ಕಂದವಾರ ಕೆರೆಯ ಸ್ವಚ್ಛತೆ ಮರೆತ ಇಲಾಖೆಗಳು
1 min readಕಂದವಾರ ಕೆರೆಯ ಸ್ವಚ್ಛತೆ ಮರೆತ ಇಲಾಖೆಗಳು
ಯುಜಿಡಿ ನೀರು ಹರಿಯುವುದನ್ನು ನಿಲ್ಲಿಸದ ನಗರಸಭೆ
ಕುಡುಕರ ಹಾವಳಿಗೆ ಕಡಿವಾಣವೇ ಇಲ್ಲದ ಸ್ಥಿತಿ
ಗಿಡ ಗಂಟಿಗಳು ಬೆಳೆದು ಕಾಣೆಯಾದ ವಾಕಿಂಗ್ ಪಾತ್
ಕಂದವಾರ ಕೆರೆ ಈವರೆಗೂ ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊ0ಡಿದ್ದ ಕೆರೆ. ಇದೀಗ ಕಂದವಾರ ಗ್ರಾಮ ನಗರಸಭೆಗೆ ಸೇರಿದ ನಂತರ ಅದು ನಗರದ ಒಳಗೇ ಇರುವ ಕೆರೆಯಾಗಿದೆ. ಈ ಕೆರೆಗೆ ಎಚ್‌ಎನ್ ವ್ಯಾಲಿ ತ್ಯಾಜ್ಯ ನೀರು ತುಂಬಲಾಗುತ್ತಿದೆ. ಯಾವಾಗ ಎಚ್‌ಎನ್ ವ್ಯಾಲಿ ನೀರು ಕಂದವಾರ ಕೆರೆಗೆ ಹರಿಯಿತೋ ಅಂದಿನಿ0ದಲೇ ಕೆರೆಯಲ್ಲಿ ಜಂಡು ಬೆಳೆಯುವುದು ಆರಂಭವಾಗಿದ್ದು, ಅದರ ಸ್ವಚ್ಛತೆಗೆ ಸಂಬ0ಧಿಸಿದ ಇಲಾಖೆಗಳು ಗಮನವೇ ಹರಿಸಿಲ್ಲ.
ಹೌದು ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊAಡೇ ಇರುವ ಕಂದವಾರ ಕೆರೆ ಇದೀಗ ತ್ಯಾಜ್ಯ ಗಿಡಗಳ ಬೆಳವಣಿಗಾ ಕೇಂದ್ರವಾಗಿ ಪರಿಣಮಿಸಿದೆ. ಈ ಕೆರೆಯಲ್ಲಿ ಅಸ್ವಾಭಾವಿಕವಾದ ಜಂಡಿನ ಗಿಡಗಳು ಬೆಳೆದು ಕೆರೆಯನ್ನು ಸಂಪೂರ್ಣವಾಗಿ ಆವರಿಸುತ್ತಿದ್ದು, ಇದರ ಸ್ವಚ್ಛತೆಗಾಗಿ ಸಂಬ0ಧಿಸಿದ ಇಲಾಖೆಗಳು ಗಮನವೇ ಹರಿಸಿಲ್ಲ. ಇದರಿಂದಾಗಿ ಕೆರೆಯಲ್ಲಿ ಹಿಸಿರು ಕಾಣುತ್ತದೆಯಾದರೂ ಅದು ಆರೋಗ್ಯಕರವಾದುದಲ್ಲ ಎಂಬ ಆತಂಕ ಜನರನನು ಕಾಡುತ್ತಿದೆ.
ವೀಕ್ಷಕರೇ, ಇಲ್ಲಿ ಕಾಣುತ್ತಿದೆಯಲ್ಲಾ, ಈ ಹಸಿರು, ಇದನ್ನು ಕಂಡು ಇದು ಯಾವುದೋ ಹುಲ್ಲುಗಾವಲು ಎಂದು ತಿಳಿಯಬೇಡಿ. ಯಾಕೆಂದರೆ ಇದು ಕಂದವಾರ ಕೆರೆಯಲ್ಲಿ ಬೆಳೆದಿರುವ ಜಂಡಿನ ಗಿಡಗಳು. ಇದನ್ನು ಯಾವುದೇ ಪ್ರಾಣಿ ತಿನ್ನುವುದಿರಲಿ, ಮೂಸಿಯೂ ನೋಡಲ್ಲ. ಇನ್ನು ಈ ಜಂಡು ಬೆಳೆಯುವುದರಿಂದ ಕೆರೆಯಲ್ಲಿ ನೀರು ಶೇಖರಣಾ ಪ್ರಮಾಣವೂ ಕಡಿಮೆಯಾಗಲಿದೆ. ಎಲ್ಲೋ ಒಂದು ಮೂಲೆಯಲ್ಲಿದ್ದ ಈ ಜಂಡು ಇದೀಗ ಇಡೀ ಕೆರೆಯನ್ನು ಆವರಿಸುತ್ತಿದ್ದು, ಇದರ ಸ್ವಚ್ಛತೆ ಯಾರ ಜವಾಬ್ದಾರಿ ಎಂಬುದೂ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಚಿಕ್ಕಬಳ್ಳಾಪುರ ನಗರಸಭೆಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವಾಗಿದೆ. ಯಾಕೆ ಅಂತೀರಾ, ಕಳೆದ ಹಲವು ತಿಂಗಳುಗಳಿAದ ನಿರಂತರವಾಗಿ ಯುಜಿಡಿ ನೀರು ಇದೇ ಕಂದವಾರ ಕೆರೆಗೆ ಹರಿಯುತ್ತಿದೆ. ಈ ಸಂಬAಧ ಸುದ್ದಿಯೂ ಆಗಿದೆ. ಸ್ಥಳೀಯರು ಇದನ್ನು ಸಹಿಸಲಾರದೆ ನಗರಸಭೆಗೆ ಹಲವಾರು ಬಾರಿ ದೂರುಗಳನ್ನೂ ನೀಡಿದ್ದಾರೆ. ಆದರೂ ನಗರಸಭೆ ಮಾತ್ರ ಎಚ್ಚೆತ್ತಿಲ್ಲ, ಕೆರೆಗೆ ಹರಿಯುತ್ತಿರುವ ಯುಜಿಡಿ ನೀರು ತಡೆಯುವ ಕನಿಷ್ಠ ಪ್ರಯತ್ನವನ್ನೂ ಮಾಡಿಲ್ಲ.
