ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ
1 min readಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ
ಕೂಡಲೇ ದೇಶದ ಜನತೆಯ ಕ್ಷಮೆ ಯಾಚಿಸಲು ಆಗ್ರಹ
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅವಮಾನಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಸಂಪುಟದಿ0ದ ಗೃಹಸಚಿವ ಅಮಿತ್ ಶಾ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಮಹಾನಾಯಕ ಅಂಬೇಡ್ಕರ್ ಸೇನೆ ಹಾಗೂ ದಲಿತ ಸಂಘಟನೆಗಳ ಮುಖಂಡರು ಇಂದು ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಿಂದ ರ‍್ಯಾಲಿ ಮೂಲಕ ಶಿಡ್ಲಘಟ್ಟ ವೃತ್ತದಲ್ಲಿ ಜಮಾಯಿಸಿದ ಎರಡೂ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಕೆಲ ನಿಮಿಷಗಳ ವ್ಯತ್ಯಾಸದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಪ್ರತಿಭಟನೆ ನಡೆಸಿದ ಮಹಾನಾಯಕ ಅಂಬೇಡ್ಕರ್ ಸೇನೆ ಮುಖಂಡರು, ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ, ಕೆಲ ಕಾಲ ರಸ್ತೆ ತಡೆ ನಡೆಸಿದರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ, ಡಿ.18ರಂದು ರಾಜ್ಯ ಸಭೆಯಲ್ಲಿ ಅಮಿತ್ ಶಾ ನೀಡಿರುವ ಹೇಳಿಕೆ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಸಂವಿಧಾನದ ಮೇಲೆ ಗೌರವ ಮತ್ತು ನಂಬಿಕೆಯಿಲ್ಲ ಎಂಬುದರ ಸಾಕ್ಷಿಯಾಗಿವೆ ಎಂದರು. ಬಿಜೆಪಿ ಸದಾ ಸಂವಿಧಾನದ ವಿರುದ್ಧವಾಗಿರುವ ಪಕ್ಷ.ಶಾ ಅವರ ಹೇಳಿಕೆಗಳು ಸಂವಿಧಾನವನ್ನು ವಿರೂಪಗೊಳಿಸುವ ಬಿಜೆಪಿಯ ಹಿಡೆನ್ ಅಜೆಂಡಾ ಎಂಬುದನ್ನು ಬಹಿರಂಗಪಡಿಸಿವೆ ಎಂದರು.
ಹಳ್ಳಿಮಕ್ಕಳ ಸಂಘದ ಉಪಾಧ್ಯಕ್ಷ ವೆಂಕಟರೋಣಪ್ಪ ಮಾತನಾಡಿ, ಅಮಿತ್ ಶಾ ಅವರ ಸೊಕ್ಕು ಮುರಿಯುವ ಶಕ್ತಿ ಈ ದೇಶದ ಮೂಲನಿವಾಸಿಗಳಾದ ಅಂಬೇಡ್ಕರ್ ಸಂತಾನಕ್ಕೆ ಇದೆ ಎಂದು ತೋರಿಸುವ ಕಾಲ ಬಂದಿದೆ. ಅಧಿಕಾರ ಯಾವಾಗಲೂ ಶಾಶ್ವತ ಅಲ್ಲ, ಇದ್ದಾಗ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಂಡವರಿಗೆ ಮಾತ್ರ ಸಾರ್ವಜನಿಕ ಬದುಕಿನಲ್ಲಿ ದೀರ್ಘಕಾಲ ಇರಲು ಸಾಧ್ಯ ಎಂಬುದನ್ನು ಮೋದಿ ಅರ್ಥ ಮಾಡಿಕೊಂಡು ಶಾ ಅವರನ್ನು ಸಂಪುಟದಿಅದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರೊ.ಕೃಷ್ಣಪ್ಪ ಬಣದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್ ಮಾತನಾಡಿ, ಅಂಬೇಡ್ಕರ್ ಅವರ ಬಗ್ಗೆ ತುಚ್ಛವಾಗಿ ಮಾತನಾಡಿರುವ ಅಮಿತ್ ಶಾ ಅವರು ಈ ಘಟನೆಯನ್ನು ಬೆಳೆಯಲು ಬಿಡದೆ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು, ಬಿಜೆಪಿ ಸರಕಾರವು ದಲಿತರು ಮತ್ತು ಇತರೆ ವಂಚಿತ ಸಮುದಾಯಗಳನ್ನು ಅಪಮಾನಿಸುತ್ತಿದೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಯಾವುದೇ ಪಕ್ಷವಿರಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದರೆ ಅದನ್ನು ಸಹಿಸಿ ಕೂರುವ ಜಾಯಮಾನ ದಸಂಸ ಮುಖಂಡರು ಕಾರ್ಯಕರ್ತರಿಗೆ ಇಲ್ಲ ಎಂದರು. ಈ ವೇಳೆ ವೆಂಕಟರಮಣಪ್ಪ, ತಿಮ್ಮರಾಜು, ಎಸ್.ಬಿ. ಮಂಜುನಾಥ್, ಜಿ. ಮೂರ್ತಿ, ಸುರೇಶ್, ಸುಜಾತಮ್ಮ ಇದ್ದರು.