ಅಂತೂ ಇಂತೂ ಬೀದಿ ನಾಯಿಗಳ ಕಾಟ ತಡೆಗೆ ಮುಂದಾದ ನಗರಸಭೆ
1 min readಅಂತೂ ಇಂತೂ ಬೀದಿ ನಾಯಿಗಳ ಕಾಟ ತಡೆಗೆ ಮುಂದಾದ ನಗರಸಭೆ
ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಚಾಲನೆ
20 ಲಕ್ಷಕ್ಕೆ ಟೆಂಡರ್ 1,400 ನಾಯಿಗಳಿಗೆ ಚಿಕಿತ್ಸೆಗೆ ಒಪ್ಪಿಗೆ
4 ತಿಂಗಳಲ್ಲಿ ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಸಾಧ್ಯತೆ
ಬೀದಿ ನಾಯಿಗಳು, ಕಾಡು ಪ್ರಾಣಿಗಳಿಗಿಂತ ಹೆಚ್ಚು ಆತಂಕ ಉಂಟು ಮಾಡುತ್ತಿರುವ ಗ್ರಾಮಸಿಂಹಗಳಾಗಿ ಇತ್ತೀಚಿನ ದಿನಗಳಲ್ಲಿ ಕುಖ್ಯಾತಿ ಪಡೆದಿವೆ. ಈ ನಾಯಿಗಳ ಕಡಿವಾಣ ಹೇಗೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇರಲಿಲ್ಲ. ಆದರೆ ಇದೀಗ ಚಿಕ್ಕಬಳ್ಳಾಪುರ ನಗರಸಭೆ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲು ಮುಂದಾಗಿದ್ದು, ಬೀದಿ ನಾಯಿಗಳ ಕಾಟಕ್ಕೆ ಸ್ವಲ್ಪವಾದರೂ ಕಡಿವಾಣ ಬೀಳುವ ನಿರೀಕ್ಷೆ ಇದೆ.
ಹೌದು, ಮಕ್ಕಳು ಮತ್ತು ವೃತದ್ಧರು ಹೊರ ಬರುವಂತೆಯೇ ಇರಲಿಲ್ಲ. ಬಂದರೆ ಯಾವ ಕಡೆಯಿಂದ ಬೀದಿ ನಾಯಿಗಳು ದಾಳಿ ಮಾಡುತ್ತವೆಯೋ ಎಂಬ ಆತಂಕ. ಹಲವು ಕಡೆಗಳಲ್ಲಿ ಬೀದಿ ನಾಯಿಗಳು ದಾಳಿ ಮಾಡಿ, ಮಕ್ಕಳನ್ನು, ವೃದ್ಧರನ್ನು ಕಚ್ಚಿ ಗಾಯಗೊಳಿಸಿದ ನಿದರ್ಶನಗಳೂ ಇವೆ. ಈ ನಾಯಿಗಳ ಕಾಟಕ್ಕೆ ಕಡಿವಾಣ ಹಾಕುವಂತೆ ನಾಗರಿಕರು ಹಲವು ಬಾರಿ ನಗರಸಭೆಗೆ ಮನವಿ ಮಾಡಿದರೂ ಉಪಯೋಗವಾಗಿರಲಿಲ್ಲ. ಆದರೆ ಇದೀಗ ನಗರಸಭೆಯಲ್ಲಿ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಲು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದ 31 ವಾರ್ಡಿನ ಎಲ್ಲ ಬಡಾವಣೆಗಳಲ್ಲಿಯೂ ಬೀದಿ ನಾಯಿಗಳ ಕಾಟ ಮಿತಿ ಮೀರಿತ್ತು. ಈ ಬೀದಿ ನಾಯಿಗಳ ಕಾಟ ಹೆಚ್ಚಾಗಲು ಪ್ರಮುಖ ಕಾರಣ ಮಾಂಸದ ಅಂಗಡಿಗಳು ಮತ್ತು ಬೀದಿ ಬದಿ ಕಬಾಬ್ ಮಾರಾಟ ಮಾಡುವ ತಳ್ಳುವ ಗಾಡಿಗಳೇ ಎಂಬ ಆರೋಪಗಳು ಮೊದಲಿನಿಂದಲೂ ಇದೆ. ಇದೀಗ ನಗರಸಭೆ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹವಾದರೂ, ಬೀದಿ ಬದಿ ಕಬಾಬ್ ಮಾರಾಟ ಮಾಡುವ ಗಾಡಿಗಳು ಮತ್ತು ಯಾವುದೇ ಪರವಾನಿಗೆ ಪಡೆಯದೆ ಆರಂಭಿಸಿರುವ ಮಾಂಸದ ಅಂಗಡಿಗಳಿಗೆ ಕಡಿವಾಣ ಹಾಕಲು ನಗರಸಭೆ ಇನ್ನೂ ಮುಂದಾಗಿಲ್ಲ.
ಮಾ0ಸದ ಅಂಗಡಿಗಳು ಮತ್ತು ಕಬಾಬ್ ಅಂಗಡಿಗಳ ಬಳಿ ಮಾಂಸದ ತ್ಯಾಜ್ಯವನ್ನು ತಿಂದು ಅಭ್ಯಾಸ ಆಗಿರುವ ಬೀದಿನಾಯಿಗಳು ಜನರ ಮೇಲೆ ದಾಳಿ ಮಾಡಲು ಕಾರಣವಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ. ಈ ಅಂಗಡಿನಗಳವರು ಮಾಂಸದ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡದೆ, ಬೀದಿ ಬದಿ ಕಾದು ಕುಳಿತಿರುವ ನಾಯಿಗಳಿಗೆ ಹಾಕುತ್ತಿರುವ ಪರಿಣಾಮ ಅವು ಜನರ ಮೇಲೆ ದಾಳಿ ಮಾಡಲು ಕಾರಣವಾಗಿದೆ ಎಂಬ ತೀವ್ರ ಆರೋಪಗಳಿವೆ. ಹಾಗಾಗಿ ಮೊದಲು ಕಬಾಬ್ ಅಂಗಡಿಗಳು ಮತ್ತು ಮಾಂಸದ ಅಂಗಡಿಗಳವರು ಮಾಂಸದ ತ್ಯಾಜ್ಯ ಸರಿಯಾದ ನಿರ್ವಹಣೆ ಮಾಡುವಂತೆ ನಗರಸಭೆ ಸೂಚನೆ ನೀಡಬೇಕಿದೆ.
ಮಾಂಸದ ಅಂಗಡಿಗಳವರಿಗೆ ನೋಟಿಸ್ ನೀಡಿ, ಆ ನಂತರವೂ ಸರಿಯಾಗಿ ನಿರ್ವಹಣೆ ಮಾಡದ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬಳಿಕ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿದ್ದರೆ ಅದಕ್ಕೆ ಉಪಯೋಗವಿರುತ್ತಿತ್ತು. ಆದರೆ ಮಾಂಸದ ಅಂಗಡಿಗಳು ಮತ್ತು ಕಬಾಬ್ ಅಂಗಡಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸದ ನಗರಸಭೆ ಇದೀಗ ಬೀದಿ ನಾಯಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ನಂತರವಾದರೂ ಮಾಂಸದ ಅಂಗಡಿಗಳು ಮತ್ತು ಕಬಾಬ್ ಅಂಗಡಿಗಳ ವಿರುದ್ಧ ಕ್ರಮಕ್ಕೆ ನಗರಸಭೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನು ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭೆ ಅಧ್ಯಕ್ಷ ಗಜೇಂದ್ರ, ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತçಚಿಕಿತ್ಸೆಗೆ ಚಾಲನೆ ನೀಡಲಾಗಿದೆ. ಬೈಕ್ ಸೇರಿದಂತೆ ಪಾದಚಾರಿಗಳನ್ನು ಅಟ್ಟಾಡಿಸುತ್ತಿದ್ದ ಆರೋಪಗಳಿತ್ತು, ನಗರದಲ್ಲಿ ೫ ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿವೆ ಎಂಬ ಅಂಕಿ ಅಂಶ ಲಭ್ಯವಾಗಿದೆ. ಇದರಲ್ಲಿ 2 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸಲು ಟೆಂಡರ್ ನೀಡಲಾಗಿದೆ ಎಂದರು.