ಹೆಬ್ಬಾಳ ಮತ್ತು ನಾಗವಾರ ಕೆರೆಗಳ ತ್ಯಾಜ್ಯ ನೀರು ಎರಡು ಹಂತದಲ್ಲಿ ಶುದ್ಧೀಕರಿಸಿ ಕಂದವಾರ ಕೆರೆಗೆ ಹರಿಸಲಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರ ನಗರದ ನಾಲ್ಕು ವಾರ್ಡುಗಳ ಯುಜಿಡಿ ನೀರು ನೇರವಾಗಿಯೇ ಕಂದವಾರ ಕೆರೆಗೆ ಹರಿಯುತ್ತಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದ್ದು, ಸ್ಥಳೀಯರು ನಿರಂತರವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಹೀಗೆ ಕೆರೆಗೆ ಹರಿಯುತ್ತಿರುವ ಯುಜಿಡಿ ನೀರು ತಡೆಯುವಂತೆ ಹಲವು ಬಾರಿ ಮನವಿ ಮಾಡಿದರೂ ನಗರಸಭೆ ಮಾತ್ರ ಅತ್ತ ಗಮನವೂ ಹರಿಸಿಲ್ಲ.
ಇನ್ನು ಕಂದವಾರ ಕೆರೆಯಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರು ತುಂಬಿಕೊAಡಿರುವ ಕಾರಣ ಈ ಕೆರೆಯ ಸುತ್ತ ಕುಡುಕರ ಅಡ್ಡೆಯಾಗಿ ಬದಲಿಸಿಕೊಳ್ಳಲಾಗಿದೆ. ಪುಂಡರು ಮದ್ಯವನ್ನು ತಂದು ಕಂದವಾರ ಕೆರೆ ಕೋಡಿ ಸಮೀಪದಲ್ಲಿಯೇ ಕುಳಿತು ಸೇವನೆ ಮಾಡಿ, ಅಲ್ಲೆಲ್ಲ ಅವರು ತಂದಿರುವ ಆಹಾರ ಪದಾರ್ಥದ ಪಾರ್ಸೆಲ್ ಪ್ಲಾಸ್ಟಿಕ್ ಬಿಸಾಡಿ ಹೋಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ಕೆರೆಯ ಸುತ್ತಮುತ್ತಲ ಪ್ರದೇಶವೆಲ್ಲ ಮದ್ಯದ ಪೌಚಟ್‌ಗಳಿಂದಲೇ ತುಂಬಿದ್ದು, ಇತ್ತ ಗಮನ ಹರಿಸುವವರೂ ಇಲ್ಲವಾಗಿದ್ದಾರೆ.
ಪೊಲೀಸರು ಸಂಜೆಯ ವೇಳೆ ಈ ಕಂದವಾರ ಕೆರೆಯ ಸುತ್ತ ಒಂದು ಸುತ್ತುಹಾಕಬೇಕಾದ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯಕು. ಪ್ರತಿನಿತ್ಯ ಕೆರೆಯ ಸುತ್ತ ಪುಂಡರು ಸೇರಿ ಮದ್ಯ ಸೇವಿಸುವುದು ಸಾಮಾನ್ಯವಾಗಿದ್ದು, ಈ ರಸ್ತೆಯಲ್ಲಿ ಸಂಜೆ ವೇಳೆ ಸಂಚರಿಸಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ದರೂ ಪೊಲೀಸ್ ಇಲಾಖೆ ಮಾತ್ರ ಇತ್ತ ಗಮನ ಹರಿಸದ ಕಾರಣ ಪುಂಡರಿಗೆ ಆಡಿದ್ದೇ ಆಟ ಎಂಬ0ತಾಗಿದೆ. ಈಗಲಾದರೂ ಪೊಲೀಸ್ ಇಲಾಖೆ ಇತ್ತ ಗಮನ ಹರಿಸಿ, ಸಂಜೆ ವೇಳೆ ಕಂದವಾರ ಕೆರೆಯ ಪ್ರದೇಶದಲ್ಲಿ ಮದ್ಯ ಸೇವನೆ ಮಾಡುವ ಪುಂಡರ ಹೆಡೆಮುರಿ ಕಟ್ಟಲು ಮುಂದಾಗಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ.