ರೇಷನ್ ಕಾರ್ಡ್ ರದ್ದು ಮಾಡುವುದನ್ನು ತಕ್ಷಣ ನಿಲ್ಲಿಸಿ
1 min readರೇಷನ್ ಕಾರ್ಡ್ ರದ್ದು ಮಾಡುವುದನ್ನು ತಕ್ಷಣ ನಿಲ್ಲಿಸಿ
ರದ್ದು ಮಾಡಿದ ಎಲ್ಲ ಕಾರ್ಡ್ ವಾಪಸ್ ನೀಡಲು ಒತ್ತಾಯ
ಬಾಗೇಪಲ್ಲಿಯಲ್ಲಿ ಕೃಷಿ ಕೂಲಿ ಕಾರ್ಮಿಕರಿಂದ ಬೃಹತ್ ಜಾಥಾ
ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಲಿಕಾರ್ಮಿಕರ, ರೈತರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿ, ಬಡವರ ಅನ್ನ ಮತ್ತು ಆರೋಗ್ಯ ಸೌಲಭ್ಯ ಕಸಿದುಕೊಳ್ಳುತ್ತಿವೆ ಎಂದು ಆರೋಪಿಸಿ ಬಾಗೇಪಲ್ಲಿಯಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಇಂದು ಬೃಹತ್ ಬೈಕ್ ಜಾಥಾ ನಡೆಸಲಾಯಿತು.
ಬಾಗೇಪಲ್ಲಿ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಕೆ. ನಾಗರಾಜ್, ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಡವರನ್ನು ಬೀದಿಗೆ ತರಲು ಯತ್ನಿಸುತ್ತಿವೆ. ಬಿಪಿಎಲ್ ಕಾರ್ಡಿನ ಪಡಿತರ ಅಕ್ಕಿ ತಿಂದು ಬದುಕುತ್ತಿರುವ ಬಡವರಿಗೆ ಇರುವ ಕಾರ್ಡನ್ನು ರದ್ದುಗೊಳಿಸಿ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.
ಬಡವರ ರೇಷನ್ ಕಾರ್ಡ್ ರದ್ದು ಮಾಡುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಆರೋಗ್ಯ ಸೌಲಭ್ಯಗಳು ದೊರೆಯುವುದಿಲ್ಲ. ಇಂತಹ ಅವೈನಿಕ ಮತ್ತು ಅಸಂವಿಧಾನಿಕ ನಿರ್ಧರಗಳಿಂದ ತಾಲೂಕಿನಲ್ಲಿ ಸುಮಾರು ಒಂದು ಸಾವಿರ ಬಿಪಿಎಲ್ ಕಾರ್ಡ್ ರದ್ದು ಮಾಡಿ, ಬಡವರನ್ನು ಬೀದಿಗೆ ತರುವ ಕೆಲಸ ಸರಕಾರಗಳು ಮಾಡುತ್ತಿವೆ. ಕೂಡಲೇ ಇಂತಹ ನಿರ್ಧಾರ ಕೈಬಿಡಬೇಕು. ಯಾವುದೇ ಬಡವನಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಕೂಲಿಕಾರ್ಮಿಕರ ಸಂಘಟನೆ ಬೃಹತ್ ಪ್ರತಿಭಟನೆ ನಡೆಸಿ ಸರಕಾರಗಳಿಗೆ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಐಎಡಬ್ಲೂಯು ರಾಜ್ಯ ಉಪಾಧ್ಯಕ್ಷ ಎಂ.ಪಿ ಮುನಿವೆಂಕಟಪ್ಪ ಮಾತನಾಡಿ, ರಾಜ್ಯದಲ್ಲಿ ಸಿದ್ಧರಾಮಯ್ಯನವರು ಬಡವರ ಪರ ಸರಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಬಡವರಿಗೆ ಇರುವ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತಿರುವುದು ಯಾಕೆ, ನಿಮಗೆ ನಿಜವಾಗಿಯೂ ಬಡವರ ಪರ ಕಾಳಜಿ ಇದ್ದರೆ ಕೇಂದ್ರ ಸರಕಾರಕ್ಕೆ ಸೆಡ್ಡು ಹೊಡೆದು ಮತ್ತಷ್ಟು ಬಡವರಿಗೆ ಕಾರ್ಡುಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ನೀವು ಶ್ರೀಮಂತರ ಕಾರ್ಡ್ ರದ್ದು ಮಾಡುತ್ತಿರುವುದಾಗಿ ಉತ್ತರಿಸುತ್ತೀರಿ. ಹಾಗಾದರೆ ಬಡವರ ಕಾರ್ಡುಗಳಿಗೆ ಶ್ರೀಮಂತರಿಗೆ ಏಕೆ ಕೊಟ್ಟಿದ್ದೀರಿ, ಇಂತಹ ಕೃತ್ಯವೆಸಗಿದವರ ವಿರುದ್ಧ ನಿಮ್ಮ ಕ್ರಮವೇನು ಎಂದು ಪ್ರಶ್ನಿಸಿದರು.
ಸಿಪಿಎಂ ತಾಲೂಕು ಕಾರ್ಯದರ್ಶಿ ರಘುರಾಮರೆಡ್ಡಿ ಮಾತನಾಡಿ, ಕೇಂದ್ರ ಸರಕಾರ ಬಡವರಿಗೆ ಅನುಕೂಲವಾದ ಸಾರ್ವಜನಿಕ ಉದ್ಯಮಗಳನ್ನು ಸಂಪೂರ್ಣ ಅದೋಗತಿಗೆ ತಂದು, ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಮೂಲಕ ಬಡವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿವೆ ಎಂದು ಆಕ್ರೋಶ ಹೊರ ಹಾಕಿದರು.
ಅರ್ಜಿ ಹಾಕಿರುವ ಎಲ್ಲಾ ಅರ್ಹ ಬಡವರಿಗೆ ತಕ್ಷಣ ಬಿಪಿಎಲ್ ರೇಷನ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಪತಿ ಬಿಪಿಎಲ್ ಕಾರ್ಡ್ಗೆ ೩೫ ಕೆ ಜಿ ಅಕ್ಕಿ ಮತ್ತು ಅಗತ್ಯ ಇರುವ ೧೪ ಆಹಾರ ವಸ್ತುಗಳನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಬೇಕು.ಅರ್ಹ ಬಡವರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಗೆ ಮಾಡಿರುವುದನ್ನು ತಕ್ಷಣ ವಾಪಸ್ ಪಡೆಯಬೇಕು.
ಈಗಾಗಲೇ ರದ್ದು ಪಡಿಸಿರುವ ಅರ್ಹ ಬಿಪಿಎಲ್ ಕಾರ್ಡ್ಳನ್ನು ತಕ್ಷಣ ಬಡವರಿಗೆ ಹಂಚಿಕೆ ಮಾಡಬೇಕು. ಬಿಪಿಎಲ್ ಕಾರ್ಡ್ಗಳಿಗೆ ಹಾಕಿರುವ ೮ ಅವೈನಿಕ ಮಾನದಂಡಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿ.ಸಾವಿತ್ರಮ್ಮ, ಎಂ.ಎನ್.ರಘುರಾಮ ರೆಡ್ಡಿ, ಚನ್ನರಾಯಪ್ಪ, ವಾಲ್ಮೀಕಿ ಅಶ್ವಥಪ್ಪ, ಜಿ. ಕೃಷ್ಣಪ್ಪ, ಮುನಿಯಪ್ಪ ಮುಸ್ತಾ, ಡಿ.ಸಿ.ಶ್ರೀನಿವಾಸ್, ಮಂಜುನಾಥ್ ಇದ್ದರು.