ವಿಶಾಲ ರಸ್ತೆ ಇದ್ದರೂ ಪಾದಚಾರಿ ಮಾರ್ಗವೇ ಇಲ್ಲ
1 min readವಿಶಾಲ ರಸ್ತೆ ಇದ್ದರೂ ಪಾದಚಾರಿ ಮಾರ್ಗವೇ ಇಲ್ಲ
ರಸ್ತೆಯ ಒಂದು ಕಡೆ ಇರುವ ಪಾದಚಾರಿ ಮಾರ್ಗವೂ ಒತ್ತುವರಿ
ಫುಟ್ಪಾತ್ ಇಲ್ಲದೆ ನಡು ರಸ್ತೆಯಲ್ಲಿಯೇ ಪಾದಚಾರಿಗಳ ಸಂಚಾರ
ಬಾಗೇಪಲ್ಲಿ ಡಿವಿಜಿ ರಸ್ತೆಯ ಇಕ್ಕೆಳಗಳಲ್ಲಿ ಪಾದಾಚಾರಿ ಮಾರ್ಗವಿಲ್ಲದೆ ನಾಗರಿಕರು ನಡು ರಸ್ತೆಯಲ್ಲಿ ಓಡಾಡುವಂತಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗುವ ಜೊತೆಗೆ ಅಪಘಾತಗಳಿಗೆ ಕಾರಣವಾಗುತ್ತಿದ್ದು, ಸಂಬ0ಧಪಟ್ಟವರು ಇಥ್ತ ಗಮನಹರಿಸಬೇಕಿದೆ.
ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿಯವರ ಅವಧಿಯಲ್ಲಿ ಬಾಗೇಪಲ್ಲಿ ಪಟ್ಟಣದಲ್ಲಿ ವಾಹನ ದಟ್ಟಣೆ ಮತ್ತು ಜನದಟ್ಟಣೆಯಿಂದ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಒಂದೂವರೆ ದಶಕದ ಹಿಂದೆ ರಸ್ತೆ ಅಗಲೀಕರಣ ಮಾಡಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗೆ ಜನದಟ್ಟಣೆ ಮತ್ತಷ್ಟು ಹೆಚ್ಚಾಗಿದ್ದು, ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಪಾದಾಚಾರಿಗಳು ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಜೂನಿಯರ್ ಕಾಲೇಜ್, ಪುರಸಭೆ ಕಚೇರಿ ಕಡೆಗಿರುವ ರಸ್ತೆ ಬದಿ ಪಾದಾಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ ಆ ಮಾರ್ಗ ಬಹುತೇಕ ಅಂಗಡಿಗಳ ಮಾಲಿಕರಿಂದ ಒತ್ತುವರಿಯಾಗಿದ್ದು, ತಮ್ಮ ಸರಕು ಸರಂಜಾಮ ಇಡುವ ವೈಯಕ್ತಿಕ ಜಾಗದಂತಾಗಿದೆ. ಇದರಿಂದಾಗಿ ಯಾವೊಬ್ಬರೂ ಪಾದಾಚಾರಿ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಕೆಲ ಅಂಗಡಿಗಳ ಮಾಲಿಕರು ಪಾದಾಚಾರಿ ಮಾರ್ಗದ ಮೇಲೆ ಶೀಟ್ಸ್ ಹಾಕಿಕೊಂಡು ರಸ್ತೆಯ ಮುಂಭಾಗಕ್ಕೆ ಬಂದಿದ್ದು, ವಾಹನ ನಿಲುಗಡೆಗೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯ ಮತ್ತೊಂದು ಕಡೆ ತಾಲೂಕು ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಚೇರಿ, ಕೆಎಸ್ಆರ್ಟಿ ಬಸ್ ನಿಲ್ದಾಣ, ಪಶು ಆಸ್ಪತ್ರೆ, ಖಾಸಗಿ ಶಾಲಾ ಕಾಲೇಜುಗಳು ಸೇರಿ ಹಲವು ದೇವಾಲಯಗಳೂ ಇವೆ. ಆದರೆ ಇಂತಹ ಜನಸಂಪರ್ಕ ಕೇಂದ್ರಗಳಿಗೆ ನಾಗರಿಕರು ತಲುಪಲು ಪಾದಾಚಾರಿ ಮಾರ್ಗವೇ ಇಲ್ಲವಾಗಿದೆ. ಇದರಿಂದಾಗಿ ರಸ್ತೆಯಲ್ಲೆ ಅಡ್ಡಾದಿಡ್ಡಿ ಓಡಾಡುವಂತಾಗಿದೆ. ಇದರಿಂದಾಗಿ ವಾಹನ ಸವಾರರು ಕೊಂಚ ಯಾಮಾರಿದರೂ ಯಾರಿಗಾದರೂ ಡಿಕ್ಕಿ ಹೊಡೆಯುವ ಆತಂಕ ಎದುರಿಸಬೇಕಾಗಿದೆ.
ವಾಹನ ಸವಾರರಿಗೆ ನಿಗಧಿತ ಪಾರ್ಕಿಂಗ್ ಸ್ಥಳವಿಲ್ಲದೇ ಕೆಲವರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ, ಮತ್ತೆ ಕೆಲವರು ರಸ್ತೆಯ ಇಕ್ಕೆಳಗಳಲ್ಲಿ ನಿತ್ಯವೂ ಪಟ್ಟಣಕ್ಕೆ ಬರುವ ದ್ವಿಚಕ್ರ ವಾಹನ ಸವಾರರು ತಮ್ಮ ಕೆಲಸಗಳು ಮುಗಿಯುವವರೆಗೂ ನಿಲ್ಲಿಸಿರುತ್ತಾರೆ. ಇದರಿಂದಾಗಿ ಪಾದಾಚಾರಿಗಳು ಮತ್ತಷ್ಟು ನಡುರಸ್ತೆಯಲ್ಲಿ ಓಡಾಡುವಂತಾಗಿದೆ. ಶಾಲಾ-ಕಾಲೇಜುಗಳು ಆರಂಭಕ್ಕೂ ಮುನ್ನ ಮತ್ತು ಮುಕ್ತಾಯದ ನಂತರ ಕೆಲ ಕಾಲ ವಿದ್ಯಾರ್ಥಿಗಳು ರಸ್ತೆಯ ಇಕ್ಕೆಳಗಳಲ್ಲಿ ಜಾತ್ರೆಯಂತೆ ಬರುತ್ತಿರುತ್ತಾರೆ. ಅವರು ರಸ್ತೆ ಬದಿ ಸುರಕ್ಷಿತವಾಗಿ ಮನೆ ತಲುಪಲು ಪಾದಾಚಾರಿ ಮಾರ್ಗವಿಲ್ಲದೆ ನಡು ರಸ್ತೆಯಲ್ಲೆ ಓಡಾಡುವಂತಾಗಿದೆ.
ವಾಹನಗಳು ಮತ್ತು ಪಾದಚಾರಿಗಳು ನಡು ರಸ್ತೆಯಲ್ಲಿಯೇ ನಡೆಯುವುದು ಸಾಮಾನ್ಯವಾಗಿದ್ದು, ಇದರಿಂದ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಈ ಸಂಬ0ಧ ಹಲವು ಬಾರಿ ಸಂಬ0ಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಹಾಗಾಗಿ ಸಂಬ0ಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ಇಥ್ತ ಗಮನ ಹರಿಸಿ, ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗ ನಿರ್ಮಿಸುವ ಜೊತೆಗೆ, ಪಾದಚಾರಿ ಮಾರ್ಗ ಆಕ್ರಮಿಸಿಕೊಂಡಿರುವ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನು ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲ್ಲೂಕು ಉಪಾಧ್ಯಕ್ಷ ಜಬೀವುಲ್ಲಾ ಮಾತನಾಡಿ, ಪಟ್ಟಣದ ಡಿವಿಜಿ ಮುಖ್ಯ ರಸ್ತೆ ವಿಶಾಲವಾಗಿದ್ದು, ರಸ್ತೆ ಮಧ್ಯಭಾಗದಿಂದ ಎರಡೂ ಕಡೆ ೫೦ ಅಡಿ ರಸ್ತೆ ಇದೆ. ಪಾದಾಚಾರಿ ಮಾರ್ಗದಲ್ಲಿ ಜನರು ಸಂಚರಿಸಲು ತೊಂದರೆಯಾಗುತ್ತಿದೆ. ಶಾಲಾ ಕಾಲೇಜುಗಳು ಬಿಟ್ಟರೆ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಅಧಿಕಾರಿಗಳು ಎಚ್ಚೆತ್ತು ಪುಟ್ ಪಾತ್ ಅಂಗಡಿಗಳನ್ನು ತೆರವುಗೊಳಿಸಿ ಪಾದಾಚಾರಿಗಳಿಗೆ ಅನುವು ಮಾಡಿಕೊಡಬೇಕಾಗಿ ಮನವಿ ಮಾಡಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಘಟನೆಯಿ0ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.