ಅಭಯಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ
1 min readಅಭಯಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ
ಚಿಕ್ಕಬಳ್ಳಾಪುರ ಬೈಪಾಸ್ ರಸ್ತೆಯಲ್ಲಿರುವ ಹನುಮ ದೇವಾಲಯ
9ನೇ ವಾರ್ಷಿಕೋತ್ಸವ, ಲಕ್ಷ ದೀಪೋತ್ಸವ ಅದ್ಧೂರಿ
ಹನುಮ ರಾಮಭಕ್ತ, ರಾಮಾಯಣದಲ್ಲಿ ಪ್ರತ್ಯೇಕ ಸ್ಥಾನ ಪಡೆಯುವ ಜೊತೆಗೆ ಚಿರಂಜೀವಿಯಾಗಿ ಪ್ರಖ್ಯಾತಿ ಪಡೆದಿರುವ ಆಂಜನೇಯನ ಹುಟ್ಟುಹಬ್ಬದಂದು ಜಿಲ್ಲೆಯಾದ್ಯಂತ ಇರುವ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ಆಯೋಜಿಸಲಾಗಿತ್ತು.
ಚಿಕ್ಕಬಳ್ಳಾಪುರ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಅಭಯಾಂಜನೇಯಸ್ವಾಮಿ ದೇವಾಲಯದಲ್ಲಿ ಅದ್ಧೂರಿಯಾಗಿ 9ನೇ ವಾರ್ಷಿಕೋತ್ಸವ ಮತ್ತು ಲಕ್ಷದೀಪೋತ್ಸವ ಕಾರ್ಯಕ್ರಮಗಳು ನೆರವೇರಿದವು. ಎಚ್‌ಎಸ್ ಗಾರ್ಡನ್ ಪ್ರವೇಶ ದ್ವಾರದಲ್ಲಿಯೇ ಇರುವ ಅಭಯಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಿ, ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.
ಈ ಆಂಜನೇಯ ದೇವಾಲಯಕ್ಕೆ 9ನೇ ವಾರ್ಷಿಕೋತ್ಸವ ಸಂಭ್ರಮವೂ ಇದೇ ಸಂದರ್ಭದಲ್ಲಿ ನೆರವೇರಿದ್ದು, ಆಂಜನೇಯಸ್ವಾಮಿಗೆ ಪ್ರಿಯವಾದ ವೀಳ್ಯದೆಲೆಯಲ್ಲಿ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಲಕ್ಷ ದೀಪೋತ್ಸವ ಶುಕ್ರವಾರ ರಾತ್ರಿ ವಿಜೃಂಭಣೆಯಿ0ದ ನೆರವೇರಿತು. ದೇವಾಲಯಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ಅನ್ನದಾನ ಸೇವೆಯನ್ನೂ ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು.