ಮೂಲ ಸೌಕರ್ಯ ವಂಚಿತ ಚಲ್ದಿಗಾನಹಳ್ಳಿ ಗ್ರಾಪಂ
1 min readಮೂಲ ಸೌಕರ್ಯ ವಂಚಿತ ಚಲ್ದಿಗಾನಹಳ್ಳಿ ಗ್ರಾಪಂ
ಚರ0ಡಿ, ರಸ್ತೆ ಇಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮ
ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಡೋಂಟ್‌ಕೇರ್
ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀನಿವಾಸಪುರ ತಾಲೂಕಿನಲ್ಲಿ ಗ್ರಾಮೀಣ ಅಭಿವೃದ್ಧಿಗೂ ಗ್ರಹಣ ಹಿಡಿದಿದೆ. ಹಳ್ಳಿಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಜನ ಪರದಾಡುತ್ತಿದ್ದು, ಇದಕ್ಕೆ ಉತ್ತಮ ನಿದರ್ಶನ ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ.
ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ ಮೂಲ ಸೌಕರ್ಯಗಳಿಂದ ವಂಚಿತವಾದ ಗ್ರಾಮ, ಗ್ರಾಮದಲ್ಲಿ ವ್ಯವಸ್ಥಿತವಾದ ಚರಂಡಿಗಳಿಲ್ಲ, ರಸ್ತೆ ಗಳಿಲ್ಲ. ಇರುವ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಹೆಬ್ಬಟ್ಟ ಗ್ರಾಮದ ಅವ್ಯವಸ್ಥೆ ಇದಾಗಿದೆ.
ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ, ಕೊಳಚೆ ನೀರಿನಲ್ಲಿ ಸಾರ್ವಜನಿಕರು, ಮಕ್ಕಳು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಗ್ರಾಪಂ ಧಿಕಾರಿಗಳಿಗೆ ಮನವಿ ಮಾಡಿದರು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿ ಪಿಡಿಒ ಗ್ರಾಮಗಳ ಕಡೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಸಾಂಕ್ರಾಮಿಕ ರೋಗಗಳು ಹರಡುವ ಆತಂಕದಲ್ಲಿ ಜನರು ಬದುಕುವಂತಾಗಿದ್ದು, ಮಕ್ಕಳನ್ನು ಆಟವಾಡಲು ಮನೆಯಿಂದ ಹೊರಗೆ ಬಿಡದ ಸ್ಥಿತಿ ನಿರ್ಮಾಣವಾಗಿದೆ. ಜಾಣ ಕುರುಡರಂತೆ ವರ್ತನೆ ಮಾಡುತ್ತಿರುವ ಪಂಚಾಯತಿ ಅಧಿಕಾರಿಗಳು, ಲಕ್ಷಾಂತರ ರೂಪಾಯಿ ಸ್ವಚ್ಛ ಭಾರತ ಮಿಷನ್ ಅಡಿ ಬರುವ ಹಣ ಏನಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಿಲ್ಲ. ಸಂಬ0ಧಪಟ್ಟ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮದ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.