ಪುನರ್ ನಿರ್ಮಾಣ ದೇವಾಲಯದ ವೀಕ್ಷಿಸಿದ ತಹಸೀಲ್ದಾರ್
1 min readಪುನರ್ ನಿರ್ಮಾಣ ದೇವಾಲಯದ ವೀಕ್ಷಿಸಿದ ತಹಸೀಲ್ದಾರ್
ಫೆಬ್ರವರಿಯಲ್ಲಿ ಪುನರ್ ಪ್ರತಿಷ್ಠಾಪನೆಗೆ ಮುಹೂರ್ತ
ಶಿಡ್ಲಘಟ್ಟ ನಗರದ ಕೋಟೆ ವೃತ್ತದ ಬಳಿ ಪುನರ್ ನಿರ್ಮಾಣವಾಗುತ್ತಿರುವ ಶ್ರೀಕೋಟೆ ಸೋಮೇಶ್ವರಸ್ವಾಮಿ ದೇವಾಲಯ ಕಾಮಗಾರಿಯನ್ನು ತಹಶೀಲ್ದಾರ್ ಬಿ.ಎನ್.ಸ್ವಾಮಿ ವೀಕ್ಷಿಸಿದರು.
ಕೋಟೆ ವೃತ್ತದ ಪುರಾಣ ಪ್ರಸಿದ್ದ ಶ್ರೀಸೋಮೇಶ್ವರ ದೇವಾಲಯದ ಜೀರ್ಣೋದ್ದಾರ ಕೆಲಸ ಭರದಿಂದ ಸಾಗಿದೆ. ಮುಜರಾಯಿ ಇಲಾಖೆಗೆ ಸೇರಿದ, ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಶಿಥಿಲವಾಗಿದ್ದು, ಪೂಜೆಗಳು ನಿಂತಿತ್ತು. ಇದೀಗ ದೇವಾಲಯ ಎರಡು ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಶಿವರಾತ್ರಿ ಹಬ್ಬದ ವೇಳೆಗೆ ಜೀರ್ಣೋದ್ಧಾರ, ಪುನರ್ ಪ್ರತಿಷ್ಠಾನೆ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಈ ಸಂಬ0ಧ ದೇವಾಲಯ ಕಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತಹಶೀಲ್ದಾರ್ ಬಿ.ಎನ್.ಸ್ವಾಮಿ ವೀಕ್ಷಿಸಿದರು.
ಈ ಸಂದರ್ಧದಲ್ಲಿ ಮಾತನಾಡಿದ ತಹಶೀಲ್ದಾರ್ ಬಿ.ಎನ್.ಸ್ವಾಮಿ, ದೇವಾಲಯದ ಭಕ್ತರು ಹಾಗೂ ನಗರದ ಪ್ರಮುಖರನ್ನೊಳಗೊಂಡ ಶ್ರೀಕೋಟೆ ಸೋಮೇಶ್ವರಸ್ವಾಮಿ ದೇವಾಲಯ ಅಭಿವೃದ್ದಿ ಟ್ರಸ್ಟ್ ರಚಿಸಿ ಸರ್ಕಾರ, ಭಕ್ತರು, ದಾನಿಗಳು, ಸ್ಥಳೀಯ ಶಾಸಕರು ಸೇರಿದಂತೆ ಹಲವರಿಂದ ಹಣ ಸಂಗ್ರಹಿಸಿ ದೇವಾಲಯ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಸುಂದರವಾಗಿ ದೇವಾಲಯ ನಿರ್ಮಾಣವಾಗುತ್ತಿದೆ. ಇಡೀ ತಾಲ್ಲೂಕಿನಲ್ಲಿ ಅತ್ಯಂತ ಆಕರ್ಷಕ ದೇವಸ್ಥಾನ ಇದಾಗಲಿದೆ ಎಂದರು.
ಈಗಾಗಲೆ ದೇವಾಲಯದ ಗರ್ಭಗುಡಿ, ಗೋಪುರ, ಪ್ರಾಂಗಣ, ಸಭಾಂಗಣ, ದೇವಾಲಯದ ಎದುರು ಧ್ವಜ ಸ್ತಂಭ ನಿರ್ಮಾಣ ಪೂರ್ಣಗೊಂಡಿದೆ. ದೇವಾಲಯದ ಪಕ್ಕದಲ್ಲಿ ಅರ್ಚಕರಿಗೆ ವಾಸದ ಮನೆ, ಪ್ರಸಾದ ವಿತರಣೆ ಸಭಾಂಗಣ, ಕಚೇರಿಯನ್ನು ನಿರ್ಮಿಸಲಾಗಿದೆ. ಎಲ್ಲವನ್ನೂ ಕಲ್ಲಿನಲ್ಲಿ ನಿರ್ಮಿಸಿದ್ದು, ಸುಂದರ ಕೆತ್ತನೆ ಕಣ್ಮನ ಸೆಳೆಯುತ್ತಿದೆ. ಕಳೆದ ಒಂದು ವರ್ಷದಿಂದಲೂ ನಿರಂತರವಾಗಿ ದೇವಾಲಯ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈಗಾಗಲೆ ಶೇ ೭೫ ರಷ್ಟು ಮುಗಿದಿದೆ. ಫೆಬ್ರವರಿ ಒಳಗೆ ಬಾಕಿ ಕಾಮಗಾರಿ ಮುಗಿಸಿ ಜೀರ್ಣೋದ್ದಾರಗೊಳಿಸಿ ದೇವಾಲಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಲು ದೇವಾಲಯ ಅಭಿವೃದ್ದಿ ಟ್ರಸ್ಟ್ ಉದ್ದೇಶಿಸಿದೆ ಎಂದರು.