್ಷಿ ಪ್ರೇರಣಾ ಕಾರ್ಯಕ್ರಮ ನನ್ನ ಸ್ವಂತ ಖರ್ಚಿನಿಂದ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾದರೆ ನಿವೃತ್ತ ಶಿಕ್ಷಕರಿಂದ ಪಾಠಗಳನ್ನು ಹೇಳಿಸಿ ಅವರಿಗೆ 3 ತಿಂಗಳ ಸಂಬಳ ನಾನೇ ನೀಡುತ್ತೇನೆ ಎಂದರು. ಪೋಷಕರು 3 ತಿಂಗಳ ಕೃಷಿಬೆಳೆಗಾಗಿ ೧೦೦ ವರ್ಷಗಳ ಮಕ್ಕಳ ಭವಿಷ್ಯದ ಬೆಳೆ ನಿರ್ಲಕ್ಷಿಸಬೇಡಿ. ಮನೆಗಳಲ್ಲಿ ಟಿವಿಗಳನ್ನು ಆಫ್ ಮಾಡಿ, ಮೊಬೈಲ್ ಬಳಸದಿರಿ. ಮಕ್ಕಳ ಶಿಕ್ಷಣದ ಪ್ರಗತಿಯಲ್ಲಿ ಪೋಷಕರ ಪಾತ್ರ ಪ್ರಮುಖ. ಕ್ಷೇತ್ರದ ಎಸ್‌ಸ್‌ಎಲ್‌ಸಿ ಫಲಿತಾಂಶ ಶೇ 100 ರಷ್ಟು ಬಂದರೆ ನಾನು ಶಾಸಕನಾಗಿ ಗೆದ್ದ ಖುಷಿಗಿಂತಲೂ ಹೆಚ್ಚಿನ ಸಂತೋಷವಾಗುತ್ತದೆ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಮನೀಷ ಎಸ್ ಪತ್ರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ವಯಂ ಆತ್ಮವಿಶ್ವಾಸ ವಿದ್ದಾಗ ಮಾತ್ರ ಸ್ವಯಂ ಶಿಸ್ತು ಇರುತ್ತದೆ. ಶೈಕ್ಷಣಿಕ ಜೀವನ ಯಶಸ್ವಿಯಾಗಬೇಕು ಎಂದರೆ ಯೋಜನೆಯನ್ನು ರೂಪಿಸಿಕೊಂಡಿರಬೇಕು ಮತ್ತು ಅದನ್ನು ಪಾಲನೆ ಮಾಡಲೇಬೇಕು. ಶಿಸ್ತುಬದ್ದ ಅಭ್ಯಾಸ ಯಶಸ್ಸಿನ ಹಾದಿಯನ್ನು ಸುಲಭವನ್ನಾಗಿಸುತ್ತದೆ. ಗುರಿಮುಟ್ಟಬೇಕಾದರೆ ಪರಿಶ್ರಮದ ಅಗತ್ಯ ಇದ್ದೇ ಇರುತ್ತದೆ ಎಂದರು. ಈ ಸಂಧರ್ಭದಲ್ಲಿ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಮುನಿ ಕೆಂಪೇಗೌಡ, ಶಿಕ್ಷಣ ಅಧಿಕಾರಿ ಸುಕನ್ಯಾ, ಅರ್. ಹನುಮಂತ ರೆಡ್ಡಿ, ಎಸ್.ಎಸ್. ರಮೇಶ್ ಬಾಬು, ಆರ್. ವೆಂಕಟರಾವಜಿಪ್ಪ, ಸಿ. ವೆಂಕಟೇಶ್, ಶಂಕರ್ ನಾಯ್ಕ್ ಇದ್ದರು.