ನಗರದ ಸಿಟಿಜನ್ ಕ್ಲಬ್‌ನಲ್ಲಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸಾ ಕೇಂದ್ರವಾಗಿ ಮಾಡಿಕೊಂಇದ್ದು, ಇಂದು 1ನೇ ವಾರ್ಡಿನ ಸುಮಾರು 20ಕ್ಕೂ ಹೆಚ್ಚು ನಾಯಿಗಳನ್ನು ಹಿಡಿದು ತರಲಾಗಿದೆ, ಇಂದಿನಿ0ದಲೇ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಯಲಿದ್ದು, ಚಿಕಿತ್ಸೆ ಮಾಡಿದ ನಾಯಿಗಳನ್ನು ಮೂರು ದಿನಗಳ ಕಾಲ ಹಾರೈಕೆ ಮಾಡಿ, ನಂತರ ಅವುಗಳನ್ನು ಹಿಡಿದ ಜಾಗದಲ್ಲಿಯೇ ಬಿಡಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಬೀದಿನಾಯಿಗಳು ಮಕ್ಕಳು ಮತ್ತು ವೃದ್ಧರ ಮೇಲೆ ದಾಳಿ ನಡೆಸಿ, ಕಚ್ಚುತ್ತಿರುವ ಬಗ್ಗೆ ನಗರಸಭೆಗೆ ದೂರುಗಳು ಬಂದಿವೆ. ಈ ಹಿಂದೆ 8 ಬಾರಿ ಟೆಂಡರ್ ಕರೆಯಲಾಗಿದೆ, ಆದರೂ ಯಾರೂ ಬಾಗಿಯಾಗಿರಲಿಲ್ಲ. ಈ ಹಿಂದೆ ಇದೇ ಸಂಸ್ಥೆಯವರು ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸಿದ್ದ ಕಾರಣ ಟೆಂಡರ್ ಮೂಲಕ ಮತ್ತೆ ಅದೇ ಸಂಸ್ಥೆಗೆ ನೀಡಲಾಗಿದೆ. ನಗರದಲ್ಲಿರುವ 1,400 ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲು ಸಂಸ್ಥೆ ಒಪ್ಪಿಕೊಂಡಿದೆ ಎಂದು ಹೇಳಿದರು.
ಈ ಸಂತಾನ ಶಕ್ತಿ ಹರಣ ಚಿಕಿತ್ಸೆ ಸುಮಾರು 4 ತಿಂಗಳು ಕಾಲ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ನಗರಸಭೆಯಿಂದ 20 ಲಕ್ಷಕ್ಕೆ ಟೆಂಡರ್ ನೀಡಲಾಗಿದೆ. ಈ ಹಿಂದೆ 100 ನಾಯಿ ತಂದು 20 ನಾಯಿಗಳಿಗೆ ಚಿಕಿತ್ಸೆ ಮಾಡಿ, ಉಳಿದವುಗಳನ್ನು ಹಾಗೆಯೇ ಬಿಡಲಾಗುತ್ತಿದೆ ಎಂಬ ಆರೋಪಗಳಿದ್ದವು. ಈ ಬಾರಿ ಹಾಗೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಎಷ್ಟು ನಾಯಿಗಳನ್ನು ತಂದರೂ ಅಷ್ಟೂ ನಾಯಿಗಳಿಗೆ ಚಿಕಿತ್ಸೆ ನಡೆಸಲಾಗುವುದು ಎಂದರು.
ಕಾರ್ಯಕ್ರಮವನ್ನು ನಗರದ 1ನೇ ವಾರ್ಡಿನಿಂದಲೇ ಆರಂಭಿಸಲಾಗಿದ್ದು, ಹಲವು ನಾಯಿಗಳನ್ನು ಸೆರೆ ಹಿಡಿದು ತರಲಾಗಿದೆ. ಚಿಕಿತ್ಸೆ ನಂತರ ಮೂರು ದಿನಗಳ ಕಾಲ ಹಾರೈಕೆ ಮಾಡಿ ಹಿಡಿದ ಜಾಗದಲ್ಲಿಯೇ ಬಿಡಲಾಗುವುದು. ಆ ಮೂಲಕ ನಗರದಲ್ಲಿರುವ ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ನಾಗರಾಜ್ ಹೇಳಿದರು.