ವೆಂಕಟರಮಣಸ್ವಾಮಿ ದೇಗುಲಕ್ಕೆ ಯದುಗಿರಿ ಪೀಠಾಧಿಪತಿ ಭೇಟಿ
1 min readವೆಂಕಟರಮಣಸ್ವಾಮಿ ದೇಗುಲಕ್ಕೆ ಯದುಗಿರಿ ಪೀಠಾಧಿಪತಿ ಭೇಟಿ
ತಲಕಾಯಲಬೆಟ್ಟದಲ್ಲಿ ಪೀಠಾಧಿಪಿತಿ ಆಶೀರ್ವಚನ
ಯದುಗಿರಿ ಯತಿರಾಜ ನಾರಾಯಣ ರಾಮಾನುಜಾ ಸ್ವಾಮಿ
1 ಸಾವಿರ ವರ್ಷಗಳ ಹಿಂದೆಯೇ ಸಮಾಜದ ಅಸಮಾನತೆ, ತಾರತಮ್ಯ, ಮೂಡ ನಂಬಿಕೆಗಳ ವಿರುದ್ದ ಧ್ವನಿ ಎತ್ತಿದವರು ಜಗದಾಚಾರ್ಯ ಶ್ರೀ ರಾಮಾನುಜಾಚಾರ್ಯರು ಎಂದು ಮೇಲುಕೋಟೆಯ ಯದುಗಿರಿ ಪೀಠಾಧಿಪತಿ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿ ಹೇಳಿದರು.
ಶಿಡ್ಲಘಟ್ಟ ತಾಲೂಕಿನ ಪಾಪಾಗ್ನಿ ನದಿ ದಡದಲ್ಲಿ ನೆಲೆಸಿರುವ ತಲಕಾಯಲಬೆಟ್ಟದ ಶ್ರೀಭೂನೀಳಾ ಸಮೇತ ಶ್ರೀವೆಂಕಟರಮಣಸ್ವಾಮಿ ದೇವಾಲಯಕ್ಕೆ ಮೇಲುಕೋಟೆಯ ಯದುಗಿರಿ ಪೀಠಾಧಿಪತಿ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿ ಭೇಟಿ ನೀಡಿದ್ದರು. ಶ್ರೀಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು.
ಜಗದಾಚಾರಿ ಶ್ರೀ ರಾಮಾನುಜಾಚಾರ್ಯರು ಸಮಾಜದಲ್ಲಿನ ಅಂದಿನ ಅಂಕು ಡೊಂಕುಗಳನ್ನು ತಿದ್ದಿದ ಪರಿಣಾಮ ಇಂದು ದೇವಾಲಯಗಳಲ್ಲಿ ಬಡವ ಬಲ್ಲಿದ, ಜಾತಿ ಎನ್ನದೆ ಎಲ್ಲರೂ ಆ ಭಗವಂತನ ದರ್ಶನ ಮಾಡಿ ಸೇವೆ ಮಾಡಲು ಇಲ್ಲಿ ಸೇರುವಂತಾಗಿದೆ ಎಂದರು. ಶ್ರೀನಿವಾಸನು ತಿರುಪತಿಯಲ್ಲಿ ಮಾತ್ರವೇ ಇಲ್ಲ, ಭಕ್ತರಿಗೆ ದರ್ಶನ ಮಾಡಲು ದೇಶದ ನಾನಾ ಕಡೆ ನೆಲೆಸಿದ್ದು, ಇಲ್ಲೂ ಆತನೇ ಇದ್ದಾನೆ. ಆತನ ದರ್ಶನಕ್ಕೆ ಇಲ್ಲಿಗೆ ಬಂದಿದ್ದು ನನಗೆ ಅತೀವ ಸಂತಸ ತಂದಿದೆ ಎಂದರು.
ಪ್ರತಿ ನಿತ್ಯ ಭಗವಂತನ ನಾಮ ಜಪ ಮಾಡಬೇಕು. ಪಾರಾಯಣ ವೇದ ಸ್ತೋತ್ರ ಎಂದರೆ ಮತ್ತೇನೂ ಇಲ್ಲ ಭಗವಂತನ ದರ್ಶನ ಮಾಡಿ ಆತನ ಗುಣಗನ ಮಾಡುವುದಷ್ಟೆ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು. ದೇವಾಲಯದಲ್ಲಿ ಪೂಜೆ, ಆಶೀರ್ವಚನ ನಂತರ ಬೆಟ್ಟದ ಮೇಲೆ ಹತ್ತಿ ಅಲ್ಲಿನ ಮೂಲ ದೇವರಿಗೆ ಪೂಜೆ ಸಲ್ಲಿಸಿದರು. ಬೆಟ್ಟದ ಮೇಲೆಕ್ಕೆ ಹತ್ತಲು ಭಕ್ತರಿಗೆ ನೆರವಾಗುವಂತೆ ರಸ್ತೆ ನಿರ್ಮಿಸಲು ಶ್ರೀಗಳು ದೇವಾಲಯದ ಅಭಿವೃದ್ದಿ ಸಮಿತಿಗೆ ಕೋರಿದರು.